ಇಂದು ಸಮಾಜದಲ್ಲಿ ವಿಕೃತಿ, ಅಸಭ್ಯತೆ ಹೆಚ್ಚಾಗುತ್ತಿದೆ: ಪ್ರಕಾಶ ಉಡಿಕೇರಿ

Perversion and rudeness are increasing in society today: Prakash Udikeri

ಇಂದು ಸಮಾಜದಲ್ಲಿ ವಿಕೃತಿ, ಅಸಭ್ಯತೆ ಹೆಚ್ಚಾಗುತ್ತಿದೆ: ಪ್ರಕಾಶ ಉಡಿಕೇರಿ  

ಧಾರವಾಡ 06: ಇಂದು ಸಮಾಜದಲ್ಲಿ ವಿಕೃತಿ ಮತ್ತು ಅಸಭ್ಯತೆ ಹೆಚ್ಚಾಗುತ್ತಿದೆ. ಎಲ್ಲ ರಂಗಗಳೂ ಸಭ್ಯತೆಯ ಗೆರೆ ದಾಟುತ್ತಿರುವುದು ವಿಷಾದದ ಸಂಗತಿ ಎಂದು ಹಿರಿಯ ನ್ಯಾಯವಾದಿ ಪ್ರಕಾಶ ಉಡಿಕೇರಿ ನುಡಿದರು.  ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಲೀಲಾತಾಯಿ ಹಾಗೂ ಜೀವಣ್ಣಗೌಡ ಪಾಟೀಲ ಕುಲಕರ್ಣಿ ದತ್ತಿ ನಿಮಿತ್ತ  ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಹೆಚ್ಚುತ್ತಿರುವ ವಿಕೃತಿ ಮತ್ತು ಅಸಭ್ಯತೆ’ ವಿಷಯ ಕುರಿತು ಮಾತನಾಡುತ್ತಿದ್ದರು.  ಇಂದು ನಮ್ಮ ಮಕ್ಕಳ ಕಲಿಕೆಯಲ್ಲಿ ನೈತಿಕತೆ ಕಟ್ಟಿಕೊಡುವ ಶಿಕ್ಷಣ ನೀಡುತ್ತಿಲ್ಲ. ಅಂದು ಶಿಕ್ಷಣದಲ್ಲಿ ಮಾರಲ್ಲ ಎಜುಕೇಶನ್‌ಗಾಗಿಯೇ ತರಗತಿಗಳು ಇರುತ್ತಿದ್ದವು. ಭಾವೈಕ್ಯತೆ ಮಕ್ಕಳಲ್ಲಿ ಮೂಡಿಸುವ ಹಾಡುಗಳು, ಕವಿತೆಗಳು, ಚಟುವಟಿಕೆಗಳು ಇರುತ್ತಿದ್ದವು. ಹೀಗಾಗಿ ನಮ್ಮ ಸಮಾನ ವಯಸ್ಕರಲ್ಲಿ ಸಭ್ಯತೆಯ ಸಂಸ್ಕಾರ ಕಾಣುತ್ತೇವೆ. ಇಂದಿನ ಪೀಳಿಗೆಗೆ ಸರಿಯಾದ ಮಾರ್ಗದರ್ಶನ ಇರದೇ ಹೋಗಿದ್ದರಿಂದ ಅಸಭ್ಯತೆ ಹೆಚ್ಚುತ್ತಿದೆ. ಶಿಕ್ಷಣದಲ್ಲಿ ಬದಲಾವಣೆ ತರಬೇಕಿದೆ. ನೈತಿಕತೆ ಬಿಂಬಿಸುವ ಹಾಗೆ ಪಠ್ಯಗಳು ಅಳವಡಿಸಬೇಕಿದೆ. ಅಂದಾಗ ಮಿತಿ ಮೀರಿದ ಅಸಭ್ಯತೆಗೆ ಇಂದು ಕಡಿವಾಣ ಹಾಕಲು ಸಾಧ್ಯ ಎಂದರು. ಅತಿಥಿಯಾಗಿ ಧಾರವಾಡ ಜೆ.ಎಸ್‌.ಎಸ್‌. ಕಾಲೇಜಿನ ಸಸ್ಯ ವಿಭಾಗ ಮುಖ್ಯಸ್ಥೆ ಶ್ರೀಮತಿ ರತ್ನಾ ಐರಸಂಗ ಮಾತನಾಡುತ್ತಾ, ಪರಿಸರದೊಂದಿಗೆ ಮನುಷ್ಯ ಅಮಾನುಷ್ಯ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾನೆ. ಮನುಷ್ಯ ಮನುಷ್ಯರ ನಡುವಿನ ವಿಕೃತಿಗಿಂತ ಹೆಚ್ಚು  ಇಂದು ಅದರ ಬದಲಾಗಿ ವಿಘಟನೆಯನ್ನು ಬಿಂಬಿಸುವ ರೀತಿಯಲ್ಲಿ ಸಮಾಜ ಹೊರಟಿದೆ. ವಿಕೃತಿಯನ್ನು ಸಮಾಜದಿಂದ ಕಿತ್ತೊಗೆಯಬೇಕಾದರೆ ತಂದೆ ತಾಯಿ ಪಾತ್ರ ಬಹಳ ಮುಖ್ಯವಾಗುತ್ತದೆ. ಅದರಲ್ಲೂ ತಾಯಿಯು ನೀಡುವ ಸಂಸ್ಕಾರ ಮುಖ್ಯವಾದ ಪಾತ್ರ ವಹಿಸುತ್ತದೆ. ಮಕ್ಕಳಿಗೆ ಹಣ ಮತ್ತು ಸಂಬಂಧದ ಬೆಲೆ ಏನೆಂಬುದನ್ನು ಮನವರಿಕೆ ಮಾಡಿಕೊಡಬೇಕು. ಮಗುವಿನ ಮೇಲೆ ನಿಗಾ ವಹಿಸಬೇಕು. ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳ ಕುರಿತು ಮಕ್ಕಳೊಂದಿಗೆ ಚರ್ಚಿಸಿ, ಆ ಕುರಿತು ಸರಿಯಾದ ಅರಿವು ಮೂಡಿಸಬೇಕೆಂದರು.  ಮಡಕಿಹೊನ್ನಿಹಳ್ಳಿಯ ಶಿಕ್ಷಣ ತಜ್ಞ ಕೆ. ಬಿ. ಪಾಟೀಲಕುಲಕರ್ಣಿ ಉಪಸ್ಥಿತರಿದ್ದರು. ದತ್ತಿದಾನಿ ಸರೋಜಾ ಕುಲಕರ್ಣಿ ದತ್ತಿ ಆಶಯ ಕುರಿತು ಮಾತನಾಡಿದರು.  ಶಂಕರ ಹಲಗತ್ತಿ ಸ್ವಾಗತಿಸಿದರು. ಮನೋಜ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಡಾ. ಜಿನದತ್ತ ಹಡಗಲಿ ವಂದಿಸಿದರು.  ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಡಾ. ಇಸಬೆಲ್ಲಾ ಝೇವಿಯರ್, ಬಿ.ಎಸ್‌. ಶಿರೋಳ, ಕೆ.ಜಿ. ದೇವರಮನಿ, ಪ್ರಭಾಕರ ಲಗಮಣ್ಣವರ, ಬಿ.ಕೆ. ಹೊಂಗಲ್, ಶಶಿಧರ ಉಜ್ಜನಿ, ಡಾ. ವಿಶ್ವನಾಥ ಚಿಂತಾಮಣಿ ಸೇರಿದಂತೆ ಪಾಟೀಲಕುಲಕರ್ಣಿ ಪರಿವಾರದವರು ಉಪಸ್ಥಿತರಿದ್ದರು.