ಬಸವನಕೋಡ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರಿಗೆ ಶ್ಲಾಘನೆ
ಮುದ್ದೇಬಿಹಾಳ, ಆ.30: ಬಸವನಕೋಡ ಗ್ರಾಮದ ಪವಾಡ ಬಸವೇಶ್ವರ ದೇವಸ್ಥಾನ ಕಳ್ಳತನ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿ ಆರೋಪಿಗಳನ್ನು ಬಂಧಿಸಿದ ಮುದ್ದೇಬಿಹಾಳ ಪೊಲೀಸರ ಕಾರ್ಯ ಶ್ಲಾಘನೀಯ ಎಂದು ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಹೇಳಿದರು.
ಪಟ್ಟಣದ ಟಾಪ್ ಇನ್ ಟೌನ್ ಹಾಲ್ನಲ್ಲಿ ಶನಿವಾರ ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಅಂಜುಮನ್ ಸಂಸ್ಥೆಯ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರಿಗೆ ಏರಿ್ಡಸಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳ್ಳತನ ಪ್ರಕರಣವನ್ನು ಭೇದಿಸಲು ಮುದ್ದೇಬಿಹಾಳ ಪೊಲೀಸರು ತಮ್ಮ ಕುಟುಂಬದ ಬಗ್ಗೆ ಲೆಕ್ಕಿಸದೆ ವಿವಿಧ ರಾಜ್ಯಗಳಿಗೆ ತೆರಳಿ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಇದರಿಂದ ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಮೇಲಿನ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ. ಪ್ರಕರಣ ಭೇದಿಸುವಲ್ಲಿ ಶ್ರಮಿಸಿದ ಎಲ್ಲ ಪೊಲೀಸ್ ಸಿಬ್ಬಂದಿಯ ಕಾರ್ಯ ಶ್ಲಾಘನೀಯ ಎಂದರು.
ಸಮಾಜ-ಸಂಸ್ಥೆ ಅಭಿವೃದ್ಧಿಗೆ ಶ್ರಮಿಸಿ: ಅಂಜುಮನ್ ಸಂಸ್ಥೆಯ ಚುನಾವಣೆ ಹಲವು ವರ್ಷಗಳ ಬಳಿಕ ನಡೆದಿರುವುದು ಸಂತಸದ ಸಂಗತಿ. ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರು ಹಿರಿಯರ ಮಾರ್ಗದರ್ಶನದಲ್ಲಿ ಸಮಾಜ ಹಾಗೂ ಅಂಜುಮನ್ ಸಂಸ್ಥೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸದಸ್ಯರಾಗಿ ಆಯ್ಕೆಯಾಗಿರುವುದು ಸಂತಸದ ಸಂಗತಿ ಎಂದು ನಾಡಗೌಡ ಹೇಳಿದರು.
ಈ ಸಂದರ್ಭದಲ್ಲಿ ಪ್ರಕರಣ ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪೊಲೀಸ್ ಸಿಬ್ಬಂದಿಯನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರಗಿ, ಪವಾಡ ಬಸವೇಶ್ವರ ದೇವಸ್ಥಾನದ ಅಧ್ಯಕ್ಷ ಕೆ.ವೈ. ಬಿರಾದಾರ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಸಿಪಿಐ ಮೊಹಮ್ಮದ್ ಫೈಸುದ್ದೀನ್, ಪಿಎಸ್‌ಐ ಸಂಜಯ ತಿಪ್ಪಾರೆಡ್ಡಿ, ಮಾಜಿ ಎಪಿಎಂಸಿ ಉಪಾಧ್ಯಕ್ಷ ವೈ.ಎಚ್. ವಿಜಯಕರ, ಕಾಂಗ್ರೆಸ್ ಮುಖಂಡ ಅಬ್ದುಲ್ ಗಫೂರ್ ಮಕಾಂದಾರ, ಬಾಲಾಜಿ ಸುಗರ್ಸ್ನ ರಾಹುಲ್ಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.