ವಾಲ್ಮೀಕಿ ಸಮಾಜದವರ ಮೇಲಿನ ಹಲ್ಲೆ ಖಂಡಿಸಿ ಪತ್ರಿಕಾಗೋಷ್ಠಿ 21 ಆರೋಪಿಗಳ ಬಂಧನಕ್ಕೆ ಮಲ್ಲಿಕಾರ್ಜುನ ಬಟಗಿ ಆಗ್ರಹ
Press Conference Condemns Attack on Valmiki Community
ವಿಜಯಪುರ, ಆ.19: ಜಿಲ್ಲೆಯ ತಾಳಿಕೋಟಿ ತಾಲೂಕಿನ ಗುಂಡಕನಾಳ ಗ್ರಾಮದಲ್ಲಿ ವಾಲ್ಮೀಕಿ ಸಮಾಜದ ಅಮಾಯಕ ಮಹಿಳೆಯರು, ಮಕ್ಕಳು ಹಾಗೂ ಸಾರ್ವಜನಿಕರ ಮೇಲೆ ನಡೆದ ಭೀಕರ ಹಲ್ಲೆಯನ್ನು ಅಖಿಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ, ಹಲ್ಲೆಯಲ್ಲಿ ಗಾಯಗೊಂಡು ವಿಜಯಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೇವಮ್ಮಾ ಪಾಳೇಗಾರ, ಶಿವಪುತ್ರ ಗಸ್ತಿಗಾರ, ಬಸವರಾಜ ಗಸ್ತಿಗಾರ ಹಾಗೂ ಮಲ್ಲು ಗಸ್ತಿಗಾರ ಸೇರಿದಂತೆ 15ಕ್ಕೂ ಹೆಚ್ಚು ಸಂತ್ರಸ್ತರನ್ನು ಭೇಟಿ ಮಾಡಿ ಧೈರ್ಯ ತುಂಬಿರುವುದಾಗಿ ತಿಳಿಸಿದರು.
ಶೋಷಿತ ಸಮುದಾಯಗಳ ರಕ್ಷಣೆ ಹಾಗೂ ಅವರ ಹಕ್ಕುಗಳ ಸಂರಕ್ಷಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಸಂತ್ರಸ್ತ ಕುಟುಂಬಗಳ ಸ್ವಾವಲಂಬಿ ಜೀವನಕ್ಕಾಗಿ ಹಿಟ್ಟಿನ ಗಿರಣಿ, ಖಾರ ಕುಟ್ಟುವ ಯಂತ್ರಗಳು ಹಾಗೂ ದಿನಸಿ ಅಂಗಡಿಗಳನ್ನು ಕೂಡಲೇ ಒದಗಿಸಬೇಕು. ಸಮಾಜ ಕಲ್ಯಾಣ ಇಲಾಖೆ ತಕ್ಷಣವೇ ನೇತೃತ್ವ ವಹಿಸಿ ತನ್ನ ಲೋಪಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಕೊಲೆ ಯತ್ನ ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಎ-1 ಆರೋಪಿ ಬಸವಂತ್ರಾಯ ಬಾಬುಸಾಹುಕಾರ ಲಕ್ಕಂಡಿ ಸೇರಿದಂತೆ ಎಲ್ಲ 21 ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು.
ಏಕಪಕ್ಷೀಯವಾಗಿ ನಡೆದುಕೊಂಡು ಸುಳ್ಳು ಕೌಂಟರ್ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿರುವ ಬಸವನ ಬಾಗೇವಾಡಿ ವಿಭಾಗದ ಡಿಎಸ್‌ಪಿ ನಂದರೆಡ್ಡಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ, ಸುಳ್ಳು ಪ್ರಕರಣಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಗ್ರಾಮದಲ್ಲಿ ಭಯಮುಕ್ತ ವಾತಾವರಣ ನಿರ್ಮಿಸಲು ತಕ್ಷಣ ಡಿಆರ್ ವ್ಯಾನ್ ನಿಯೋಜಿಸಿ ಶಾಶ್ವತ ಭದ್ರತೆ ಒದಗಿಸಬೇಕು. ಪ್ರತಿ ಸಂತ್ರಸ್ತ ಕುಟುಂಬಕ್ಕೆ ₹25 ಲಕ್ಷ ಆರ್ಥಿಕ ಪರಿಹಾರ, ತಲಾ 5 ಎಕರೆ ಕೃಷಿ ಜಮೀನು ಮಂಜೂರು ಮಾಡಬೇಕು. ಗಾಯಾಳುಗಳಿಗೆ ಸಂಪೂರ್ಣ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಬೇಕು ಎಂದು ಬಟಗಿ ಒತ್ತಾಯಿಸಿದರು.
ಈ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದಿದ್ದರೆ ಜಿಲ್ಲಾದ್ಯಂತ ಬೃಹತ್ ಹೋರಾಟ ರೂಪಿಸುವುದಾಗಿ ಮಲ್ಲಿಕಾರ್ಜುನ ಬಟಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗೌಡಪ್ಪ ಬಡಿಗೇರ, ಅನಿಲ ಇಕಡೆ, ಜಗದೇವ ಸೂರ್ಯವಂಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 