7 ಜಿಲ್ಲೆಗಳಲ್ಲಿ ಶಿಕ್ಷಣ, ಉದ್ಯೋಗಕ್ಕೆ ಹೆಚ್ಚು ಮೀಸಲಾತಿ: ಡಿಸಿ ದಿವಾಕರ

ಹೊಸಪೇಟೆ (ವಿಜಯನಗರ): ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ವಿಶೇಷ ಸ್ಥಾನಮಾನ ಕಲ್ಪಿಸುವ ಹಿತ ದೃಷ್ಟಿಯಿಂದ ಸಂವಿಧಾನ ತಿದ್ದುಪಡಿ ಕಾಯ್ದೆಯಡಿ ಜಾರಿಗೆ ತಂದ  371 (ಜೆ) ಮೀಸಲಾತಿಯಿಂದ ಭಾಗದ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ಸಾಧ್ಯವಾಯಿತು ಎಂದು ಜಿಲ್ಲಾಧಿಕಾರಿ ದಿವಾಕರ ಎಂ.ಎಸ್‌. ಅವರು ತಿಳಿಸಿದರು.  

ಜಿಲ್ಲಾಡಳಿತದಿಂದ ಭಾನುವಾರ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.   

ಭವ್ಯ ಪರಂಪರೆ ಹೊಂದಿರುವ ಭಾರತ ಹತ್ತಾರು ಕಾರಣಗಳಿಗಾಗಿ ಪರಕೀಯರ ಆಡಳಿತಕ್ಕೆ ಒಳಗಾಗಿತ್ತು. ಇದರ ಪರಿಣಾಮವಾಗಿ ಈ ನಾಡಿನ ಜನ ಸಂಕಷ್ಟಗಳ ಸರಮಾಲೆಯನ್ನೇ ಅನುಭವಿಸಿದ್ದು ಈಗ ಚರಿತ್ರೆಯ ಭಾಗವಾಗಿ ಹೋಗಿದೆ ಎಂದರು.  

ಭಾರತವನ್ನು ಬ್ರಿಟೀಷರ ಬಿಗಿ ಮುಷ್ಟಿಯಿಂದ ಬಿಡಿಸಿಕೊಳ್ಳಲು ಸುದೀರ್ಘ ಹೋರಾಟವನ್ನೇ ಭಾರತೀಯರು ಮಾಡಿದ್ದು, ಅಂತಿಮವಾಗಿ 1947ರ ಆಗಸ್ಟ್‌ 15 ರಂದು ಸ್ವಾತಂತ್ರ್ಯ ಗಳಿಸಿಕೊಂಡಿತ್ತು, ಆದರೆ ಹೈದ್ರಾಬಾದ್ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದ ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ ಹಾಗೂ ಬಳ್ಳಾರಿ ಪ್ರದೇಶಗಳು ಸ್ವಾತಂತ್ರವಾಗಲು ಒಂದು ವರ್ಷ ಕಾಲ ಕಾಯಬೇಕಾಯಿತು.  

ಸ್ವಾತಂತ್ರ್ಯ ನಂತರವೂ ಹೈದ್ರಬಾದ್ ಸಂಸ್ಥಾನದ ಪ್ರಜೆಗಳಿಗೆ ಸ್ವಾತಂತ್ರ್ಯ ದೊರೆತಿರಲಿಲ್ಲ. ಸ್ವತಂತ್ರ ರಾಷ್ಟ್ರಕಟ್ಟುವ ಬಯಕೆಯಿಂದ ಹೈದ್ರಾಬಾದ್ ನಿಜಾಮರು ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಸೇರಿಕೊಳ್ಳದೇ ಸ್ವತಂತ್ರವಾಗಿರಲು ಬಯಸಿ ಹೈದ್ರಾಬಾದ್ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿದರು. ಇದರಿಂದಾಗಿ ಭಾರತದೊಡನೆ ವೀಲೀನಗೊಳ್ಳುವ ಉದ್ದೇಶದಿಂದ ಹೈದ್ರಾಬಾದ್ ಸಂಸ್ಥಾನದ ಜನರು ಮತ್ತು ಸ್ವಾಮಿ ರಮಾನಂದ ತೀರ್ಥರು ಸೇರಿ ಅಹಿಂಸಾತ್ಮಕ ಚಳುವಳಿಯನ್ನು ಪ್ರಾರಂಭಿಸಿದರು.  

ಸ್ವಾಮಿ ರಮಾನಂದ ತೀರ್ಥರು ಕಾಲೇಜು ವಿದ್ಯಾರ್ಥಿಗಳಿಗೆ ನೀಡಿದ “ಕ್ವೀಟ್ ಕಾಲೇಜು ಆ್ಯಕ್ಟ್‌ ನವ್‌”  ಕರೆಗೆ ಸಾವಿರಾರು ಕಾಲೇಜು ಹಾಗೂ ಶಾಲಾ ವಿಧ್ಯಾರ್ಥಿಗಳು ಚಳುವಳಿಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬಲ ತುಂಬಿದರು, ಇಷ್ಟೇ ಅಲ್ಲದೇ ಗ್ರಾಮೀಣ ಪ್ರದೇಶದಲ್ಲಿ ಅನ್ನದಾನಯ್ಯ ಪುರಾಣಿಕ, ಪ್ರಭುರಾಜ ಪಾಟೀಲ್, ಶಿವಮೂರ್ತಿಸ್ವಾಮಿ ಅಳವಂಡಿ,  ಡಾ. ಚುರ್ಚಿಹಾಳ್ಮಠ, ಭೀಮಜ್ಜ, ಕೊರ್ಲಹಳ್ಳಿ ಶ್ರೀನಿವಾಸಚಾರಿ, ಕಟಾಪುರದ ಹನುಮಂತರಾವ್, ಕಿಸಾನ್ ರಾವ್ ದೇಸಾಯಿ, ಶೇಷಪ್ಪ ಪತ್ತಾರ್, ಕುರುಬರ ಯಲ್ಲಪ್ಪ, ಹರಿಜನ ಹಳ್ಳೆಪ್ಪ, ನಾಗೋಜಿ ಓದೋಜಿ, ಮುಂತಾದವರು ಕಲ್ಯಾಣ ಕರ್ನಾಟಕ ವಿಮೋಚನೆಗೆ ತಮ್ಮ ಪ್ರಾಣವನ್ನೇ ಲೆಕ್ಕಿಸದೇ ಹೋರಾಡಿದರು.   

ಅಲ್ಲದೇ ಅಕ್ಕಮ್ಮ ಮಹಾದೇವಿ, ರಟ್ಟಗಲ್ಲ ಸೂಗಮ್ಮ, ಹಟಿ ಗುರುಬಸವ್ವ, ಸೀತಮ್ಮ, ಬಡಿಗೇರ ಮುಂತಾದ ಮಹಿಳಾ ಮುಖಂಡರು ತ್ರಿವರ್ಣ ಧ್ವಜ ಹಿಡಿದು ವಂದೇ ಮಾತರಂ ಘೋಷಣೆ ಕೂಗುತ್ತಾ ಈ ಭಾಗದ ಜನರಲ್ಲಿ ಧೈರ್ಯ ತುಂಬಿದರು.   

ನಿಜಾಮರ ವಿರುದ್ಧ ಭಾರತದ ಉಕ್ಕಿನ ಮನುಷ್ಯ ಸರ್ದಾರ ವಲ್ಲಭಬಾಯಿ ಪಟೇಲರು, 1948ರ ಸೆಪ್ಟೆಂಬರ್ 13 ರಂದು ದಿಟ್ಟತನದಿಂದ ಭಾರತದ ಸೇನೆಯ ಮುಖಂಡ ಜನರಲ್ ಚೌದ್ರಿ ನೇತೃತ್ವದಲ್ಲಿ ಕೈಗೊಂಡ ಪೊಲೀಸ್ ಕಾರ್ಯಚರಣೆಯಲ್ಲಿ ಹೈದ್ರಾಬಾದ್ ನಿಜಾಮರು ಶರಣಾಗಿ ಭಾರತದ ಒಕ್ಕೂಟ ವ್ಯವಸ್ಥೆಗೆ ಸೇರೆ​‍್ಡಗೊಳ್ಳಲು ಒಪ್ಪಿಕೊಂಡರು.   

ಕಲ್ಯಾಣ ಕರ್ನಾಟಕ ಭಾಗದ ವ್ಯಾಪ್ತಿಗೆ ಒಳಪಡುವ 07 ಜಿಲ್ಲೆಗಳಲ್ಲಿ ಶಿಕ್ಷಣ ಹಾಗೂ ಉದ್ಯೋಗ ಮೀಸಲಾತಿಗಾಗಿ ಶೇ. 80 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ ಹಾಗೂ ಇತರೆ ಜಿಲ್ಲೆಗಳಲ್ಲಿ ಈ ಭಾಗದ ಜನರಿಗಾಗಿ ಶೇ. 8 ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿದೆ ಎಂದರು.  

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಯೋಜನೆಯಡಿಯಲ್ಲಿ ವಿಜಯನಗರ ಜಿಲ್ಲೆಗೆ 2022-23ನೇ ಸಾಲಿಗೆ ಮೈಕ್ರೋ ಹಾಗೂ ಮ್ಯಾಕ್ರೋ, ಮೆಗಾ ಮ್ಯಾಕ್ರೋ ಅಡಿಯಲ್ಲಿ ಮಂಡಳಿಯಿಂದ 298 ಕಾಮಗಾರಿಗಳು ರೂ. 20342.63 ಲಕ್ಷಗಳಿಗೆ ಹಂಚಿಕೆ ಮಾಡಿ  ಅನುಮೋದನೆಗೊಂಡಿರುತ್ತದೆ. ಈಗಾಗಲೇ 71 ಕಾಮಗಾರಿಗಳು ಪೂರ್ಣಗೊಂಡಿರುತ್ತವೆ ಹಾಗೂ 135 ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ ಉಳಿದ 92 ಕಾಮಗಾರಿಗಳು ಪ್ರಾರಂಭಿಸುವ ಹಂತದಲ್ಲಿರುತ್ತವೆ ಎಂದರು.  

ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ.ರಝಾಕ ಉಸ್ತಾದ್ ಅವರು ವಿಶೇಷ ಉಪನ್ಯಾಸ ನೀಡುತ್ತಾ ಕಲ್ಯಾಣ ಕರ್ನಾಟಕ ಭಾಗವು 2 ಬಾರಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದೆ. ಆಪರೇಷನ್ ಪೋಲೋ ಎಂಬ ಹೆಸರಿನ ಮೂಲಕ ಪೋಲಿಸ್ ಪಡೆ ಹೈದರಾಬಾದಿಗೆ ತೆರಳಿ ಕಾರ್ಯಾಚರಣೆ ನಡೆಸಿ ರೇಡಿಯೋ ಮೂಲಕ ಭಾರತ ಒಕ್ಕೂಟಕ್ಕೆ ಸೇರೆ​‍್ಡಗೊಂಡ ಕುರಿತು ಘೋಷಣೆ ಮಾಡಲಾಯಿತು. ಒಟ್ಟಾರೆಯಾಗಿ ಈ ಭಾಗದಲ್ಲಿ ವರ್ಷಕ್ಕೆ ಮೂರು ಸಲ ರಾಷ್ಟ್ರೀಯ ಹಬ್ಬ ಆಚರಿಸುವ ಕೀರ್ತಿ ನಮ್ಮದಾಗಿದೆ ಎಂದರು.  

ಈ ಭಾಗ ಒಕ್ಕೂಟಕ್ಕೆ ಸೇರಿದ 75 ವರ್ಷದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ತುಂಗಭದ್ರಾ ಜಲಾಶಯ ನಿರ್ಮಾಣ ನಿಜಾಮರ ಅವಧಿಯಲ್ಲಿ ಆರಂಭವಾಗಿ 1953ರಲ್ಲಿ ಮುಕ್ತಾಯಗೊಂಡಿತು. ಹೈದ್ರಾಬಾದಿನ ಮೀರ್ ಉಸ್ಮಾನ್ ಅಲಿಖಾನ್ ಅವರು ಉದ್ಘಾಟಿಸಿದರು. ಈ ಹಿಂದೆ ಅವಿಭಜಿತ ಜಿಲ್ಲೆ ಮದ್ರಾಸ್ ರಾಜ್ಯದ ಆಡಳಿತಕ್ಕೆ ಒಳಪಟ್ಟಿತ್ತು. 1953ರಲ್ಲಿ ಮೈಸೂರಿಗೆ ಬಳ್ಳಾರಿ ಸೇರಿಸಿ,   

ಹೈದ್ರಾಬಾದ್ ಸಂಸ್ಥಾನ ರಾಜ್ಯವಾಗಿ ಘೋಷಿಸಲಾಗಿತು. ಆ ದಿನದಲ್ಲಿ ಮುಲ್ಕಿ ಕಾನೂನಿನ ಮೂಲಕ ಉದ್ಯೋಗ ಸೌಲಭ್ಯ ನೀಡಲಾಗಿತ್ತು. ಇಚ್ಚಾಶಕ್ತಿಯ ಕೊರತೆ ಕಾರಣ 70 ವರ್ಷದ ನಂತರ 371ಜೆ ಸೌಲಭ್ಯ ಪಡೆಯುವಂತಾಯಿತು. ಈ ಭಾಗದಲ್ಲಿ ಅಭಿವೃದ್ಧಿ ಜೊತೆಗೆ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.  

ಅತಿ ಎತ್ತರದಲ್ಲಿ ಹಾರಾಡಿದ ರಾಷ್ಟ್ರ ಧ್ವಜ:  

ಜಿಲ್ಲಾ ಕ್ರೀಡಾಂಗಣದಲ್ಲಿ ನಿರ್ಮಿಸಿದ 405 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಬೃಹತ್ ರಾಷ್ಟ್ರಧ್ವಜವನ್ನು ಹಾರಿಸಲಾಯಿತು. ನಂತರ ವೇದಿಕೆಯ ಬಳಿ ಜಿಲ್ಲಾಧಿಕಾರಿಗಳು ಬಾಬಾಡಾ.ಬಿ.ಆರ್‌.ಅಂಬೇಡ್ಕರ್, ಮಹಾತ್ಮಾ ಗಾಂಧೀಜಿ ಹಾಗೂ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿದರು ಗೌರವ ಸಲ್ಲಿಸಿದರು. ನಂತರ ವಿವಿಧ ತುಕಡಿಗಳಿಂದ ಗೌರವ ವಂದನೆ ಸಲ್ಲಿಸಿ ನಂತರ ಪಥ ಸಂಚಲನ ನೆರವೇರಿಸಲಾಯಿತು.  

ಪೊಲೀಸ್, ಮಹಿಳಾ ಪೊಲೀಸ್, ಗೃಹರಕ್ಷಕ ದಳ, ವಿಜಯನಗರ ಕಾಲೇಜು ಎನ್‌ಸಿಸಿ ಘಟಕ, ಸ್ಕೌಟ್ಸ್‌ ಮತ್ತು ಗೈಡ್ಸ್‌, ಭಾರತ ಸೇವಾದಳ, ಆಶಾ ಕಾರ್ಯಕರ್ತೆಯರು ಹಾಗೂ ನಗರಸಭೆ ಪೌರಕಾರ್ಮಿಕರು ಸೇರಿದಂತೆ ಸಾಧ್ಯ ವಿಶೇಷ ಮಕ್ಕಳ ಶಾಲೆಯ ಮಕ್ಕಳು ಸಹ ಶಿಸ್ತಿನಿಂದ ಪಥಸಂಚಲನದಲ್ಲಿ ಹೆಜ್ಜೆ ಹಾಕಿದರು.  

ಭಾಷಣ, ಉಪನ್ಯಾಸ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ನೃತ್ಯ ಪ್ರದರ್ಶನ ಕೈಗೊಳ್ಳಲಾಯಿತು.  

ಶಾಸಕ ಹೆಚ್‌.ಆರ್‌.ಗವಿಯಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು, ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಭೀಮಪ್ಪ ಲಾಳಿ, ಶಿಕ್ಷಣ ಇಲಾಖೆ ಉಪನಿರ್ದೇಶಕ ಯುವರಾಜ ನಾಯಕ, ಉಪವಿಭಾಗಾಧಿಕಾರಿ ನೋಂಗ್ಡಾಯ್ ಮೊಹಮ್ಮದ್ ಅಲಿ ಅಕ್ರಮ್ ಶಾ, ತಹಶೀಲ್ದಾರ್ ವಿಶ್ವಜೀತ್ ಮೆಹ್ತಾ, ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.  

*-*-*-*-*  

ವಾರ್ತಾ ಇಲಾಖೆಯ ಅಮೃತ ಮಹೋತ್ಸವ ಸ್ಮರಣ ಸಂಚಿಕೆ ಬಿಡುಗಡೆ   

ಹೊಸಪೇಟೆ (ವಿಜಯನಗರ),ಸೆ.18: ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿರುವ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಸ್ಮರಣ ಸಂಚಿಕೆಯನ್ನು ಜಿಲ್ಲಾಧಿಕಾರಿ ದಿವಾಕರ ಎಂ.ಎಸ್‌. ಅವರು ಬಿಡುಗಡೆ ಮಾಡಿದರು.  

ಕಾರ್ಯಕ್ರಮದಲ್ಲಿ ಶಾಸಕ ಹೆಚ್‌.ಆರ್‌.ಗವಿಯಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು, ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಉಪವಿಭಾಗಾಧಿಕಾರಿ ನೋಂಗ್ಡಾಯ್ ಮೊಹಮ್ಮದ್ ಅಲಿ ಅಕ್ರಮ್ ಶಾ, ತಹಶೀಲ್ದಾರ್ ವಿಶ್ವಜೀತ್ ಮೆಹ್ತಾ, ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಉಪಸ್ಥಿತರಿದ್ದರು.  

*-*-*-*  

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಲ್ಯಾಣ ಕರ್ನಾಟಕ ದಿನಾಚರಣೆ  

ಹೊಸಪೇಟೆ (ವಿಜಯನಗರ),ಸೆ.18:ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಭಾನುವಾರ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಕಚೇರಿಯ ಆವರಣದಲ್ಲಿ ಧ್ವಜಾರೋಹಣವನ್ನು ಜಿಲ್ಲಾಧಿಕಾರಿ ದಿವಾಕರ ಎಂ.ಎಸ್‌. ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ ಜಿ. ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.  

*-*-*-*  

ತಾಲೂಕಾಡಳಿತದಿಂದ ಕಲ್ಯಾಣ ಕರ್ನಾಟಕ ದಿನಾಚರಣೆ  

ಹೊಸಪೇಟೆ (ವಿಜಯನಗರ),ಸೆ.18: ಹೊಸಪೇಟೆ ತಾಲೂಕು ಆಡಳಿತದಿಂದ ಭಾನುವಾರ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು. ತಾಲೂಕು ಕಚೇರಿ ಆವರಣದಲ್ಲಿ ತಹಶೀಲ್ದಾರ್ ವಿಶ್ವಜೀತ್ ಮೆಹ್ತಾ ಅವರು ಧ್ವಜಾರೋಹಣ ನೆರವೇರಿಸಿದರು. ತಾಲ್ಲೂಕು ಕಚೇರಿ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.  

ಜಿಲ್ಲಾಡಳಿತದಿಂದ ವಿಶ್ವಕರ್ಮ ಜಯಂತ್ಯೋತ್ಸವ  

ಹೊಸಪೇಟೆ (ವಿಜಯನಗರ),ಸೆ.18:ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಭಾನುವಾರ ವಿಶ್ವಕರ್ಮ ಜಯಂತ್ಯೋತ್ಸವ ಆಚರಣೆ ಹಮ್ಮಿಕೊಳ್ಳಲಾಯಿತು.  

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶ್ರೀ ವಿಶ್ವಕರ್ಮ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪನಮನ ನೆರವೇರಿಸಲಾಯಿತು.  

ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ನಾಗರಾಜ ಪತ್ತಾರ ಅವರು ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ವಿಶ್ವಕರ್ಮ ಹಾಗೂ ಇತರ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.