ಲೋಕದರ್ಶನ ವರದಿ
ಮಲಿಕವಾಡ ಗ್ರಾಮದಲ್ಲಿ ಎನ್‌ಎಸ್‌ಎಸ್ ಶಿಬಿರ: ಆರೋಗ್ಯ ಜಾಗೃತಿ
ಮಾಂಜರಿ 24: ಮಗುವಿಗೆ ಉತ್ತಮ ತಾಯಿಯಾಗಬೇಕಾದರೆ, ಯುವತಿಯರು ಉತ್ತಮ ಆರೋಗ್ಯ ಹೊಂದುವುದು ಅವಶ್ಯ. ಮದುವೆಯಾದ ಮೇಲೆ ಸಮಸ್ಯೆ ಎದುರಿಸುವ ಬದಲು ಈಗಲೇ ವ್ಯಾಯಾಮ, ಯೋಗಾಸನ, ಉತ್ತಮ ಆಹಾರ ಸೇವನೆ ಮಾಡಿ ಸದೃಢ ಶರೀರ ಹೊಂದಬೇಕು ಎಂದು ಚಿಕ್ಕೋಡಿಯ ಶಿವಕೃಪಾ ಆಸ್ಪತ್ರೆಯ ವೈದ್ಯೆ ರೋಹಿಣಿ ಕುಲಕರ್ಣಿ ಕಿವಿಮಾತು ಹೇಳಿದರು.
ಅವರು ಸಮೀಪದ ಮಲಿಕವಾಡ ಗ್ರಾಮದಲ್ಲಿ ಗುರುವಾರ ರಂದು ಚಿಕ್ಕೋಡಿ ಪಟ್ಟಣದ ಎ.ಎ. ಪಾಟೀಲ ಮಹಿಳಾ ಮಹಾವಿದ್ಯಾಲಯದ ವತಿಯಿಂದ ಮಂಗಳವಾರ ಹಮ್ಮಿಕೊಂಡ ಎನ್‌ಎಸ್‌ಎಸ್ ಶಿಬಿರದಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಕರಿದ ತಿಂಡಿ, ಬೇಕರಿ ತಿಂಡಿಗಳನ್ನು ಸೇವಿಸಬಾರದೆಂದು ಹೇಳಿದರು.
ನಿವೃತ್ತ ಸೈನಿಕ ಪಾಂಡುರಂಗ ಪಾಟೀಲ ಮಾತನಾಡಿ, ಯುವತಿಯರು ಹೆಚ್ಚು ಹೆಚ್ಚು ಭಾರತೀಯ ಸೇನೆಯಲ್ಲಿ ಸೇರಿಕೊಂಡು ದೇಶ ಸೇವೆ ಮಾಡಬೇಕು. ಸೈನಿಕರಾಗಿ ದೇಶ ಸೇವೆ ಮಾಡುವ ತೃಪ್ತಿ ಬೇರೆ ಯಾವುದರಲ್ಲೂ ಇಲ್ಲ ಎಂದರು.
ಸಿಟಿಇ ಸಂಸ್ಥೆಯ ನಿರ್ದೇಶಕ ವಿ.ಸಿ. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಜಂಟಿ ಕಾರ್ಯದರ್ಶಿ ಮಿಥುನ ದೇಶಪಾಂಡೆ, ಗ್ರಾಮ ಪಂಚಾಯಿತಿ ಸದಸ್ಯರಾದ ಶಮಾ ಜಮಾದಾರ, ಅನಿತಾ ಲಕ್ಕೋಳೆ, ನಿವೃತ್ತ ಉಪನ್ಯಾಸಕ ಪಿ.ಎ. ಕುಲಕರ್ಣಿ, ಪ್ರಾಧ್ಯಾಪಕ ವಿ.ಟಿ. ಬಿಕ್ಕನ್ನವರ, ಪತ್ರಕರ್ತ ಚಂದ್ರಶೇಖರ ಚಿನಕೇಕರ, ಯಕ್ಸಂಬಾ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಗುರುಲಿಂಗ ಛಾವರ್, ಪ್ರಜ್ಞಾ ಬೇವಿನಗಿಡದ, ಅಮೃತಾ ಜೋಶಿ, ಅಮೃತಾ ಹಟ್ಯಾಗೋಳ ಇದ್ದರು.