ಮಾದಕ ವ್ಯಸನದಿಂದ ದೂರವಿದ್ದು ಆರೋಗ್ಯಕರ ಜೀವನ ನಡೆಸುವಂತೆ ಪ್ರಧಾನಿ ಮೋದಿ ಕರೆ

 ಮಾದಕ ವ್ಯಸನದಿಂದ ದೂರವಿದ್ದು ಆರೋಗ್ಯಕರ ಜೀವನ ನಡೆಸುವಂತೆ ಪ್ರಧಾನಿ ಮೋದಿ ಕರೆ  PM Modi calls for staying away from drug addiction and leading a healthy life

ಲೋಕದರ್ಶನ ವರದಿ  

ಚಿಕ್ಕೋಡಿ 02: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ನಶಾ ಮುಕ್ತ ಯುವ ಹಿ ವಿಕಸಿತ ಭಾರತ’ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ, ದೇಶದ ಯುವಜನತೆ ಮಾದಕ ವ್ಯಸನದಿಂದ ದೂರವಿದ್ದು ಆರೋಗ್ಯಕರ ಹಾಗೂ ಜವಾಬ್ದಾರಿಯುತ ಜೀವನ ನಡೆಸುವಂತೆ ಕರೆ ನೀಡಿದರು.  

ದೆಹಲಿಯಿಂದ ಯೂಟ್ಯೂಬ್ ಮೂಲಕ ನೇರ ಪ್ರಸಾರಗೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಕಸಿತ ಭಾರತದ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಯುವಕರು ಆರೋಗ್ಯವಂತರಾಗಿದ್ದರೆ ಮಾತ್ರ 2047ರ ವೇಳೆಗೆ ವಿಕಸಿತ ಭಾರತದ ಕನಸು ನನಸಾಗಲಿದೆ ಎಂದು ಹೇಳಿದರು.  

ಮಾದಕ ವ್ಯಸನವು ವ್ಯಕ್ತಿಯ ಜೀವನ, ಕುಟುಂಬ ಹಾಗೂ ಸಮಾಜದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ. ಇದು ಯುವಕರ ಭವಿಷ್ಯವನ್ನು ಹಾಳು ಮಾಡುವುದಲ್ಲದೆ, ಕುಟುಂಬದ ನೆಮ್ಮದಿ ಮತ್ತು ರಾಷ್ಟ್ರದ ಅಭಿವೃದ್ಧಿಗೂ ಧಕ್ಕೆ ಉಂಟುಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬ ಯುವಕ-ಯುವತಿಯೂ ವ್ಯಸನದಿಂದ ದೂರವಿದ್ದು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಅವರು ಕರೆ ನೀಡಿದರು.  

ಈ ಕಾರ್ಯಕ್ರಮದ ನೇರ ಪ್ರಸಾರವನ್ನು ಕೆಎಲ್‌ಇ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಕಿರಣಕುಮಾರ ಮುತ್ನಾಳಿ, ಮಾದಕ ವಸ್ತುಗಳ ಸೇವನೆಯಿಂದ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.  

ಕೆಎಲ್‌ಇ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಸುನೀಲ ಎಂ. ಬಿ. ಮಾತನಾಡಿ, ಕ್ರೀಡೆ, ಯೋಗ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಸೇವಾ ಮನೋಭಾವದ ಮೂಲಕ ಯುವಜನತೆಯನ್ನು ವ್ಯಸನದಿಂದ ದೂರವಿಡಬಹುದು ಎಂದು ತಿಳಿಸಿದರು.  

ಕಾರ್ಯಕ್ರಮವನ್ನು ಆಡಳಿತಾಧಿಕಾರಿ ಮಹಾಂತೇಶ ಗುಡ್ಡನವರ ನಿರೂಪಿಸಿ ವಂದಿಸಿದರು.  ಈ ಸಂದರ್ಭದಲ್ಲಿ ಆಯುರ್ವೇದ ಕಾಲೇಜಿನ ಉಪನ್ಯಾಸಕರಾದ ಡಾ. ಬಿ.ಬಿ. ದೇಶಾಯಿ, ಡಾ. ಶ್ರೀಧರ ಲಕ್ಕುಂಡಿ, ಡಾ. ರವಿ ಮಡಿವಾಳರ, ಡಾ. ಸಂತೋಷ ಶಿವಣ್ಣವರ, ಡಾ. ಬಹುಬಲಿ ಮಹಾಜನ, ಮಲ್ಲಿಕಾರ್ಜುನ ಘಸ್ತಿ, ಕೆಎಲ್‌ಇ ನರ್ಸಿಂಗ್ ಕಾಲೇಜಿನ ಉಪನ್ಯಾಸಕರು, ವೈದ್ಯರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.