ಕಂಪ್ಲಿ

ಶಾಲೆಗೆ ಶಾಶ್ವತವಾಗಿ ವಿದ್ಯುತ್ ಬೆಳಕು : ಎ.ಎಸ್‌.ಭೂಮೇಶ್ವರ

ಶಾಲೆಗೆ ಶಾಶ್ವತವಾಗಿ ವಿದ್ಯುತ್ ಬೆಳಕು : ಎ.ಎಸ್‌.ಭೂಮೇಶ್ವರ

ಲೋಕದರ್ಶನ ವರದಿ 

ಕಂಪ್ಲಿ 19: ಸೋಮಲಾಪುರ ಗ್ರಾಮದ ಹೊಸ ಕಟ್ಟಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭದಿಂದಲೂ ಉದ್ಭವಿಸಿದ್ದ ವಿದ್ಯುತ್ ಸರಬರಾಜು ಸಮಸ್ಯೆಗೆ ಅಂತ ಇಂತು ಮುಕ್ತಿ ಸಿಕ್ಕಿದೆ ಎಂದು ಸಿಆರ್‌ಪಿ ಎ.ಎಸ್‌.ಭೂಮೇಶ್ವರ ಹೇಳಿದರು. ತಾಲೂಕಿನ ದೇವಲಾಪುರ ಗ್ರಾಪಂಯ ವ್ಯಾಪ್ತಿಯ ಸೋಮಲಾಪುರ ಗ್ರಾಮದ ಗುಡ್ಡದ ಬಳಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸಿದ ಹಿನ್ನಲೆ ಜೆಸ್ಕಾಂ ಲೈನ್ ಮ್ಯಾನ್ ಹೊನ್ನೂರಸ್ವಾಮಿ ಇವರಿಗೆ ಬುಧವಾರ ಸನ್ಮಾನಿಸಿ ಗೌರವಿಸಿದ ನಂತರ ಮಾತನಾಡಿ, ಗ್ರಾಮದ ಹಳೆ ಶಾಲೆಯೂ ಗುಡ್ಡದ ಬಳಿಯಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಶಾಲೆಗೆ 2023ರಲ್ಲಿ ಸ್ಥಳಾಂತರಗೊಂಡಿತು.

ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಕೊಠಡಿಗಳ ಜೊತೆಗೆ ಮೂಲಭೂತ ಸೌಲಭ್ಯ ಕಲ್ಪಿಸಿತ್ತಾದರೂ ವಿದ್ಯುತ್ ಸಮಸ್ಯೆ ಮಾತ್ರ ಕಾಡ ತೊಡಗಿತ್ತು. ಶಾಲೆಯಲ್ಲಿ ಕಂಪ್ಯೂಟರ್, ಲೈಟ್, ನೀರಿನ ಸರಬರಾಜಿಗೆ ಸಂಬಂಧಿಸಿದಂತೆ ವಿದ್ಯುತ್ ಸಮಸ್ಯೆ ಉಂಟಾದ ಪರಿಣಾಮ ತಾತ್ಕಾಲಿಕವಾಗಿ ಕಟ್ಟಿಗೆಯ ಕಂಬಗಳಿಂದ ತಂತಿಗಳೊಂದಿಗೆ ಸರಬರಾಜು ಮಾಡಿಕೊಳ್ಳಲಾಗಿತ್ತು. ಶಾಶ್ವತವಾಗಿ ವಿದ್ಯುತ್ ಸರಬರಾಜಿನ ವ್ಯವಸ್ಥೆ ಮಾಡಿಕೊಡಬೇಕೆಂದು, ಸ್ಥಳೀಯ ಶಾಸಕರ, ಜನಪ್ರತಿನಿಧಿಗಳ, ಸ್ಥಳೀಯ ಮುಖಂಡರ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ಹಿಂದಿನ ಪ್ರಭಾರಿ ಮುಖ್ಯಗುರು ಕೆ.ಮಲ್ಲಯ್ಯ ಅವರ ಮುಖಾಂತರ ಮನವಿ ಮಾಡಲಾಗಿತ್ತು.

ನಿರಂತರವಾಗಿ ಒತ್ತಡ ಹಾಕಿದ ಹಿನ್ನಲೆ ಜೆಸ್ಕಾಂ ಅಧಿಕಾರಿಗಳು ಹೆಚ್ಚಿನ ಮಟ್ಟದಲ್ಲಿ ಗಮನಕ್ಕೆ ತೆಗೆದುಕೊಂಡು, ಕಂಬಗಳನ್ನು ಹಾಕಿ, ತಂತಿ ಅಳವಡಿಸಿ, ಇಲ್ಲಿನ ಗುಡ್ಡದ ಶಾಲೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟಿದ್ದಾರೆ. ಸ್ಥಳೀಯ ಶಾಸಕರಾದ ಜೆ.ಎನ್‌.ಗಣೇಶ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕೆ.ಶ್ರೀನಿವಾಸರಾವ್, ಕ್ಷೇತ್ರಶಿಕ್ಷಣಾಧಿಕಾರಿ ಸಿದ್ಧಲಿಂಗಮೂರ್ತಿ, ಎಇಇ ಶ್ರೀನಿವಾಸ ಪ್ರಸಾದ್, ಜೆಇ ಶಮಿಉಲ್ಲಾ, ಜನಪ್ರತಿನಿಧಿಗಳು,

ಸ್ಥಳೀಯ ಮುಖಂಡರ ಸಹಕಾರ ಶ್ಲಾಘನೀಯವಾಗಿದೆ. ಇದೇ ತರನಾಗಿ ಬಡ್ತಿ ಮುಖ್ಯಗುರು ಎಸ್‌.ಚಂದ್ರ​‍್ಪ ಇವರಿಗೆ ಸಹಕಾರ ನೀಡುವ ಮೂಲಕ ಮಕ್ಕಳ ಶೈಕ್ಷಣಿಕ ಮಟ್ಟದ ಅಭಿವೃದ್ಧಿ ಅನುವು ಮಾಡಿಕೊಡಬೇಕು ಎಂದರು. ನಂತರ ಬಡ್ತಿ ಮುಖ್ಯಗುರು ಎಸ್‌.ಚಂದ್ರ​‍್ಪ ಇವರಿಗೂ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಸಹ ಶಿಕ್ಷಕರಾದ ಕೆ.ಮಲ್ಲಯ್ಯ, ಹೆಚ್‌.ರಾಜಪ್ಪ, ಅತಿಥಿ ಶಿಕ್ಷಕಿಯರಾದ ಶೃತಿ, ಸಹಾಯಕ ಸಿಬ್ಬಂದಿ ಪೀರಾಂ ಬೀ ಇದ್ದರು. 


ಸುದ್ದಿ ಓದಿ