ಪದ್ಮಶ್ರೀ ಡಾ. ಪ್ರಭಾಕರ ಕೋರೆ ರವರಿಂದ ಯಳ್ಳೂರ ರಸ್ತೆಯ ಬೆಳಗಾವಿಯಲ್ಲಿನ ಕೆಎಲ್‌ಇ ಸಿಸಿ ಆಸ್ಪತ್ರೆಯಲ್ಲಿ ‘ಪರಿವರ್ತನ’ ಪುನರ್ವಸತಿ ವ್ಯಸನಮುಕ್ತಿ ಘಟಕ ಉದ್ಘಾಟನೆ

ಪದ್ಮಶ್ರೀ ಡಾ. ಪ್ರಭಾಕರ ಕೋರೆ ರವರಿಂದ ಯಳ್ಳೂರ ರಸ್ತೆಯ ಬೆಳಗಾವಿಯಲ್ಲಿನ ಕೆಎಲ್‌ಇ ಸಿಸಿ ಆಸ್ಪತ್ರೆಯಲ್ಲಿ ‘ಪರಿವರ್ತನ’ ಪುನರ್ವಸತಿ  ವ್ಯಸನಮುಕ್ತಿ ಘಟಕ ಉದ್ಘಾಟನೆ Padma Shri Dr. Prabhakar Kore inaugurated the ‘Parivarthan’ rehabilitation and addiction unit at KLE

ಲೋಕದರ್ಶನ ವರದಿ 

 ಬೆಳಗಾವಿ 08 : ಉತ್ತರ ಕರ್ನಾಟಕದ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿರುವ ಅತ್ಯಾಧುನಿಕ ವಿಶೇಷ ಸೌಲಭ್ಯವಾದ ‘ಪರಿವರ್ತನ ಪುನರ್ವಸತಿ ಮತ್ತು ವ್ಯಸನಮುಕ್ತಿ ಕೇಂದ್ರ’ವನ್ನು ಬೆಳಗಾವಿಯ ಯಳ್ಳೂರು ರಸ್ತೆಯಲ್ಲಿರುವ ಕೆಎಲ್‌ಇ ಸೆಂಟೆನರಿ ಚಾರಿಟೇಬಲ್ ಆಸ್ಪತ್ರೆ ಆವರಣದಲ್ಲಿ ಅಧಿಕೃತವಾಗಿ ಉದ್ಘಾಟಿಸಲಾಯಿತು. ಈ ಕೇಂದ್ರವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆಎಲ್‌ಇ ಸಂಸ್ಥೆಯ ಗೌರವಾಧ್ಯಕ್ಷರು ಹಾಗೂ ಕಾಹೇರ್  ಕುಲಾಧಿಪತಿಗಳು ಹಾಗೂ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರು ಉದ್ಘಾಟಿಸಿದರು. ಸಮಗ್ರ ಮಾನಸಿಕ ಆರೋಗ್ಯ ಮತ್ತು ಪುನರ್ವಸತಿಯ ತುರ್ತು ಅಗತ್ಯತೆ ಸಮಾಜದ ಮುಖ್ಯವಾಹಿನಿಗೆ ವ್ಯಕ್ತಿಗಳನ್ನು ಮರಳಿ ತರುವ ಉದ್ದೇಶದಿಂದ ವಿಶೇಷ ಕೇಂದ್ರವನ್ನು ಸ್ಥಾಪಿಸಿರುವ ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗದ ಕಾರ್ಯವನ್ನು ಅವರು ಶ್ಲಾಘಿಸಿದರು. 

ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಯಾಗಿ ಆಗಮಿಸಿದ್ದ ಬೆಳಗಾವಿ ನಗರದ ಉಪ ಪೊಲೀಸ್ ಆಯುಕ್ತರು ಮಾತನಾಡಿ, ಸಮಾಜದಲ್ಲಿ ಹೆಚ್ಚುತ್ತಿರುವ ಮದ್ಯಪಾನ ಹಾಗೂ ಮಾದಕ ವಸ್ತುಗಳ ವ್ಯಸನವು ವ್ಯಕ್ತಿಯ ಜೀವನ ಮಾತ್ರವಲ್ಲದೆ ಅವರ ಕುಟುಂಬದ ಮೇಲೆಯೂ ಗಂಭೀರ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು. ವ್ಯಸನಕ್ಕೊಳಗಾದ ವ್ಯಕ್ತಿಗಳ ಅಸಹಜ ಹಾಗೂ ಹಿಂಸಾತ್ಮಕ ವರ್ತನೆಯಿಂದ ಕುಟುಂಬ ಸದಸ್ಯರು ಮಾನಸಿಕ, ಸಾಮಾಜಿಕ ಹಾಗೂ ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಕುಟುಂಬದವರ ಮೇಲೆ ಹಲ್ಲೆ, ಗೃಹಹಿಂಸೆ, ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಸೇರಿದಂತೆ ಗಂಭೀರ ಸಾಮಾಜಿಕ ಸಮಸ್ಯೆಗಳು ಉಂಟಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಅವರು ಹೇಳಿದರು. 

ಯು.ಎಸ್‌.ಎಂ ಕೆ.ಎಲ್‌.ಇ ನಿರ್ದೇಶಕರಾದ ಡಾ.ಎಚ್‌.ಬಿ ರಾಜಾಶೇಖರ ಅವರು ಈ ಸಂದರ್ಭದಲ್ಲಿ ಅವರು ರೋಗಿಗಳ ಜೀವನದ ಗುಣಮಟ್ಟವನ್ನು ಸುಧಾರಿಸಲು ಹಾಗೂ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಪುನರ್ವಸತಿ ಸೇವೆಗಳು ಅತ್ಯಂತ ಮಹತ್ವದ್ದಾಗಿವೆ ಎಂದು ತಿಳಿಸಿದರು. 30 ದಿನಗಳ ವಸತಿ ಆಧಾರಿತ ಈ ಕಾರ್ಯಕ್ರಮದಲ್ಲಿ ತರಬೇತಿ ಪಡೆದ ಮನೋಶಾಸ್ತ್ರಜ್ಞಗಳು ಮತ್ತು ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತರಿಂದ ಸಮಾಲೋಚನೆ, ಪ್ರತಿದಿನ ಮನೋವೈದ್ಯರ ಭೇಟಿ, ಯೋಗ ಮತ್ತು ಧ್ಯಾನ, 24/7 ನರ್ಸ್‌ ಸೇವೆ, ಪೌಷ್ಟಿಕ ಆಹಾರ ವ್ಯವಸ್ಥೆ, ವಿವಿಧ ಚಿಕಿತ್ಸಾ ಅವಧಿಗಳು, ಕುಟುಂಬ ಸಮಾಲೋಚನೆ ಹಾಗೂ ಮನರಂಜನಾ ಚಿಕಿತ್ಸೆಯಂತಹ ಅನೇಕ ಸೇವೆಗಳು ಒಳಗೊಂಡಿವೆ ಎಂದು ತಿಳಿಸಿದರು. 

ಆಸ್ಪತ್ರೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಶ್ರೀ ನವೀನ್ ಎನ್‌. ಅವರು ಮಾತನಾಡಿ, ಕೆಎಲ್‌ಇ ಸೆಂಟಿನರಿ ಚಾರಿಟೇಬಲ್ ಆಸ್ಪತ್ರೆಯು ಸದಾ ಸಮಾಜದ ಆರೋಗ್ಯ ಮತ್ತು ಕಲ್ಯಾಣಕ್ಕೆ ಆದ್ಯತೆ ನೀಡುತ್ತಿದ್ದು, ವ್ಯಸನಮುಕ್ತಿ ಮತ್ತು ಪುನರ್ವಸತಿ ಸೇವೆಗಳ ಅಗತ್ಯತೆಯನ್ನು ಮನಗಂಡು “ಪರಿವರ್ತನ” ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಹೇಳಿದರು. ಮದ್ಯ ಹಾಗೂ ಮಾದಕ ವಸ್ತುಗಳ ವ್ಯಸನವು ಕೇವಲ ವ್ಯಕ್ತಿಯ ಆರೋಗ್ಯವನ್ನಷ್ಟೇ ಅಲ್ಲದೆ ಕುಟುಂಬ ಮತ್ತು ಸಮಾಜದ ನೆಮ್ಮದಿಯನ್ನೂ ಹಾಳು ಮಾಡುತ್ತದೆ. ವ್ಯಸನಪೀಡಿತರಿಗೆ ಗುಣಮಟ್ಟದ ಚಿಕಿತ್ಸೆ, ಸಮಾಲೋಚನೆ, ಪುನರ್ವಸತಿ ಹಾಗೂ ಜೀವನ ಕೌಶಲ್ಯ ತರಬೇತಿಯನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು. 

ಕೆಎಲ್‌ಇ ಸಿಸಿ ಆಸ್ಪತ್ರೆಯ ಮೂಲ ಧ್ಯೇಯದ ಭಾಗವಾಗಿ, ‘ಪರಿವರ್ತನ’ ಅತ್ಯುತ್ತಮ ವೈದ್ಯಕೀಯ ಸೇವೆಗಳನ್ನು ಕೈಗೆಟುಕುವ ಹಾಗೂ ಸಮುದಾಯ ಕೇಂದ್ರಿತ ಸೇವೆಗಳೊಂದಿಗೆ ಸಂಯೋಜಿಸಿ, ಎಲ್ಲ ರೋಗಿಗಳಿಗೆ ಯಾವುದೇ ಕಳಂಕವಿಲ್ಲದ  ವಾತಾವರಣವನ್ನು ಒದಗಿಸಲಿದೆ. ಅನುಭವಸಂಪನ್ನ ಮನೋವೈದ್ಯರು, ಮನೋಶಸ್ತ್ರಜ್ಞಗಳು ಹಾಗೂ ಸಾಮಾಜಿಕ ಕಾರ್ಯಕರ್ತರ ಬಹುಶಾಖಾ ವೈದ್ಯಕೀಯ ತಂಡದ ನೇತೃತ್ವವನ್ನು ಡಾ. ಆಂಟೋನಿಯೊ ಕಾರ್ವಾಲ್ಹೊ ಅವರು ವಿವರಿಸಿದರು. 

ಈ ಸಂದರ್ಬದಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಸಂಜಯ ಕಂಬಾರ ಅವರು  ‘ಪರಿವರ್ತನ’ ವ್ಯಸನವನ್ನು ನೈತಿಕ ವೈಫಲ್ಯವಾಗಿ ಅಲ್ಲ, ಚಿಕಿತ್ಸೆ ನೀಡಬಹುದಾದ ವೈದ್ಯಕೀಯ ಸ್ಥಿತಿಯಾಗಿ ಪರಿಗಣಿಸುತ್ತದೆ. ಈ ಕೇಂದ್ರದಲ್ಲಿ ಸುರಕ್ಷಿತ ವೈದ್ಯಕೀಯ ಡಿಟಾಕ್ಸಿಫಿಕೇಶನ್ (ಮುಕ್ತಗೊಳಿಸುವಿಕೆ), ವೈಜ್ಞಾನಿಕ ಆಧಾರಿತ ಮನೋಸಮಾಲೋಚನೆ, ಕುಟುಂಬ ಚಿಕಿತ್ಸೆ, ದೀರ್ಘಕಾಲೀನ ಮರುಚಟ ತಡೆ ಕಾರ್ಯಕ್ರಮಗಳು ಸೇರಿದಂತೆ ವಿವಿಧ ವಿಶೇಷ ಸೇವೆಗಳು ಒಂದೇ ಸೂರಿನಡಿ ಲಭ್ಯವಿರುತ್ತವೆ ಎಂದು ತಿಳಿಸಿದರು.  ಈ ಕಾರ್ಯಕ್ರಮದಲ್ಲಿ ವೈದ್ಯಕೀಯ ಮತ್ತು ವೈದ್ಯಕೀಯೇಂತರ ಸಿಬ್ಬಂದಿ ಮತ್ತು ನರ್ಸಿಂಗ್ ವಿಧ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಡಾ. ಸಂಜೀವಿನಿ ರಾಠೋಡ ಅವರು ನಿರೂಪಿಸಿದರು. ಮತ್ತು ಡಾ. ಅಶ್ವಿವಿನಿ ಪದ್ಮಶಾಲಿ ಅವರು ವಂದಿಸಿದರು.