ಮಹಿಳೆಯರಿಂದಲೇ ನಾಗರಪಂಚಮಿ ಆಚರಣೆ

ಮಹಿಳೆಯರಿಂದಲೇ ನಾಗರಪಂಚಮಿ ಆಚರಣೆ Nagara Panchami celebrated by women


ಲೋಕದರ್ಶನ ವರದಿ   

ಯಲಬುರ್ಗಾ 16 : ನಾಗರ ಪಂಚಮಿಗೆ ಭಾನುವಾರ ಚಾಲನೆ ದೊರೆತಿದ್ದು ಜಿಲ್ಲಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಮುಂಜಾನೆಯಿಂದಲೇ ಹಬ್ಬದ ಸಡಗರ ಮನೆ ಮಾಡಿ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ಮಹಿಳೆಯರು, ನವ ದಂಪತಿಗಳು ಸೇರಿ ಕುಟುಂಬದವರೆಲ್ಲರೂ ನಾಗರಕಲ್ಲು, ಹುತ್ತಗಳಿಗೆ ಹಾಲೆರೆದು ಮೊದಲ ದಿನದ ಪಂಚಮಿ ಆಚರಿಸಿದರು.  ನಾಗರ ಪಂಚಮಿ ಸಡಗರ, ಸಂಭ್ರಮ ವಾರಗಟ್ಟಲೆ ಇರುತ್ತದೇ ಆದರೂ ಮೊದಲ ಮೂರು ದಿನ ಮುಖ್ಯ ಆಚರಣೆಗಳು ನಡೆಯುತ್ತದೆ. ಮೊದಲ ದಿನ ರೊಟ್ಟಿ ಪಂಚಮಿ, ಮರುದಿನ ನಾಗರ ಚೌತಿ, ಅದರ ಮರು ದಿನ ನಾಗರ ಪಂಚಮಿ ಹಬ್ಬ ನಡೆಯುವುದು ವಾಡಿಕೆ. 

ಮಹಿಳೆಯರು ಎಳ್ಳು ಹಚ್ಚಿ ತಯಾರಿಸಿದ ರೊಟ್ಟಿ, ಚಪಾತಿ, ಕಡ್ಲೆಕಾಳು ಪಲ್ಲೆ , ಬದನೆಕಾಯಿ ಪಲ್ಲೆ, ಎಣ್ಣೆಗಾಯಿ ಪಲ್ಯ, ಹೋಳಿಗೆ , ಶೇಂಗಾ ಚಟ್ನಿ , ಕಡ್ಲೆಚಟ್ನಿ ಸೇರಿದಂತೆ ಬಗೆ, ಬಗೆಯ ಊಟಗಳನ್ನು ತಯಾರಿಸಿ ಬಂಧು, ಬಳಗ ನೆರೆ ಹೊರೆಯವರಿಗೆ ಹಂಚಿ ಸಂಭ್ರಮ ಪಡುವುದು ಈ ಹಬ್ಬದ ವಿಶೇಷ.  ಕಲ್ಲ ನಾಗರಕ್ಕೆ ಹಾಲು, ಪೂಜೆ:  ಪಟ್ಟಣದ 9ನೇ ವಾರ್ಡಿನ ಶ್ರೀಬಸವಲಿಂಗೇಶ್ವರ ಕಲಾ ಭವನ ಮುಂದೆ ಭರಮಪ್ಪ ಹಾಗೂ ನಾಗರ ಮೂರ್ತಿಗೆ ಹಾಲೆರೆಯುವ ಮೂಲಕ ಮಹಿಳೆಯರು ನಾಗ ಪಂಚಮಿ ಆಚರಿಸಿದರು.  ಈ ವೇಳೆ 9ನೇ ವಾರ್ಡಿನ ಮಹಿಳೆಯರು ಹಾಗೂ ಮುದ್ದು ಮಕ್ಕಳು ಇದ್ದರು.