ಡೆಂಗಿ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಅಗತ್ಯ: ಡಾ. ಸರಿತಾ ವಿರಕ್ತಮಠ

ಡೆಂಗಿ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಅಗತ್ಯ: ಡಾ. ಸರಿತಾ ವಿರಕ್ತಮಠ  Precautions necessary to control Dengue: Dr. Sarita Viraktamath

ಲೋಕದರ್ಶನ ವರದಿ 

ಹಾವೇರಿ 18:  ಡೆಂಗಿ ಹರಡುವ ಸೊಳ್ಳೆಗಳ ನಿಯಂತ್ರಣಕ್ಕೆ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮನೆ ಹಾಗೂ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವ ಮೂಲಕ ಪ್ರತಿಯೊಬ್ಬರೂ ಡೆಂಗಿ ನಿಯಂತ್ರಣಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಸರಿತಾ ವಿರಕ್ತಮಠ ಹೇಳಿದರು.  

ನಗರದ ಶ್ರೀ ಬಸವೇಶ್ವರ ಬಿ.ಎಡ್‌. ಕಾಲೇಜಿನಲ್ಲಿ ಶನಿವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ಹಾಗೂ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಸಂಯುಕ್ತವಾಗಿ ಆಯೋಜಿಸಿದ್ದ ರಾಷ್ಟ್ರೀಯ ಡೆಂಗಿ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಈ ವೇಳೆ ಡೆಂಗಿ ತಡೆಗಟ್ಟುವ ಕ್ರಮಗಳ ಕುರಿತು ಮಾಹಿತಿ ನೀಡಿ, ಸೊಳ್ಳೆಗಳ ಲಾರ್ವಾ ನಾಶಪಡಿಸುವುದು, ಘನ ತ್ಯಾಜ್ಯವನ್ನು ಸಮರ​‍್ಕವಾಗಿ ವಿಲೇವಾರಿ ಮಾಡುವುದು, ನೀರಿನ ಸಂಗ್ರಹಣೆಯಲ್ಲಿ ಎಚ್ಚರಿಕೆ ವಹಿಸುವುದು ಹಾಗೂ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯಂತ ಮುಖ್ಯ ಎಂದು ತಿಳಿಸಿದರು. ಡೆಂಗಿ ಲಕ್ಷಣಗಳು ಕಂಡುಬಂದರೆ ತಕ್ಷಣ ರಕ್ತ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು.  

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಮಂಜುನಾಥ್ ಬಿ. ವಡ್ಡರ, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಭಾಕರ ಕುಂದೂರು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಉಮೇಶ್ ಕೆ., ಎಂಟಮಾಲಜಿಸ್ಟ್‌ ಶ್ರೀಕಾಂತ್ ಪಾಟೀಲ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಾಮಪ್ಪ ಎಸ್‌., ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ಚಂದ್ರಶೇಖರ ಹಿತ್ತಲಮನಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.