ಅಂತರಾಷ್ಟ್ರೀಯ ಯೋಗ ದಿನಾಚರಣೆ ವ್ಯವಸ್ಥಿತವಾಗಿ ಆಯೋಜಿಸಿ: ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ

Organize International Yoga Day in a systematic manner: DC Dr. Vijayamahanthesh Danammavar

ಹಾವೇರಿ 11 : ಯೋಗ ಮನುಷ್ಯನ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ಜಿಲ್ಲೆಯಲ್ಲಿ ಜೂನ್ 21 ರಂದು ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಅತ್ಯಂತ ವ್ಯವಸ್ಥಿತವಾಗಿ  ಹಾಗೂ ಅಚ್ಚುಕಟ್ಟಾಗಿ ಆಯೋಜಿಸಬೇಕು  ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ 11ನೇ ಅಂತರರಾಷ್ಟೀಯ ಯೋಗ ದಿನಾಚರಣೆಯ ಪೂರ್ವಭಾವಿ ಸಭೆ ಅಧ್ಯಕ್ಷೆತೆವಹಿಸಿ ಮಾತನಾಡಿದ ಅವರು, ಈ ಬಾರಿಯ ಯೋಗ ದಿನಾಚರಣೆಯನ್ನು "ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ" ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದರು. 

ಜೂನ್ 21 ರಂದು ಯೋಗಾಭ್ಯಾಸ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ  ಬೆಳಿಗ್ಗೆ 7 ಗಂಟೆಯಿಂದ 7.45 ರವರೆಗೆ ನಿಗದಿತ ಸಮಯಕ್ಕೆ ನಡೆಯುವಂತೆ ಆಯೋಜಿಸಬೇಕು. ಬೆಳಿಗ್ಗೆ 6 ಗಂಟೆಗೆ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಎಲ್ಲರೂ ಆಗಮಿಸಬೇಕು. ಬೆಳಿಗ್ಗೆ 6-30 ಗಂಟೆಗೆ ವೇದಿಕೆ ಕಾರ್ಯಕ್ರಮ ಆಯೋಜಿಸಿ ಎಂದರು. 

ಯೋಗ ದಿನಾಚರಣೆಯ  ಕಾರ್ಯಕ್ರಮದಲ್ಲಿ ಅಂದಾಜು 1000 ಪ್ರೌಢಶಾಲಾ ವಿದ್ಯಾರ್ಥಿಗಳು, 500 ಜನ ವಿವಿಧ ಯೋಗ ಸಂಘ ಸಂಸ್ಥೆಗಳ ಸದಸ್ಯರು, ಯೋಗಾಸಕ್ತರು ಹಾಗೂ ಸಾರ್ವಜನಿಕರು ಸೇರಿದಂತೆ ಒಟ್ಟು 1500 ಜನರು ಪಾಲ್ಗೊಳ್ಳುವ ನೀರಿಕ್ಷೆಯಿದ್ದು, ಸರ್ಕಾರದ ಕೋವಿಡ್‌-19 ಮಾರ್ಗಸೂಚಿಗಳ ಪಾಲನೆ  ಮಾಡಬೇಕು ಹಾಗೂ ಕಾರ್ಯಕ್ರಮದಲ್ಲಿ ಜನದಟ್ಟಣೆ ನಿಯಂತ್ರಿಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳೀಗೆ ಸೂಚನೆ ನೀಡಿದರು. 

ಜೂನ್ 21ರ ಹವಾಮಾನ ಮುನ್ಸೂಚನೆ ನೋಡಿಕೊಂಡು ಸ್ಥಳ ನಿಗದಿ ಪಡಿಸಿಕೊಳ್ಳಿ, ಮಳೆ ಬಾರದಿದ್ದಲ್ಲಿ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿ. ಒಂದು ವೇಳೆ ಮಳೆ ಬರುವ ಸಂಭವ ಇದ್ದಲ್ಲಿ ಒಳಾಂಗಣದಲ್ಲಿ 500 ಜನರೊಂದಿಗೆ  ಯೋಗಾಭ್ಯಾಸ ಮಾಡಲು ತಯಾರಿಮಾಡಿಕೊಳ್ಳಿ ಎಂದು ತಿಳಿಸಿದರು.  

ಯೋಗ ಶಿಕ್ಷಕರನ್ನು ಮೇಲುಸ್ತುವಾರಿಗಳಾಗಿ ನೇಮಿಸಿ ಜಿಲ್ಲೆಯ ಎಲ್ಲ ಶಾಲಾ-ಕಾಲೇಜ್ ಹಾಗೂ ಹಾಸ್ಟೇಲ್‌ಗಳಲ್ಲಿ ಯೋಗ ದಿನ ಆಚರಣೆಗೆ ಸೂಚನೆ ನೀಡಿ, ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್‌  ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.  

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎಲ್ ನಾಗರಾಜ,  ಆಯುಷ್ಯ ಅಧಿಕಾರಿ ಡಾ.ಜಿ.ಸಿ.ನಿಡಗುಂದಿ ಹಾಗೂ  ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.