ಜೋಗಿ ಸಮುದಾಯದ ಜನಪದ ಕಲೆ, ಸಂಸ್ಕೃತಿ ಸಂರಕ್ಷಣೆ ಅಗತ್ಯ: ಡಾ. ಆನಂದಪ್ಪ

ಜೋಗಿ ಸಮುದಾಯದ ಜನಪದ ಕಲೆ, ಸಂಸ್ಕೃತಿ ಸಂರಕ್ಷಣೆ ಅಗತ್ಯ: ಡಾ. ಆನಂದಪ್ಪ Preservation of the folk art and culture of the Jogi community is essential: Dr. Anandappa

ಲೋಕದರ್ಶನ ವರದಿ 

 ಧಾರವಾಡ, ಜು.15: ಜೋಗಿ ಬುಡಕಟ್ಟು ಸಮುದಾಯವು ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು, ಜನಪದ ಕಲೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಸಮೃದ್ಧವಾಗಿ ಉಳಿಸಿಕೊಂಡಿದೆ ಎಂದು ಗೊಟಗೋಡಿ ಜನಪದ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಆನಂದಪ್ಪ ಬಿ.ಎಚ್‌. (ಜೋಗಿ) ಹೇಳಿದರು.  

ಕರ್ನಾಟಕ ವಿದ್ಯಾವರ್ಧಕ ಸಂಘದ ಕಲೆ ಮತ್ತು ಜನಪದ ಮಂಟಪ ವತಿಯಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ "ಬುಡಕಟ್ಟು ಜೋಗಿ ಸಮುದಾಯದ ಅಸ್ಮಿತೆ" ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.  

ಜೋಗಿ ಸಮುದಾಯದಲ್ಲಿ 27 ಉಪಪಂಗಡಗಳಿದ್ದು, ಈ ಸಮುದಾಯದವರು ಜನಪದ ಕಲೆ, ಹಾಡುಗಳು ಹಾಗೂ ಸಂಸ್ಕೃತಿಯ ಮೂಲಕ ನಾಡು-ನುಡಿ, ನೆಲ-ಜಲ ಮತ್ತು ಜೀವನ ಮೌಲ್ಯಗಳನ್ನು ಉಳಿಸಿಕೊಂಡಿದ್ದಾರೆ. ಅವರ ಪರಂಪರೆಯ ಜ್ಞಾನ ಹಾಗೂ ಜನಪದ ಸಾಹಿತ್ಯವು ಸಮಾಜಕ್ಕೆ ಮಾರ್ಗದರ್ಶಿಯಾಗಿದೆ ಎಂದು ಹೇಳಿದರು.

ಜೋಗಿ ಕಲಾವಿದರ ಜನಪದ ಕಲೆ, ವೇಷಭೂಷಣ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಉಳಿಸಿ ಬೆಳೆಸಲು ಸರ್ಕಾರ ಹಾಗೂ ಸಮಾಜದಿಂದ ಹೆಚ್ಚಿನ ಸಹಕಾರ, ಪ್ರೋತ್ಸಾಹ ಮತ್ತು ಸಂರಕ್ಷಣೆ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಕೋಶಾಧ್ಯಕ್ಷ ಸತೀಶ ತುರುವಮರಿ ವಹಿಸಿ ಮಾತನಾಡಿ, ಜನಪದ ಸಾಹಿತ್ಯವು ಸಮಾಜದ ಮೌಲ್ಯಗಳನ್ನು ಪ್ರತಿಬಿಂಬಿಸುವ ಶಕ್ತಿಯುತ ಮಾಧ್ಯಮವಾಗಿದ್ದು, ಜೋಗಿ ಸಮುದಾಯದ ಕೊಡುಗೆ ವಿಶಿಷ್ಟವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ 2025-26ನೇ ಸಾಲಿನ ಕಲೆ ಮತ್ತು ಜನಪದ ಮಂಟಪದ ಸಲಹಾ ಸಮಿತಿ ಸದಸ್ಯರಿಗೆ ಪ್ರಮಾಣಪತ್ರ ವಿತರಿಸಲಾಯಿತು.   ಜಯಶ್ರೀ ಪಾಟೀಲ ಪ್ರಾರ್ಥಿಸಿದರು. ಭೀಮಪ್ಪ ಖಟಾವಿ ಸ್ವಾಗತಿಸಿದರು. ಡಾ. ಮಹೇಶ್ ಧ. ಹೊರಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಭಾವಿಕಟ್ಟಿ ನಿರೂಪಿಸಿ, ಶ್ರೀನಿವಾಸ ಪಾಟೀಲ ವಂದಿಸಿದರು.  

ಕಾರ್ಯಕ್ರಮದಲ್ಲಿ ಆರ್‌.ಎಸ್‌. ಬಾಳನಗೌಡರ, ಮೋಹನ ಪಾಟೀಲ, ಗಣಪತಿ ಬಡಿಗೇರ, ಲಾಲಸಾಬ್ ಬೂದಿಹಾಳ, ಕಲ್ಲನಗೌಡ ಸಿದ್ದಾಪೂರ, ಡಾ. ವೀಣಾ ಬಿರಾದಾರ, ಶ್ರೀಮತಿ ಶೋಭಾ ಸಜ್ಜನ, ಸದಾಶಿವ ಚೌಶೆಟ್ಟಿ, ಪ್ರಕಾಶ ಮಲ್ಲಿಗವಾಡ, ಬಿ.ಎಂ. ಈಳಿಗೇರ, ಶಿವಣ್ಣ ಬೆಂಗೇರಿ, ಸಿದ್ದರಾಮ ಹಿಪ್ಪರಗಿ, ಮಡಿವಾಳಪ್ಪ ಹೆಗ್ಗೇರಿ, ಎಂ.ಜಿ. ವಸ್ತ್ರದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.