ಯೋಗದಿಂದ ದೈಹಿಕ, ಮಾನಸಿಕ ಆರೋಗ್ಯ ಸಾಧ್ಯ: ಸುನೀಲಗೌಡ ಪಾಟೀಲ

ಯೋಗದಿಂದ ದೈಹಿಕ, ಮಾನಸಿಕ ಆರೋಗ್ಯ ಸಾಧ್ಯ: ಸುನೀಲಗೌಡ ಪಾಟೀಲ  Physical and mental health is possible through yoga: Sunilagouda Patil


ವಿಜಯಪುರ 18: ಯೋಗಾಭ್ಯಾಸದಿಂದ ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಬಿ.ಎಲ್‌.ಡಿ.ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಹೇಳಿದರು. ಬಿ.ಎಲ್‌.ಡಿ.ಇ ಡೀಮ್ಡ್‌ ವಿಶ್ವವಿದ್ಯಾಲಯದ ಯೋಗ ಶಿಕ್ಷಕ ಮಡಿವಾಳಪ್ಪ ಪರಸಪ್ಪ ದೊಡಮನಿ ಅವರಿಗೆ ‘ಏಷಿಯನ್ ಪೆಸಿಫಿಕ್ ಐಕಾನ್ ಅವಾರ್ಡ’ ಲಭಿಸಿದ ಹಿನ್ನೆಲೆಯಲ್ಲಿ ಗುರುವಾರ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ದೆಸೆಯಿಂದಲೇ ಯೋಗಾಭ್ಯಾಸ ರೂಢಿಸಿಕೊಂಡರೆ ಒತ್ತಡ ನಿಯಂತ್ರಣದ ಜೊತೆಗೆ ಏಕಾಗ್ರತೆ ಹೆಚ್ಚುತ್ತದೆ. ದೈಹಿಕವಾಗಿಯೂ ಉತ್ತಮ ಆರೋಗ್ಯ ಹೊಂದಲು ಸಹಕಾರಿಯಾಗುತ್ತದೆ. ದೊಡಮನಿ ಅವರು ಯೋಗ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದು, ದೇಶ ಹಾಗೂ ವಿದೇಶಗಳಲ್ಲಿ ಭಾರತದ ಕೀರ್ತಿ ಹೆಚ್ಚಿಸಿದ್ದಾರೆ. ಅವರ ಯೋಗ ಚಟುವಟಿಕೆಗಳಿಗೆ ಸಂಸ್ಥೆಯಿಂದ ಪ್ರೋತ್ಸಾಹ ನೀಡಲಾಗುವುದು ಎಂದು ಸುನೀಲಗೌಡ ಪಾಟೀಲ ಹೇಳಿದರು.  

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಡಿವಾಳಪ್ಪ ದೊಡಮನಿ, ಕಳೆದ 16 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದು, ಆರು ವರ್ಷಗಳಿಂದ ಬಿ.ಎಲ್‌.ಡಿ.ಇ ಡೀಮ್ಡ್‌ ವಿಶ್ವವಿದ್ಯಾಲಯದಲ್ಲಿ ಯೋಗ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದಾಗಿ ತಿಳಿಸಿದರು. ಬಿ.ಎ. ಪದವಿ, ಪಿಜಿ ಡಿಪ್ಲೊಮಾ ಇನ್ ಯೋಗ, ಸರ್ಟಿಫಿಕೇಟ್ ಯೋಗಾ ಸ್ಟಡೀಸ್ ಹಾಗೂ ಯೋಗ ಇನ್ಸ್ಟ್ರಕ್ಟರ್ ಕೋರ್ಸ್ಗಳನ್ನು ಪೂರ್ಣಗೊಳಿಸಿರುವುದಾಗಿ ಹೇಳಿದರು. ನೇಪಾಳದಲ್ಲಿ ಯೋಗದಲ್ಲಿ ಗೌರವ ಪದವಿ ಪಡೆದಿರುವ ಅವರು, ವಿಯಟ್ನಾಂನಲ್ಲಿ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ. 2023ರಲ್ಲಿ ಥೈಲ್ಯಾಂಡ್ ಹಾಗೂ 2024ರಲ್ಲಿ ದುಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದು, 2025ರಲ್ಲಿ ಮಲೇಶಿಯಾದಲ್ಲಿ ನಡೆದ ಸ್ಪರ್ಧೆಯಲ್ಲೂ ಉತ್ತಮ ಸಾಧನೆ ಮಾಡಿದ್ದಾರೆ. 2018ರಲ್ಲಿ ರಾಮದೇವ ಬಾಬಾ ನಗದು ಪುರಸ್ಕಾರ ಪಡೆದಿರುವುದಾಗಿ ತಿಳಿಸಿದರು.  

ಸೆಪ್ಟೆಂಬರ್ 7ರಂದು ಥೈಲ್ಯಾಂಡ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಏಷಿಯನ್ ಪೆಸಿಫಿಕ್ ಐಕಾನ್ ಅವಾರ್ಡ’ ದೊರೆತಿದ್ದು, ಈವರೆಗೆ ಸುಮಾರು 20 ಪ್ರಶಸ್ತಿಗಳನ್ನು ಪಡೆದಿರುವುದಾಗಿ ಹೇಳಿದರು. ದೇಶದ ವಿವಿಧ ರಾಜ್ಯಗಳಲ್ಲಿ ತರಬೇತುದಾರ ಹಾಗೂ ನಿರ್ಣಾಯಕರಾಗಿ ಸೇವೆ ಸಲ್ಲಿಸಿರುವುದಾಗಿ ತಿಳಿಸಿದ ಅವರು, ತಮ್ಮ ಸಾಧನೆಗೆ ಬಿ.ಎಲ್‌.ಡಿ.ಇ ಡೀಮ್ಡ್‌ ವಿಶ್ವವಿದ್ಯಾಲಯ ಬೆನ್ನೆಲುಬಾಗಿ ನಿಂತಿದೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಿ.ಎಲ್‌.ಡಿ.ಇ ಡೀಮ್ಡ್‌ ವಿವಿ ರಜಿಸ್ಟ್ರಾರ್ ಡಾ. ಆರಿ​‍್ವ. ಕುಲಕರ್ಣಿ, ಸಂಸ್ಥೆಯ ಆಡಳಿತಾಧಿಕಾರಿ ಎಂ.ಎನ್‌. ಚೋರಗಸ್ತಿ, ಹಣಕಾಸು ಉಪಅಧಿಕಾರಿ ಯಲ್ಲಾಲಿಂಗ ಜನವಾಡ, ಬಿ.ಎಂ. ಪಾಟೀಲ ಐಸಿಎಸ್‌ಇ ಶಾಲೆಯ ಪ್ರಾಚಾರ್ಯ ವಿಕ್ರಂ ನಾರ್ವೆಕರ, ಸಿಬಿಎಸ್‌ಇ ಶಾಲೆಯ ಪ್ರಭಾರ ಪ್ರಾಚಾರ್ಯೆ ವಸುದಾ ನಾರ್ವೆಕರ ಹಾಗೂ ಕೋ-ಆರ್ಡಿನೇಟರ್ಗಳಾದ ದೀಪಾ ಜಂಬೂರೆ, ಜಯಾ ಗಲಗಲಿ ಉಪಸ್ಥಿತರಿದ್ದರು.