ಗಣರಾಜ್ಯೋತ್ಸವಕ್ಕೆ ಮಾಣಿಕ ಷಾ ಪರೇಡ್‌ ಮೈದಾನದಲ್ಲಿ ಸಕಲ ಸಿದ್ಧತೆ: 10 ಸಾವಿರ ಆಸನಗಳ ವ್ಯವಸ್ಥೆ; ಪೌರ ಕಾರ್ಮಿಕರಿಂದಲೂ ಪಥಸಂಚಲನ

ಬೆಂಗಳೂರು, ಜ.24:         ಈ ಸಾಲಿನ ಗಣರಾಜ್ಯೋತ್ಸವ ದಿನಾಚರಣೆಯ ರಾಜ್ಯಮಟ್ಟದ ಸಮಾರಂಭ ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್‌ ಮೈದಾನದಲ್ಲಿ ನಡೆಯಲಿದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ತಿಳಿಸಿದ್ದಾರೆ.

ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಗಳನ್ನು ವೀಕ್ಷಿಸಿದ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ 26ರಂದು ಬೆಳಗ್ಗೆ 8.58ಕ್ಕೆ ರಾಜ್ಯಪಾಲರು ಮೈದಾನಕ್ಕೆ ಆಗಮಿಸಲಿದ್ದು, ಭಾರತೀಯ ಸೇನೆಯ ರಕ್ಷಣಾ ಸೇವೆಯ ಮೂವರು ಹಿರಿಯ ಅಧಿಕಾರಿಗಳನ್ನು ರಾಜ್ಯಪಾಲರಿಗೆ ಪರಿಚಯಿಸಲಾಗುತ್ತದೆ. ಸರಿಯಾಗಿ 9 ಗಂಟೆಗೆ ರಾಜ್ಯಪಾಲರು ರಾಷ್ಟ್ರ ಧ್ವಜೋರೋಹಣ ನೆರವೇರಿಸಲಿದ್ದು, ಈ ಸಂದರ್ಭದಲ್ಲಿ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಲಾಗುತ್ತದೆ ಎಂದರು.

ಧ್ವರಾಜೋಹಣ ನಂತರ ರಾಜ್ಯಪಾಲರು ಪರೇಡ್ ವೀಕ್ಷಿಸಿ, ಗೌರವ ರಕ್ಷೆ ಸ್ವೀಕರಿಸಿ, ನಾಡಿನ ಜನತೆಗೆ ರಾಜ್ಯೋತ್ಸವದ ಸಂದೇಶ ನೀಡಲಿದ್ದಾರೆ. ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಪೂರ್ವಭಾವಿ ತಾಲೀಮು ಜನವರಿ 22ರಿಂದ ಮೂರು ದಿನಗಳ ಕಾಲ ಸತತವಾಗಿ ನಡೆಸಲಾಗುತ್ತಿದೆ. ಪಥಸಂಚಲನದಲ್ಲಿ ಪೊಲೀಸ್, ಕೇರಳ ಪೊಲೀಸ್, ಸ್ಕೌಟ್ಸ್‌, ಗೈಡ್ಸ್, ಎನ್‌ಸಿಸಿ, ಸೇವಾದಳ, ವಿವಿಧ ಶಾಲೆಗಳ ಮಕ್ಕಳನ್ನು ಒಳಗೊಂಡಂತೆ ಕವಾಯತು, ಬ್ಯಾಂಡ್‌ನ ಒಟ್ಟು 44 ತುಕಡಿಗಳಲ್ಲಿ ಸುಮಾರು 1750 ಮಂದಿ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಇದೇ ಮೊದಲ ಬಾರಿಗೆ ಸ್ವಚ್ಛ ಭಾರತ್ ಅಭಿಯಾನ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬಿಬಿಎಂಪಿ ಪೌರ ಕಾರ್ಮಿಕರಿಂದ ಪಥ ಸಂಚಲನವನ್ನು ಹಮ್ಮಿಕೊಳ್ಳಲಾಗಿದೆ. ಶಾಲಾ ಮಕ್ಕಳ ಒಟ್ಟು 3 ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸುಮಾರು 2000 ಮಕ್ಕಳು ಭಾಗವಹಿಸಲಿದ್ದಾರೆ. ಬಳಿಕ ರಾಜ್ಯಪಾಲರು ಸವೋತ್ತಮ ಸೇವಾ ಪ್ರಶಸ್ತಿ ವಿತರಣೆ ಮತ್ತು ವಿಜೇತರಿಗೆ ಬಹುಮಾನ ವಿತರಣೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ತಂಡದವರಿಂದ ನಾಡಗೀತೆ ಮತ್ತು ರೈತಗೀತೆ ನಡೆಯಲಿದೆ. ಬಳಿಕ ಬೆಂಗಳೂರು ದಕ್ಷಿಣ ಜಿಲ್ಲೆ ತಾವರೆಕೆರೆ ವಿಇಎಸ್‌ ಮಾಡಲ್ ಕಾನ್ವೆಂಟ್ ಶಾಲೆಯ 600 ಮಕ್ಕಳಿಂದ  "ಹಮಾರ ಭಾರತ್ ಮಹಾನ್" ಕಾರ್ಯಕ್ರಮ, ಕಸ್ತೂರಿ ಬಾ ನಗರದ ಪಾದರಾಯನಪುರ ಚಾಮರಾಜಪೇಟೆಯ ಬಿಬಿಎಂಪಿ ಪ್ರೌಢಶಾಲೆಯ 600 ಮಕ್ಕಳಿಂದ  "ಕಲ್ಯಾಣ ಕ್ರಾಂತಿ" ಕಾರ್ಯಕ್ರಮ, ಚಿಕ್ಕಬಿದರಕಲ್ಲು ಸರ್ಕಾರಿ ಪ್ರೌಢಶಾಲೆಯ 800 ಮಕ್ಕಳಿಂದ "ಭಾರತ ಭಾಗ್ಯವಿದಾತ" ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಉಳಿದಂತೆ ದಿ ಆರ್ಮಿ ಸರ್ವೀಸ್ ಕಾರ್ಪ್ಸ್‌ ನ ಒಟ್ಟು 20 ಸದಸ್ಯರಿಂದ ದಿ ಟೋರ್ನಾಡಸ್  ಮೋಟಾರ್ ಸೈಕಲ್ ಪ್ರದರ್ಶನ,  ರಾಜ್ಯ ಪೊಲೀಸ್ ಆಂತರಿಕ ಭದ್ರತಾ ವಿಭಾಗ ಗರುಡ ಪಡೆಯ  27 ಸದಸ್ಯರಿಂದ ಅಣಕು ಪ್ರದರ್ಶನ ನಡೆಯಲಿದೆ ಎಂದು ಶಿವಮೂರ್ತಿ ತಿಳಿಸಿದರು.

ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಮಾತನಾಡಿ, ದಿನಾಚರಣೆಯ ಸಮಾರಂಭಕ್ಕಾಗಿ ಮೈದಾನ ಸಿದ್ಧಗೊಂಡಿದೆ. ಶಾಮಿಯಾನ, ವೇದಿಕೆಯ ನಿರ್ಮಾಣ, ಬ್ಯಾರಿಕೇಡಿಂಗ್, ಆಸನಗಳ ವ್ಯವಸ್ಥೆ ಮಾಡಲಾಗಿದೆ. ವೇದಿಕೆಗೆ ಅಲಂಕಾರಿಕ ಬ್ರಾಸ್ ಪರಿಕರಗಳ ಅಳವಡಿಕೆ, ಧ್ವಜಾರೋಹಣ ಮಾಡಲು ಧ್ವಜ ಸ್ಥಂಭ ನಿರ್ಮಾಣ ಮಾಡಲಾಗಿದೆ. ಪಥ ಸಂಚಲನ ಮತ್ತು ಸಾಂಸ್ಕೃತಿಕ  ಕಾರ್ಯಕ್ರಮಗಳ ತಾಲೀಮಿನಲ್ಲಿ ಭಾಗವಹಿಸುತ್ತಿರುವ ಶಾಲಾ ಮಕ್ಕಳಿಗೆ ಪ್ರತಿದಿನ ಉಪಾಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತನಾಡಿ, ಮೈದಾನಕ್ಕೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಏರ್ಪಡಿಸಲಾಗಿದೆ. ಭದ್ರತೆ ಮತ್ತು ಸುರಕ್ಷತೆಗಾಗಿ 70 ಸಿಸಿ ಕ್ಯಾಮರಾ ವ್ಯವಸ್ಥೆ, ವ್ಯವಸ್ಥಿತ ಸಂಚಾರ ನಿಯಂತ್ರಣ ವ್ಯವಸ್ಥೆ ಮಾಡಲಾಗಿದೆ. ಗಣರಾಜ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲಿ ಯಾವುದೇ ಆಕಸ್ಮಿಕ ವಿಪತ್ತು ಸಂಭವಿಸಿದಲ್ಲಿ ತಕ್ಷಣ ಪ್ರತಿಕ್ರಿಯಿಸಲು ಅಗತ್ಯವಿರುವಷ್ಟು ಆಂಬುಲೆನ್ಸ್‌ಗಳನ್ನು ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಗರದ ಹಲವು ಆಸ್ಪತ್ರೆಗಳನ್ನು ಗುರುತಿಸಿ ಅಲ್ಲಿ ಸಾಕಷ್ಟು ಸಿಬ್ಬಂದಿಯನ್ನು ಹಾಸಿಗೆಯನ್ನು ಕಾಯ್ದಿರಿಸಲಾಗಿದೆ. ಆಕಸ್ಮಿಕ ಬೆಂಕಿ ಅವಘಡಗಳನ್ನು ನಿಭಾಯಿಸಲು ಅಗ್ನಿಶಾಮಕ ವಾಹನಗಳೊಂದಿಗೆ ಸಾಕಷ್ಟು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ಜಿ2 ಪ್ರವೇಶ ದ್ವಾರದಲ್ಲಿ ಅತಿ ಗಣ್ಯ ವ್ಯಕ್ತಿಗಳಿಗಾಗಿ 2000 ಆಸನಗಳು, ಜಿ1 ಪ್ರವೇಶ ದ್ವಾರದಲ್ಲಿ ಗಣ್ಯ ವ್ಯಕ್ತಿಗಳು,ಸ್ವಾತಂತ್ರ್ಯ ಹೋರಾಟಗಾರರು, ರಕ್ಷಣಾ ಇಲಾಖೆಯ ಸಿಬ್ಬಂದಿ, ಪತ್ರಿಕಾ ಪ್ರತಿನಿಧಿಗಳಿಗಾಗಿ 2000 ಆಸನಗಳು, ಜಿ3 ಪ್ರವೇಶ ದ್ವಾರದಲ್ಲಿ ಇತರ ಎಲ್ಲಾ ಇಲಾಖೆಯ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳು, ಬಿಎಸ್‌ಎಫ್ ಅಧಿಕಾರಿಗಳಿಗಾಗಿ  2000 ಆಸನಗಳು, ಜಿ 4 ಪ್ರವೇಶ ದ್ವಾರದಲ್ಲಿ ಸಾರ್ವಜನಿಕರಿಗಾಗಿ  4000 ಆಸನಗಳ ವ್ಯವಸ್ಥೆ ಮಾಡಲಾಗಿದೆ ಎಂದು ರಾವ್ ತಿಳಿಸಿದರು.