ವಿಜಯಪುರದಲ್ಲಿ ಪರ್ಜನ್ಯ ಹೋಮ ನೆರವೇರಿಕೆ

 ವಿಜಯಪುರದಲ್ಲಿ ಪರ್ಜನ್ಯ ಹೋಮ ನೆರವೇರಿಕೆ   Parjanya Homa performed in Vijayapura


  ವಿಜಯಪುರ, ಸೆ.18: ವಿಜಯಪುರದ ಶ್ರೀ ಶಿವಾಜಿ ಮಹಾರಾಜ ವೃತ್ತದಲ್ಲಿರುವ ಗಣೇಶ ಮಹಾಮಂಡಳಿ ವತಿಯಿಂದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯ ಸನ್ನಿಧಿಯಲ್ಲಿ ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಲೋಕಕಲ್ಯಾಣಕ್ಕಾಗಿ ಪರ್ಜನ್ಯ ಹೋಮವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.  

ಪಂ. ಪವಮಾನ ಆಚಾರ್ಯ ಪುರೋಹಿತ ಅವರ ನೇತೃತ್ವದಲ್ಲಿ ನಡೆದ ಹೋಮದಲ್ಲಿ ಮಳೆ ದೇವತೆಯನ್ನು ಪ್ರಾರ್ಥಿಸಿ ವಿಶೇಷ ಹೋಮ-ಹವನ ಹಾಗೂ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು. ಉತ್ತಮ ಮಳೆಯಾಗಿ ರೈತರಿಗೆ ಅನುಕೂಲವಾಗಬೇಕು, ನಾಡಿನಲ್ಲಿ ಸಮೃದ್ಧಿ ನೆಲೆಸಬೇಕು ಹಾಗೂ ಸಕಲ ಜೀವಿಗಳ ಕಲ್ಯಾಣವಾಗಬೇಕು ಎಂದು ಪ್ರಾರ್ಥಿಸಲಾಯಿತು.  

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಮಳೆ ನಮ್ಮ ಬದುಕಿನ ಮೂಲಾಧಾರವಾಗಿದೆ. ಉತ್ತಮ ಮಳೆಯಾದರೆ ರೈತರ ಬದುಕು ಹಸನಾಗುವುದರ ಜೊತೆಗೆ ನಾಡಿನ ಆರ್ಥಿಕ ಚಟುವಟಿಕೆಗಳಿಗೂ ಬಲ ಬರುತ್ತದೆ. ಪ್ರಕೃತಿ ಹಾಗೂ ಮಳೆಯ ಅನುಗ್ರಹಕ್ಕಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.  

ಗಣೇಶೋತ್ಸವ ಮಹಾಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಪಂಡಿತರು ಹಾಗೂ ಭಕ್ತರು ಉಪಸ್ಥಿತರಿದ್ದು ಪರ್ಜನ್ಯ ಹೋಮದಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ಈ ಹೋಮ ಇನ್ನೂ ಆರು ದಿನಗಳ ಕಾಲ ನಡೆಯಲಿದೆ ಎಂದು ಮಹಾಮಂಡಳಿ ಪರವಾಗಿ ವಿಶ್ವಾಸಿ ವಿಜಯ ಜೋಶಿ ತಿಳಿಸಿದರು.