ಬೆಳಗಾವಿ

ಬೆಳಗಾವಿ ಪಾಲಿಕೆಗೆ ಒಂದು ವಾರದ ಗಡುವು: ಕರವೇ ಎಚ್ಚರಿಕೆ

ಬೆಳಗಾವಿ ಪಾಲಿಕೆಗೆ ಒಂದು ವಾರದ ಗಡುವು: ಕರವೇ ಎಚ್ಚರಿಕೆ


ಬೆಳಗಾವಿ, ಆ.19: ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಹಾಗೂ ಬೆಳಗಾವಿ ಕನ್ನಡಿಗರ ಸ್ವತ್ತು ಎಂಬ ಘೋಷಣೆಯೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಬುಧವಾರ ಬೆಳಗಾವಿ ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿ, ಪಾಲಿಕೆಗೆ ಮುತ್ತಿಗೆ ಹಾಕಲು ಯತ್ನಿಸಿದರು.  

ಕರವೇ ಜಿಲ್ಲಾಧ್ಯಕ್ಷ ಆರ್‌. ಅಭಿಲಾಷ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪಾಲಿಕೆ ಮುಂಭಾಗ ಜಮಾಯಿಸಿ, ಕನ್ನಡಿಗರ ಭಾವನೆಗಳಿಗೆ ಸ್ಪಂದಿಸುವಂತೆ ಆಗ್ರಹಿಸಿದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಮುನ್ನೆಚ್ಚರಿಕಾ ಕ್ರಮ ಕೈಗೊಂಡರು.  

ಪ್ರತಿಭಟನೆಯಲ್ಲಿ ಮಾತನಾಡಿದ ಆರ್‌. ಅಭಿಲಾಷ್, “ಕನ್ನಡದ ನೆಲ, ಕನ್ನಡಿಗರ ಹಕ್ಕು ಹಾಗೂ ಬೆಳಗಾವಿಯ ಕನ್ನಡ ಅಸ್ಮಿತೆಗಾಗಿ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಬೆಳಗಾವಿ ಮಹಾನಗರ ಪಾಲಿಕೆ ಕನ್ನಡಿಗರ ಭಾವನೆಗಳಿಗೆ ಸ್ಪಂದಿಸಬೇಕು” ಎಂದು ಒತ್ತಾಯಿಸಿದರು.  

ಪಾಲಿಕೆ ಒಂದು ವಾರದೊಳಗೆ ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಹಾಗೂ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು’ ಎಂಬ ಸ್ಪಷ್ಟ ನಿರ್ಣಯವನ್ನು ಅಂಗೀಕರಿಸಬೇಕು ಎಂದು ಕರವೇ ಆಗ್ರಹಿಸಿದೆ. ಗಡುವಿನೊಳಗೆ ನಿರ್ಣಯ ಕೈಗೊಳ್ಳದಿದ್ದರೆ ಮುಂದಿನ ಬುಧವಾರ ಕರವೇ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಅಭಿಲಾಷ್ ಎಚ್ಚರಿಸಿದರು.  

ಪಾಲಿಕೆ ಕನ್ನಡಿಗರ ಪರವಾಗಿ ನಿರ್ಧಾರ ಕೈಗೊಳ್ಳಲು ವಿಫಲವಾದರೆ, ಪಾಲಿಕೆಯನ್ನು ‘ಸೂಪರ್ ಸೀಡ್‌’ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಅವರು ತಿಳಿಸಿದರು.  

ಪ್ರತಿಭಟನೆಯಲ್ಲಿ ಕರವೇ ಜಿಲ್ಲಾ ಗೌರವಾಧ್ಯಕ್ಷ ಅರುಣ್ ಪಾಟೀಲ್, ಮಹಿಳಾ ಘಟಕದ ಅಧ್ಯಕ್ಷೆ ಗಿರಿಜಾ, ನಗರಾಧ್ಯಕ್ಷ ರಾಜು ಕಲ್ಪತ್ರಿ, ಆಟೋ ಘಟಕದ ಅಧ್ಯಕ್ಷ ಸತ್ಯಪ್ಪ, ರೆಹೋಯೆಲ್, ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಸೂರಜ್ ಸೇರಿದಂತೆ ಹಲವು ಕರವೇ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. 


ಸುದ್ದಿ ಓದಿ