ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬಹುಭಾಷಾ ಕವಿಗೋಷ್ಠಿ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬಹುಭಾಷಾ ಕವಿಗೋಷ್ಠಿ Multilingual poetry recital as part of International Women's Day

ವಿಜಯಪುರ: ಮಹಿಳೆಯರು ಆತ್ಮಗೌರವ, ಆತ್ಮವಿಶ್ವಾಸ ಮತ್ತು ಆತ್ಮಸ್ಥೈರ್ಯದಂತಹ ಗುಣಗಳನ್ನು ಬೆಳೆಸಿಕೊಂಡರೆ ಸಮಾಜದಲ್ಲಿ ಧೈರ್ಯವಾಗಿ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದು ಕವಿಯಿತ್ರಿ ಡಾ.ರೇಖಾ ಪಾಟೀಲ ಹೇಳಿದರು. ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಾಗೂ ಕಲಾ ನಿಕಾಯದ ಸಹಯೋಗದೊಂದಿಗೆ ಮಹಿಳಾ ಸಾಂಸ್ಕೃತಿಕ ಹಬ್ಬ-2026 ಪ್ರಯುಕ್ತ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ಬಹುಭಾಷಾ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. 

ಮಹಿಳೆಯರ ಮೇಲಿನ ದೌರ್ಜನ್ಯವನ್ನು ತೊಡೆದು ಹಾಕಿ ಅವರು ತಲೆಯೆತ್ತಿ ನಿಲ್ಲಲು ಸಮಾಜದ ಎಲ್ಲರೂ ಸಹಕಾರ ನೀಡಬೇಕು. ಜಾಗತಿಕ ಮಟ್ಟದಲ್ಲಿ ಮಹಿಳೆಯರು ಹಲವು ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆದಿದ್ದರೂ, ದೈಹಿಕ ಮತ್ತು ಮಾನಸಿಕ ಒತ್ತಡಗಳನ್ನು ಎದುರಿಸುವ ಪರಿಸ್ಥಿತಿ ಇಂದಿಗೂ ಇದೆ. ಮಹಿಳೆಯರು ತಮ್ಮ ಮೇಲಿನ ದೌರ್ಜನ್ಯಗಳ ಕುರಿತು ದೂರು ನೀಡಲು ಇನ್ನೂ ಹಿಂಜರಿಯುತ್ತಿದ್ದಾರೆ, ಏಕೆಂದರೆ ಅಪರಾಧಿಗಳಿಂದಾಗುವ ಮುಂದಿನ ತೊಂದರೆಗಳ ಭಯ ಇದೆ ಎಂದು ಹೇಳಿದರು. ಲಿಂಗ ಅಸಮಾನತೆ ಮತ್ತು ಲಿಂಗ ಆಧಾರಿತ ತಾರತಮ್ಯವು ಇಂದಿಗೂ ಸಮಾಜದಲ್ಲಿ ದೊಡ್ಡ ಸಮಸ್ಯೆಯಾಗಿ ಮುಂದುವರಿದಿದೆ ಎಂದು ಅವರು ಅಭಿಪ್ರಾಯಪಟ್ಟರು. 

ಕುಲಸಚಿವ ಶಂಕರಗೌಡ ಸೋಮನಾಳ ಅಧ್ಯಕ್ಷತೆ ವಹಿಸಿದ್ದರು.  ಕವಿಗೋಷ್ಠಿಯಲ್ಲಿ 60ಕ್ಕೂ ಹೆಚ್ಚು ಕವಿಗಳು ಮತ್ತು ಕವಯತ್ರಿಯರು ಕವನ ವಾಚನ ಮಾಡಿದರು.  ಮಹಿಳಾ ಸಾಂಸ್ಕೃತಿಕ ಹಬ್ಬದ ಸದಸ್ಯ ಸಂಚಾಲಕಿ ಪ್ರೊ.ಲಕ್ಷ್ಮೀದೇವಿ ವೈ, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಂಶೋಧನಾ ಮತ್ತು ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.  ಕಾರ್ಯಕ್ರಮದಲ್ಲಿ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆ ಹಾಡಿದರು. ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷೆ ಪ್ರೊ.ರಾಜು ಬಾಗಲಕೋಟ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಪದ್ಮಶ್ರೀ ಚೌಗಲೆ ಅತಿಥಿಯರನ್ನು ಪರಿಚಯಿಸಿದರು. ಪ್ರೊ.ಎಮ್‌.ನಾಗರಾಜ ವಂದಿಸಿದರು. ಡಾ.ಅಕ್ಷಯ ಯಾರ್ದಿ ನಿರೂಪಿಸಿದರು.