ಲೋಕದರ್ಶನ ವರದಿ
ಅಪೌಷ್ಠಿಕತೆ ನಿವಾರಣೆಗೆ ಪಾಲಕರು ಸಹಕರಿಸಿ: ಡಿಹೆಚ್‌ಓ ಡಾ.ಯಲ್ಲಾ ರಮೇಶಬಾಬು
ಬಳ್ಳಾರಿ 19: ಮಕ್ಕಳಿಗೆ ವಯೋಸಹಜ ತೂಕ ಹಾಗೂ ಆರೋಗ್ಯ ಸುರಕ್ಷತೆಗಾಗಿ ವಿಶೇಷ ಬಾಲಚೈತನ್ಯ ಮಕ್ಕಳ ಆರೈಕೆಯಡಿ ಮಕ್ಕಳ ತಜ್ಞರಿಂದ ಪರೀಕ್ಷೆ ಮಾಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು. ಸೋಮವಾರದಂದು ಬಳ್ಳಾರಿ ತಾಲ್ಲೂಕಿನ ಕೊಳಗಲ್ಲು ಗ್ರಾಮದಲ್ಲಿ ಐದು ವರ್ಷದೊಳಗಿನ ಮಕ್ಕಳ ಮನೆಗೆ ಭೇಟಿ ನೀಡಿ ಪಾಲಕರ ಜೊತೆ ಮಕ್ಕಳ ಆರೋಗ್ಯ ವಿಚಾರಿಸಿ ಅವರು ಮಾತನಾಡಿದರು. ಹುಟ್ಟಿದ ಮಗುವಿನ ಸಹಜ ತೂಕ 2.5 ಕೆ.ಜಿ ಇದ್ದರೆ ಆ ಮಗು ಸಹಜ ತೂಕದ ಮಗುವಾಗಿರುತ್ತದೆ. ಒಂದು ವೇಳೆ ಕಡಿಮೆ ಇದ್ದರೆ ಸೂಕ್ತ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಐದು ವರ್ಷದ ಮಗುವಿನ ಆರೋಗ್ಯದ ದೃಷ್ಠಿಯಿಂದ ಬಾಲಚೈತನ್ಯ ಕಾರ್ಯಕ್ರಮದಡಿ ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳ ತಜ್ಞ ವೈದ್ಯರ ಮೂಲಕ ಮಾಡಲಾಗುವ ತಪಾಸಣಾ ಶಿಬಿರದಲ್ಲಿ ಪಾಲಕರು ಮಕ್ಕಳ ಪರೀಕ್ಷೆ ಮಾಡಿಸಬೇಕು ಎಂದು ಅವರು ತಿಳಿಸಿದರು.
ಸಾಮಾನ್ಯವಾಗಿ ಒಂದು ವರ್ಷದ ಮಗು 10 ಕೆ.ಜಿ ಮೇಲ್ಪಟ್ಟು, ಎರಡು ವರ್ಷದ ಮಗು 12 ಕೆ.ಜಿ, ಮೂರು ವರ್ಷದ ಮಗು 14 ಕೆ.ಜಿ, 4 ವರ್ಷದ ಮಗು 16 ಕೆ.ಜಿ ಮತ್ತು 5 ವರ್ಷದ ಮಗು 18 ಕೆ.ಜಿ ಇರುವುದು ಮಗುವಿನ ಸಹಜ ತೂಕ ಮತ್ತು ಉತ್ತಮ ಆರೋಗ್ಯವನ್ನು ಸೂಚಿಸುತ್ತದೆ ಎಂದು ತಿಳಿಸಿದರು. ಮಕ್ಕಳ ಆರೋಗ್ಯದಲ್ಲಿ ಬೇರೆ ಯಾವುದಾದರೂ ಅರೋಗ್ಯ ಸಮಸ್ಯೆ ಕಂಡುಬಂದಲ್ಲಿ, ಬೆಳವಣಿಗೆ ಕುಂಟಿತವಾದಲ್ಲಿ, ಆಹಾರ ಸೇವನೆಗೆ ಹಿಂದೇಟು ಹಾಕುತ್ತಿದ್ದರೆ, ಪದೇಪದೇ ಕಾಯಿಲೆಗೆ ಒಳಗಾಗುತ್ತಿದ್ದರೆ ಮಗುವಿನ ಬೆಳವಣಿಗೆಗೆ ಅಡ್ಡಿಯುಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ವೈದ್ಯದು ಸೂಚಿಸಿದ ಓಷಧಿ ಹಾಗೂ ಮಗುವಿನ ವಯಸ್ಸು 06 ತಿಂಗಳು ತುಂಬುವವರೆಗೆ ತಾಯಿ ಹಾಲು ನೀಡಬೇಕು. ನಂತರದಲ್ಲಿ ಪೂರಕ ಪೌಷ್ಟಿಕ ಆಹಾರ ಉಣಿಸುವ ಮೂಲಕ ಮಕ್ಕಳ ಆರೋಗ್ಯವಂತರನ್ನಾಗಿ ಮಾಡಲು ಪಾಲಕರು ವಿಶೇಷ ಆರೈಕೆ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು. ಒಂದು ವೇಳೆ ಮೇಲಿನವುಗಳೆಲ್ಲವೂಗಳ ಆರೈಕೆಯಿಂದ ಮಗುವಿನ ತೂಕದಲ್ಲಿ ಏರಿಕೆ, ಆರೋಗ್ಯದಲ್ಲಿ ಸುಧಾರಣೆ ಕಂಡುಬರದೇ ಇದ್ದಲ್ಲಿ ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ಪೌಷ್ಟಿಕ ಪುನಶ್ವೇತನ ಕೇಂದ್ರ ಇದ್ದು, ಇಲ್ಲಿ 14 ದಿನಗಳ ವರೆಗೆ ಮಗುವಿನ ಸೂಕ್ತ ಆರೈಕೆಗಾಗಿ ತಾಯಿಯು ವಸತಿ ಕೈಗೊಳ್ಳಲು ಅವಕಾಶದೊಂದಿಗೆ ಮಗುವಿನ ಎಲ್ಲ ಪರೀಕ್ಷೆಗಳನ್ನು ಕೈಗೊಳ್ಳಲು ಕ್ರಮವಹಿಸಲಾಗುವುದು. ಅದೇರೀತಿಯಾಗಿ ಸಂಡೂರು, ಸಿರುಗುಪ್ಪ, ಕಂಪ್ಲಿ ತಾಲ್ಲೂಕು ಸರಕಾರಿ ಆಸ್ಪತ್ರೆಗಳಲ್ಲಿ ಸಹ ಈ ಸೌಲಭ್ಯವಿದ್ದು ಇದರು ಸದುಪಯೋಗ ಪಡೆಯಲು ಎಂದು ಡಿಹೆಚ್‌ಒ ವಿನಂತಿಸಿದರು.
ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆರ್.ಅಬ್ದುಲ್ಲಾ ಅವರು ಮಾತನಾಡಿ ಮಕ್ಕಳಿಗೆ ಹುಟ್ಟಿನಿಂದ 01 ವರ್ಷದೊಳಗೆ 12 ಮಾರಕ ರೋಗಗಳ ವಿರುದ್ಧದ ನೀಡುವ ಎಲ್ಲಾ ಲಸಿಕೆಗಳನ್ನು ತಪ್ದದೆ ಹಾಕಿಸಬೇಕು. ಇದರಿಂದ ರೋಗ ನಿರೋಧಕ ಶಕ್ತಿ ದೊರಕುತ್ತದೆ ಎಂದು ಹೇಳಿದರು. ಮಾರ್ಬಿಲೀ ವೈರಸ್ ಪ್ರಬೇಧದ ರುಬೆಲ್ಲಾ ವೈರಸ್‌ನಿಂದ ಹರಡುವ ದಡಾರವು ವೈರಾಣುವಿನಿಂದ ಉಂಟಾಗುವ ಒಂದು ಸೋಂಕು ರೋಗವಾಗಿದ್ದು, ಸಾಮಾನ್ಯವಾಗಿ ಇದು ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆಯಾದರೂ ಹದಿಹರೆಯದವರು ಮತ್ತು ಪ್ರೌಢರನ್ನು ಕೂಡ ಬಾಧಿಸುತ್ತದೆ. ಈ ಹಿನ್ನಲೆಯಲ್ಲಿ ಮಗುವಿನ ವಯಸ್ಸು ದಡಾರ ಲಸಿಕೆಯ ಮೊದಲು ಡೋಸನ್ನು 9-12 ತಿಂಗಳು ವಯಸ್ಸಿನಲ್ಲಿ ಮತ್ತು ಎರಡನೇ ಡೋಸನ್ನು 16-24 ತಿಂಗಳು ವಯಸ್ಸಿನಲ್ಲಿ ಹಾಕಿಸುವ ಮೂಲಕ ದಡಾರ ರೋಗವನ್ನು ನಿಯಂತ್ರಿಸಲು ಕೈ ಜೋಡಿಸಬೇಕೆಂದು ವಿನಂತಿಸಿದರು. ಈ ವೇಳೆ ಸಿದ್ದಮ್ಮನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ದಿವ್ಯಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಡಿಎನ್‌ಓ ಗೀರೀಶ್, ಐಸಿಡಿಎಸ್ ಮೇಲ್ವಿಚಾರಕಿ ಕಲ್ಯಾಣಮ್ಮ, ಗ್ರಾಪಂ ಕಾರ್ಯದರ್ಶಿ ಪ್ರಭಾಕರ ರೆಡ್ಡಿ, ಗ್ರಾಮ ಆಡಳಿತಾಧಿಕಾರಿ ಮಂಜುನಾಥ, ಸಮುದಾಯ ಅರೋಗ್ಯ ಅಧಿಕಾರಿ ಯರಿ್ರಸ್ವಾಮಿ, ಅಂಗನವಾಡಿ ಕಾರ್ಯಕರ್ತೆ ರಾಧಾ, ಆಶಾ ಕಾರ್ಯಕರ್ತೆ ಹೆಚ್.ಕವಿತಾ, ಆರೊಗ್ಯ ಮೇಲ್ವಿಚಾರಣಾಧಿಕಾರಿ ವಿರುಪಾಕ್ಷಿ ಸೇರಿದಂತೆ ತಾಯಂದಿರು, ಸಿಬ್ಬಂದಿಯವರು, ಆಶಾಕಾರ್ಯಕರ್ತೆಯರು ಹಾಜರಿದ್ದರು.