ಸರ್ಕಾರಿ ಶಾಲೆ ಉಳಿಸಲು ಪೋಷಕರ ಸಹಕಾರ ಅಗತ್ಯ

  ಸರ್ಕಾರಿ ಶಾಲೆ ಉಳಿಸಲು ಪೋಷಕರ ಸಹಕಾರ ಅಗತ್ಯ  Parental cooperation is essential to save government schools

ಲೋಕದರ್ಶನ ವರದಿ 

ಹಾರೂಗೇರಿ  17: ಸರ್ಕಾರಿ ಶಾಲೆಗಳನ್ನು ಶಿಕ್ಷಣ ವ್ಯವಸ್ಥೆಯ ತೊಟ್ಟಿಲು ಎಂದು ಪರಿಗಣಿಸಿ, ಮಕ್ಕಳನ್ನು ಖಾಸಗಿ ಶಾಲೆಗಳತ್ತ ಕಳುಹಿಸುವ ಬದಲು ಸರ್ಕಾರಿ ಶಾಲೆಗಳಲ್ಲೇ ಓದಿಸುವ ಮನೋಭಾವವನ್ನು ಪೋಷಕರು ಬೆಳೆಸಿಕೊಳ್ಳಬೇಕು ಎಂದು ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು. ಸಮೀಪದ ಕುರುಬಗೋಡಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನೂತನ ಕೊಠಡಿಗಳ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸರ್ಕಾರ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದರು. ‘ನಮ್ಮೂರಿನ ಶಾಲೆ ಉಳಿಯಬೇಕು’ ಎಂಬ ಅಭಿಮಾನ ಪ್ರತಿಯೊಬ್ಬ ಪೋಷಕರಲ್ಲೂ ಇರಬೇಕು ಎಂದು ಕರೆ ನೀಡಿದರು.  

ನಂತರ ಅಲಖನೂರು ಗ್ರಾಮದ ಪಪಂ ಕಾಲೋನಿಯಲ್ಲಿ ರೂ50 ಲಕ್ಷ ವೆಚ್ಚದ ಸಿಸಿ ರಸ್ತೆ ಹಾಗೂ ಪೇವರ್ಸ್‌ ಬ್ಲಾಕ್ ನಿರ್ಮಾಣ, ಪಜಾ ಕಾಲೋನಿಯಲ್ಲಿ ರೂ50 ಲಕ್ಷ ವೆಚ್ಚದ ಸಿಸಿ ರಸ್ತೆ ಹಾಗೂ ಪೇವರ್ಸ್‌ ನಿರ್ಮಾಣ, ನಿಲಜಿ ಗ್ರಾಮದ ಪಜಾ ಕಾಲೋನಿಯಲ್ಲಿ ರೂ25 ಲಕ್ಷ ವೆಚ್ಚದ ಸಿಸಿ ರಸ್ತೆ ಮತ್ತು ಸುಟ್ಟಟ್ಟಿ ಗ್ರಾಮದಲ್ಲಿ ರೂ60 ಲಕ್ಷ ವೆಚ್ಚದ ಡಾಂಬರೀಕರಣ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.  ಮೊರಬ ಗ್ರಾಮದಿಂದ ನಿಲಜಿ ಕೂಡುರಸ್ತೆವರೆಗೆ ರೂ74 ಲಕ್ಷ ವೆಚ್ಚದ ಡಾಂಬರೀಕರಣ ಹಾಗೂ ಪರಮಾನಂದವಾಡಿ ಪಪಂ ಜನವಸತಿ ಪ್ರದೇಶದಲ್ಲಿ ಟಿಎಸ್‌ಪಿ ಯೋಜನೆಯಡಿ ಸಿಸಿ ರಸ್ತೆ ಮತ್ತು ಪೇವರ್ಸ್‌ ಅಳವಡಿಕೆ ಕಾಮಗಾರಿಗಳಿಗೆ ಶಾಸಕ ಮಹೇಂದ್ರ ತಮ್ಮಣ್ಣವರ ಭೂಮಿಪೂಜೆ ನೆರವೇರಿಸಿದರು.  

ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಮಹಾವೀರ ಆಸಂಗಿ, ಮುಖ್ಯಶಿಕ್ಷಕಿ ಎಸ್‌.ಎಂ. ಕಡಬಗೇರ, ಅತಿಥಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪ್ರದೀಪ ಮಾಳಿ, ಗಣ್ಯರಾದ ರಾವಸಾಬ ವಾಲ್ಕೆ, ಸವಿತಾ ಲಾಡ್, ಮುತ್ತಪ್ಪ ಆಸಂಗಿ, ಕರೆಪ್ಪ ಪೂಜೇರಿ, ಕುಮಾರ ಯಲಟ್ಟಿ, ವರ್ಧಮಾನ ಶಿರಹಟ್ಟಿ, ಕರೆಪ್ಪ ಹಸರೇ, ಶಂಕರ ಕಾಂಬಳೆ, ಪ್ರದೀಪ ಹಾಲುಗುಣಿ, ಸಚಿನ್ ಹಳಕಲ್, ಪರಮಾನಂದ ಬೆಳಗಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.