ಒಂಬತ್ತು ದಿನ ಅದ್ಧೂರಿಯಾಗಿ ನಡೆದ ಗ್ರಾಮದೇವಿ ಜಾತ್ರೆಗೆ ತೆರೆ

ಯರಗಟ್ಟಿ 22: ಸಮೀಪದ ಸತ್ತಿಗೇರಿ ಗ್ರಾಮದಲ್ಲಿ ಒಂಬತ್ತು ದಿನಗಳ ಕಾಲ ನಡೆದ ಗ್ರಾಮ ದೇವತೆ ದ್ಯಾಮವ್ವ ದೇವಿಯ ಜಾತ್ರಾ ಮಹೋತ್ಸವನ್ನು ರವಿವಾರ ಗ್ರಾಮ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆದರು. 

ರವಿವಾರ ಸ್ಥಳೀಯ ಬಜಾರ ಕಟ್ಟೆಯಲ್ಲಿ ಪ್ರತಿಷ್ಠಾಪನೆಗೊಂಡಿದ್ದ ದ್ಯಾಮವ್ವಳನ್ನು ಬೆಳಗ್ಗೆ 10ಕ್ಕೆ ಶ್ರೀ ಗ್ರಾಮದೇವಿಯ ಹೊನ್ನಾಟದ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಾದಗಟ್ಟಿ ತಲುಪಿದಳು. 

ನಂತರ ಮಹಿಳೆಯರು ಮಕ್ಕಳು ವಿಶೇಷ ಪೂಜೆ ಸಲ್ಲಿಸಿ, ದೇವಿಗೆ ಉಡಿ ತುಂಬುವ ಮೂಲಕ ಭಕ್ತಿಭಾವ ಮೆರೆದರು.ದೇವಸ್ಥಾನ ಸಮಿತಿಯಿಂದ ಶ್ರೀದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಂಜೆ ಸಕಲ ವಾದ್ಯ ವೃಂದದ ಸೀಮೋಲಂಘನೆ ಮೂಲಕ ಜಾತ್ರಾ ಮಹೋತ್ಸವವನ್ನು ಸಪ್ನಗೊಳಿಸಿದರು. 

5 ವರ್ಷಗಳ ನಂತರ ಗ್ರಾಮದಲ್ಲಿ ದೇವತೆ ದ್ಯಾಮವ್ವ ದುರ್ಗವ್ವಳ ಜಾತ್ರೆ ಸತತ 9 ದಿನಗಳ ಕಾಲ ಅದ್ಧೂರಿಯಾಗಿ ನಡೆದು ರವಿವಾರ ಮುಕ್ತಾಯಗೊಂಡಿತು. 2029ಕ್ಕೆ ಗ್ರಾಮದೇವತೆ ದ್ಯಾಮವ್ವ ದುರ್ಗವ್ವಳಜಾತ್ರೆ ಜಾತ್ರೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.