ಮಿರ್ಜಾಪುರ, ಮಾ 19: ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷವನ್ನು ಬಲಗೊಳಿಸುವ ಉದ್ದೇಶ ಹೊಂದಿರುವ ಪೂರ್ವ ಉತ್ತರಪ್ರದೇಶದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ‘ಗಂಗಾ ಯಾತ್ರೆ’ ಮುಂದುವರಿಸಿದ್ದು, ಮಂಗಳವಾರ ಮಿರ್ಜಾಪುರ ತಲುಪಿದರು.
ರಸ್ತೆ ಮಾರ್ಗವಾಗಿ ವಿಂಧ್ಯವಾಸಿನಿ ದೇವಾಲಯ ತಲುಪಿದ ಅವರು, ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕಾಂತಿ ಶರೀಫ್ ದರ್ಗಾಕ್ಕೆ ಭೇಟಿ ನೀಡಿದರು. ಸುಮಾರು 5 ಗಂಟೆ ತಡವಾಗಿ ತಲುಪಿದ್ದರಿಂದ ಈ ಮೊದಲೇ ಯೋಜಿಸಿದ್ದ ವಿಶ್ವವಿಖ್ಯಾತ ತ್ರಿಕೋನ ಪರಿಕ್ರಮ ಕೈಬಿಡಲಾಯಿತು.
ಪ್ರಿಯಾಂಕಾ ಭೇಟಿ ಹಿನ್ನೆಲೆಯಲ್ಲಿ ವಿಂಧ್ಯವಾಸಿನಿ ದೇವಾಲಯಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಾಬಲ್ಯವಿರುವೆಡೆ ಗಂಗಾ ಯಾತ್ರೆ ಕೈಗೊಂಡಿರುವ ಪ್ರಿಯಾಂಕಾ, ಪ್ರಯಾಗ್ ರಾಜ್ ನಿಂದ ವಾರಾಣಸಿಗೆ ಗಂಗಾ ನದಿ ಮಾರ್ಗವಾಗಿ ಭೇಟಿ ನೀಡಲಿದ್ದಾರೆ.