ಮುಂಡರಗಿ 12 : ಉದ್ಯೋಗಕ್ಕೆ ಶಿಕ್ಷಣ ಮಟ್ಟದ ಕಡಿವಾಣವೇನಿಲ್ಲ. ಇವರಿಗೆ ಸಣ್ಣ ಕೆಲಸ ಅಥವಾ ದೊಡ್ಡ ಕೆಲಸವೆಂಬ ಹಮ್ಮು ಬಿಮ್ಮು ಕೂಡ ಇಲ್ಲ. ಆದರೆ ಕಾಲೇಜುಗಳಲ್ಲಿ ಪದವಿ ಮುಗಿಸಿ ಮತ್ತು ಓದುತ್ತಲೇ ನರೇಗಾ ಯೋಜನೆಯ ಸಮುದಾಯ ಕಾಮಗಾರಿಯಲ್ಲಿ ಮುಂಡರಗಿ ತಾಲೂಕಿನ ಹಳ್ಳಿಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ವೆಂಕಟಾಪೂರ ಗ್ರಾಮದ ಮೂವರು ವಿದ್ಯಾರ್ಥಿನಿಯರು ತೊಡಗಿಕೊಂಡಿದ್ದಾರೆ.
ಆ ಮೂಲಕ 370 ರೂಪಾಯಿ ಕೂಲಿಮೊತ್ತದಿಂದ ಈ ವಿದ್ಯಾರ್ಥಿಗಳು ಗುದ್ದಲಿ, ಸಲಾಕೆ ಹಿಡಿದು ತಮ್ಮ ಮುಂದಿನ ವಿದ್ಯಾಭ್ಯಾಸದ ಜೊತೆಗೆ ಸಹೋದರರ ಓದಿಗೂ ನೆರವಾಗಿದ್ದಾರೆ. ಅದರಲ್ಲೂ ಕಳೆದ ವರ್ಷ ನರೇಗಾ ಯೋಜನೆಯಡಿ ದುಡಿದು ಬಂದ ಹಣದಿಂದ ಪದವಿ ಮುಗಿಸಿದ ವಿಜಯಲಕ್ಷ್ಮಿ ಶಿವಸಿಂಪಿಗೇರ ನರೇಗಾ ಸಮುದಾಯ ಕಾಮಗಾರಿಗಳಲ್ಲಿ ನಾಲ್ವರು ಕುಟುಂಬ ಸದಸ್ಯರೊಂದಿಗೆ ತೊಡಗಿಕೊಂಡು ಕುಟುಂಬದ ನಿರ್ವಹಣೆಗೂ ನೆರವಾಗಿದ್ದಾಳೆ. ಸಹೋದರ ಬಿ.ಎ ಎರಡನೇ ಸೆಮ್ಮಿನಲ್ಲಿ ಓದುತ್ತಿದ್ದು, ಆತನ ಫೀಸು ಕಟ್ಟಲು ಸಹ ನರೇಗಾ ನೆರವಾಗಿದೆ ಎನ್ನುತ್ತಾರೆ ವಿಜಯಲಕ್ಷ್ಮಿ.ಚಂದ್ರಿಕಾ ಬಸವರಾಜ ಕಟಗೇರಿ ಎಂಬ ವೆಂಕಟಾಪೂರದ 20 ವರ್ಷದ ವಿದ್ಯಾರ್ಥಿನಿ ಸಹ ಗದುಗಿನ ಖಾಸಗಿ ಕಾಲೇಜಿನಲ್ಲಿ ಬಿ.ಎ ಎರಡನೇ ಸೆಮ್ ವ್ಯಾಸಂಗ ಮಾಡುತ್ತಿದ್ದಾಳೆ. ರಜಾದಿನಗಳಲ್ಲಿ ನರೇಗಾ ಸಮುದಾಯ ಕಾಮಗಾರಿಯಲ್ಲಿ ಕೂಲಿಕಾರಳಾಗಿ ದುಡಿದು ಬಂದ ಕೂಲಿಮೊತ್ತದಿಂದ ತನ್ನ ಕಾಲೇಜು ವ್ಯಾಸಂಗದ ಬಸ್ ಪಾಸ್, ಶುಲ್ಕ ಪಾವತಿ ಖರ್ಚಿನ ಜೊತೆಗೆ ಹೈಸ್ಕೂಲು, ಪ್ರಾಥಮಿಕ ಶಾಲೆಗಳಲ್ಲಿ ಕಲಿಯುತ್ತಿರುವ ತಮ್ಮಂದಿರ ಶೈಕ್ಷಣಿಕ ಖರ್ಚು ವೆಚ್ಚಗಳನ್ನು ನಿಭಾಯಿಸುತ್ತಿದ್ದಾಳೆ. ತಂದೆಗೆ ಹುಷಾರಿಲ್ಲದಾಗ ಮನೆಮಂದಿಯೆಲ್ಲ ನರೇಗಾ ಯೋಜನೆಯಡಿ ದುಡಿದು ಬಂದ ಹಣದಿಂದಲೇ ವೈದ್ಯಕೀಯ ಖರ್ಚನ್ನು ಸಹ ನಿಭಾಯಿಸಿದ್ದೇವೆ ಎನ್ನುತ್ತಾಳೆ. ವೆಂಕಟಾಪೂರ ಗ್ರಾಮದ ಮತ್ತೊಬ್ಬ ಕೂಲಿಕಾರ ಮಹಿಳೆ ಶೋಭಾ ಗೋಣಿಸ್ವಾಮಿ ಸಹ ಪದವಿ ಮುಗಿಸಿದ್ದು ನರೇಗಾ ಕೂಲಿಮೊತ್ತ ಬಹು ಉಪಯೋಗಕಾರಿಯಾಗಿದೆ ಎನ್ನುತ್ತಾರೆ. ಕೃಷಿ ಕುಟುಂಬದ ನಾನು ಈಗಾಗಲೇ ಪದವಿ ಮುಗಿಸಿದ್ದು ಕೆಲಸದ ಹುಡುಕಾಟದಲ್ಲಿದ್ದೇನೆ. ನರೇಗಾ ಸಮುದಾಯ ಕಾಮಗಾರಿಯಲ್ಲಿ ತೊಡಗಿಕೊಳ್ಳುವುದರಿಂದ ಬಂದ ಕೂಲಿ ಹಣ ಸಂದರ್ಶನಗಳಿಗೆ ಹಾಜರಾಗಲು ಬಹಳ ಸಹಕಾರಿಯಾಗಿದ್ದು, ಕುಟುಂಬ ನಿರ್ವಹಣೆಗೆ ನೆರವಾಗಲು ಸಹ ಅನುಕೂಲವಾಗಿದೆ ಎಂದು ಹರ್ಷ ವ್ಯಕ್ತಪಡಿಸುತ್ತಾರೆ.
ನರೇಗಾ ಕೂಲಿಮೊತ್ತ 370 ರೂಪಾಯಿಗಳಿಗೆ ಹೆಚ್ಚಳವಾಗಿರುವುದು ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಿದೆ. ಆ ಮೂಲಕ ಪದವಿ ಶಿಕ್ಷಣಕ್ಕೆ ಹಣ ಹೊಂದಿಸಲು ಪರಿತಪಿಸುತ್ತಿದ್ದ ಬಡಕುಟುಂಬದ ವಿದ್ಯಾರ್ಥಿಗಳಿಗೆ ನರೇಗಾ ಯೋಜನೆ ಕೈಹಿಡಿದಿದೆ. ಶುಲ್ಕ ಕಟ್ಟಲು ಹಾಗೂ ಕಲಿಕೆಯ ನಂತರ ಕೆಲಸ ಹುಡುಕಲು ಉದ್ಯೋಗಖಾತ್ರಿ ಯೋಜನೆ ನೆರವಾಗಿದ್ದು, ತಮ್ಮ ಶಿಕ್ಷಣದ ಜೊತೆಗೆ ಸಹೋದರ ಸಹೋದರಿಯರ ವ್ಯಾಸಂಗ ಮುಂದುವರೆಸಲು ಸಹ ಅವರಿಗೆ ಭರವಸೆ ಮೂಡಿಸಿದೆ.
ಮುಂಡರಗಿ ತಾಲೂಕಿನ ಗ್ರಾಪಂಗಳಲ್ಲಿ ಐಇಸಿ ಚಟುವಟಿಕೆ ಮೂಲಕ ಸಾಕಷ್ಟು ಜಾಗೃತಿ ಕಾರ್ಯಕ್ರಮ ನಡೆಸಲಾಗಿದ್ದು, ನರೇಗಾ ಯೋಜನೆ ಯಶಸ್ವಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ. ತಾಲೂಕಿನಲ್ಲಿ ವಿಶೇಷಚೇತನರಿಗೆ ಆರ್ಥಿಕ ಗುಣಮಟ್ಟ ಸುಧಾರಿಸಲು ಹಾಗೂ ಪದವಿ ವಿದ್ಯಾರ್ಥಿನಿಯರ ಜೊತೆಗೆ ಅವರ ಸಹೋದರ/ರಿಯರಿಗೂ ನರೇಗಾ ಕೂಲಿಮೊತ್ತ ಶೈಕ್ಷಣಿಕ ವೆಚ್ಚಕ್ಕೆ ಕಾರಣವಾಗಿರುವುದು ಖುಷಿಯ ಸಂಗತಿ.