ಬಳ್ಳಾರಿಯಲ್ಲಿ ಬಾಲ ಕಾರ್ಮಿಕರ ವಿರುದ್ಧ ಕಾರ್ಯಾಚರಣೆ: ಇಬ್ಬರು ಮಕ್ಕಳ ರಕ್ಷಣೆ

    ಬಳ್ಳಾರಿಯಲ್ಲಿ ಬಾಲ ಕಾರ್ಮಿಕರ ವಿರುದ್ಧ ಕಾರ್ಯಾಚರಣೆ: ಇಬ್ಬರು ಮಕ್ಕಳ ರಕ್ಷಣೆ  Operation against child labour in Ballari: Two children rescued

ಲೋಕದರ್ಶನ ವರದಿ 

ಬಳ್ಳಾರಿ, ಆ.19: ನಗರದಲ್ಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿ, ಕೆಲಸದಲ್ಲಿ ತೊಡಗಿದ್ದ ಇಬ್ಬರು ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದೆ.  

‘ಪ್ಯಾನ್‌-ಇಂಡಿಯಾ ರಕ್ಷಣಾ ಮತ್ತು ಪುನರ್ವಸತಿ ಅಭಿಯಾನ’ದ ಅಂಗವಾಗಿ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಕಾರ್ಯಾಚರಣೆ ಕೈಗೊಳ್ಳಲಾಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್‌. ಹೊಸಮನಿ ಅವರ ಅಧ್ಯಕ್ಷತೆಯಲ್ಲಿ ಬಾಲ ಹಾಗೂ ಕಿಶೋರ ಕಾರ್ಮಿಕರ ಟಾಸ್ಕ್‌ಫೋರ್ಸ್‌ ಸಮಿತಿ ಸಭೆ ನಡೆಸಿದ ಬಳಿಕ ನಗರದ ವಿವಿಧೆಡೆ ದಾಳಿ ನಡೆಸಲಾಯಿತು.  

ಟಾಸ್ಕ್‌ಫೋರ್ಸ್‌ ತಂಡವು ಎಂ.ಜಿ. ರಸ್ತೆ, ಪಟೇಲ್ ನಗರ ಹಾಗೂ ಅನಂತಪುರ ರಸ್ತೆಯ ಪ್ರಮುಖ ವಾಣಿಜ್ಯ ಮಳಿಗೆಗಳು ಮತ್ತು ಉದ್ಯಮಗಳಲ್ಲಿ ಅನೀರೀಕ್ಷಿತ ತಪಾಸಣೆ ನಡೆಸಿತು. ಈ ವೇಳೆ ಕೆಲಸ ನಿರ್ವಹಿಸುತ್ತಿದ್ದ ಇಬ್ಬರು ಮಕ್ಕಳನ್ನು ಗುರುತಿಸಿ ರಕ್ಷಿಸಲಾಯಿತು.  

ಸ್ಥಳದಲ್ಲೇ ಮಕ್ಕಳಿಂದ ಅಗತ್ಯ ಮಾಹಿತಿ ಪಡೆದು, ಮುಂದಿನ ರಕ್ಷಣೆ ಮತ್ತು ಪುನರ್ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದೆ.  ಇದೇ ಸಂದರ್ಭದಲ್ಲಿ ಉದ್ಯಮ ಮಾಲೀಕರಿಗೆ ಕರಪತ್ರ ಹಾಗೂ ಪೋಸ್ಟರ್‌ಗಳನ್ನು ವಿತರಿಸಿ, ಬಾಲ ಕಾರ್ಮಿಕ ಕಾಯ್ದೆಯ ಕುರಿತು ಜಾಗೃತಿ ಮೂಡಿಸಲಾಯಿತು.  

ಕಾರ್ಯಾಚರಣೆಯಲ್ಲಿ ಕಾರ್ಮಿಕ ನೀರೀಕ್ಷಕರಾದ ಪರಶುರಾಮ್ (2ನೇ ವೃತ್ತ) ಮತ್ತು ರಮೇಶ್ (1ನೇ ವೃತ್ತ), ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮೌನೇಶ್, ಆರೋಗ್ಯ ಇಲಾಖೆಯ ಮುಷ್ತಾಕ್ ಅಹಮದ್ ಹಾಗೂ ಗೋವಿಂದಪ್ಪ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಪ್ರಶಾಂತ್ ಕುಮಾರ್, ಸಿಆರಿ​‍್ಪ ಮನ್ಸೂರ್ ಅಹಮದ್, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.