ವಿವಿಧ ತಂಡಗಳನ್ನೊಳಗೂಡಿ ಚುನಾವಣಾ ಕಾರ್ಯ ಯಶಸ್ವಿಗೊಳಿಸಿ :ಚಂದ್ರಶೇಖರ ಸಖಮುರಿ ಕರೆ

ಬಳ್ಳಾರಿ,ಏ.20: ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ನಮ್ಮ ಹೆಮ್ಮೆಯ ಭಾರತದಲ್ಲಿ ನಡೆಯುತ್ತಿರುವ ಪ್ರಸ್ತುತ ಲೋಕಸಭಾ ಚುನಾವಣೆಯು ನಮ್ಮ ದೇಶದ ಹೆಮ್ಮೆಯಾಗಿದ್ದು, ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸಲು ಅಧಿಕಾರಿಗಳನ್ನು ಒಳಗೊಂಡಿರುವ ವಿವಿಧ ತಂಡಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿ ಚುನಾವಣಾ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಬಳ್ಳಾರಿ ಲೋಕಸಭೆ ಚುನಾವಣೆಯ ಸಾಮಾನ್ಯ ವೀಕ್ಷಕ ಚಂದ್ರಶೇಖರ ಸಖಮುರಿ ಅವರು ಕರೆ ನೀಡಿದರು. 

ಶುಕ್ರವಾರದಂದು, ಬಳ್ಳಾರಿ ಲೋಕಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ ಚುನಾವಣೆ ಸಿದ್ಧತೆ ಕುರಿತು ಎಲ್ಲಾ ಸಹಾಯಕ ಚುನಾವಣಾಧಿಕಾರಿಗಳು, ವಿವಿಧ ಸಮಿತಿಗಳ ನೋಡೆಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. 

ಮತದಾರರು ಮುಕ್ತವಾಗಿ ಮತದಾನ ಮಾಡಲು ಶಾಂತಿಯುತ, ಸುವ್ಯವಸ್ಥಿತವಾದ ವಾತಾವರಣ ರೂಪಿಸಬೇಕು. ಈ ನಿಟ್ಟಿನಲ್ಲಿ ಎಲ್ಲಾ ಸಹಾಯಕ ಚುನಾವಣಾಧಿಕಾರಿಗಳು, ವಿವಿಧ ಸಮಿತಿಯ ನೋಡೆಲ್ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಚುನಾವಣಾ ಆಯೋಗ ನಿರ್ದೇಶನದನ್ವಯ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು. 

ಚುನಾವಣೆ ಕಾರ್ಯಕ್ಕೆ ಎಲ್ಲ ನಿಯೋಜಿತ ಅಧಿಕಾರಿಗಳು ತರಬೇತಿ ಹೊಂದಿದ್ದು, ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು. ಈ ಕುರಿತು ಚುನಾವಣೆಯ ಎಲ್ಲ ಕಾರ್ಯ ಸಿದ್ದತೆಗಳನ್ನು ನಿಯಮಾನುಸಾರ ಪರೀಶೀಲಿಸಬೇಕು ಎಂದು ನಿರ್ದೇಶನ ನೀಡಿದರು. 

ಚುನಾವಣಾ ಆಯೋಗದ ಮಾರ್ಗಸೂಚಿಗಳನ್ವಯ ಮತಗಟ್ಟೆ ಕೇಂದ್ರಗಳಲ್ಲಿ ಕನಿಷ್ಟ ಮೂಲ ಸೌಲಭ್ಯಗಳ ಸಿದ್ದತೆಗಳನ್ನು ಖಚಿತಪಡಿಸಿಕೊಳ್ಳಬೇಕು.  ಮತದಾರರ ಸಂಖ್ಯೆಗೆ ಅನುಗುಣವಾಗಿ ಮತಗಟ್ಟೆಗಳಲ್ಲಿ ಮೂಲಸೌಲಭ್ಯಗಳನ್ನು ಒದಗಿಸಲು ಇನ್ನೂ ಸಾಕಷ್ಟು ಕಾಲಾವಕಾಶ ನಿಮ್ಮಲ್ಲಿ ಇದೆ. ಈ ಕುರಿತು ಸಹಾಯಕ ಚುನಾವಣಾಧಿಕಾರಿಗಳು ಆಸಕ್ತಿ ವಹಿಸಿ ಸೂಕ್ತ ಕ್ರಮ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. 

ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಿ: 

ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳಾದ ಬೆಳಕು, ನೆರಳು, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಹಿರಿಯ ನಾಗರಿಕರು ಮತ್ತು ವಿಶೇಷಚೇತನರಿಗೆ ರಾ​‍್ಯಂಪ್, ವೀಲ್‌ಚೇರ್ ಹಾಗೂ ಇತರೆ ವ್ಯವಸ್ಥೆಯನ್ನು ಮತದಾರರ ಸಂಖ್ಯೆಗೆ ಅನುಗುಣವಾಗಿ ಕೈಗೊಳ್ಳಬೇಕು ಎಂದು ನಿರ್ದೇಶಿಸಿದೆ. ಈ ನಿಟ್ಟಿನಲ್ಲಿ ಆಯಾ ಕ್ಷೇತ್ರದ ಎಆರ್‌ಓಗಳು ಮೂಲಭೂತ ಸೌಕರ್ಯಗಳು ಸುಸ್ಥಿತಿಯಲ್ಲಿವೆಯೇ ಎಂಬುದನ್ನು ಪರೀಶೀಲಿಸಬೇಕು. ಇಲ್ಲದಿದ್ದಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು. ಉತ್ತಮ ಸೌಲಭ್ಯಗಳು ಮತದಾರರನ್ನು ಸೆಳೆಯಲು ಸಹಕಾರಿಯಾಗುತ್ತವೆ ಎಂದರು. 

ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಎಫ್‌ಎಸ್‌ಟಿ, ಎಸ್‌ಎಸ್‌ಟಿ ಹಾಗೂ ವಿವಿಟಿ ತಂಡಗಳು ತಮ್ಮ ಕಾರ್ಯಗಳನ್ನು ಚುರುಕುಗೊಳಿಸಬೇಕು. ಚುನಾವಣಾ ಅಕ್ರಮಗಳ ಮೇಲೆ ನಿಗಾವಹಿಸಬೇಕು. ಅದರಂತೆಯೇ ಇತರೆ ಸಮಿತಿಗಳೂ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು. 

ವಿವಿಧ ಸಮಿತಿಗಳನ್ನೊಳಗೊಂಡಂತೆ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡ ಎಲ್ಲಾ ಅಧಿಕಾರಿಗಳು ಸಮನ್ವಯತೆಯಿಂದ ಕೂಡಿ ಕಾರ್ಯನಿರ್ವಹಿಸಿದರೆ ಚುನಾವಣೆ ಕಾರ್ಯವನ್ನು ಯಶಸ್ಸುಗೊಳಿಸಲು ಸಾಧ್ಯ ಎಂದು ಮನವರಿಕೆ ಮಾಡಿದರು. 

ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಸ್ಥಾಪಿಸಲಾಗಿರುವ ಚೆಕ್ ಪೋಸ್ಟ್‌ಗಳಲ್ಲಿ ಸಿಬ್ಬಂದಿಗಳು ಸಮರ​‍್ಕವಾಗಿ ವಾಹನಗಳ ತಪಾಸಣೆ ನಡೆಸಬೇಕು.  ಅಕ್ರಮ ಹಣ ಅಥವಾ ಸಾಮಗ್ರಿಗಳನ್ನು ಯಾವ ಯಾವ ರೀತಿಯಲ್ಲಿ ಸಾಗಿಸಬಹುದು ಎಂಬುದರ ಬಗ್ಗೆ ತಪಾಸಣಾ ಸಿಬ್ಬಂದಿಗಳಿಗೂ ತಿಳಿದಿರಬೇಕು. ಕೇವಲ ನೆಪ ಮಾತ್ರಕ್ಕೆ ತಪಾಸಣೆ ಮಾಡುವುದು ಸರಿಯಾದ ಕ್ರಮವಲ್ಲ ಎಂದರು. 

ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮಾತನಾಡಿ, ಬಳ್ಳಾರಿ ಲೋಕಸಭೆ ಮತಕ್ಷೇತ್ರದಲ್ಲಿ ಸಾರ್ವತ್ರಿಕ ಚುನಾವಣೆಯು ಶಾಂತಿಯುತ, ಮುಕ್ತ, ನ್ಯಾಯಸಮ್ಮತವಾಗಿ ಜರುಗಿಸಲು ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. 

09-ಬಳ್ಳಾರಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಏ.19 ರ ಮತದಾರರ ಪಟ್ಟಿಯನ್ವಯ ಒಟ್ಟು 18,84,040 ಮತದಾರರಿದ್ದು, 9,28,857 ಪುರುಷ ಮತದಾರರು, 9,54,914 ಮಹಿಳಾ ಮತದಾರರು ಮತ್ತು 269 ಲಿಂಗತ್ವ ಅಲ್ಪ ಸಂಖ್ಯಾತ ಮತದಾರರಿದ್ದಾರೆ. ಒಟ್ಟು 1925 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.  

ಎಎಲ್‌ಟಿ, ಇವಿಎಂ ತಂಡಗಳು, ಅಬಕಾರಿ ಇಲಾಖೆ, ಕಂಪ್ಲೈಂಟ್ ಮಾನಿಟರಿಂಗ್ ತಂಡ, ಸೆಕ್ಟರ್ ಅಧಿಕಾರಿಗಳು, ಎಂಸಿಸಿ ತಂಡ, ಎಂಸಿಎಂಸಿ ಮತ್ತು ಬಿಎಲ್‌ಓಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಮತಗಟ್ಟೆ ಅಧಿಕಾರಿಗಳಿಗೆ ಮೊದಲ ಹಂತದ ತರಬೇತಿ ನೀಡಲಾಗಿದೆ.  ಎಂಸಿಎಂಸಿ ಹಾಗೂ ಪೇಯ್ಡ್‌ ನ್ಯೂಸ್ ಕುರಿತಂತೆ ಮಾಧ್ಯಮದವರಿಗೆ ಕಾರ್ಯಗಾರ ಆಯೋಜಿಸಿ ಅರಿವು ಮೂಡಿಸಲಾಗಿದೆ ಎಂದು ತಿಳಿಸಿದರು. 

ಅಂಚೆ ಮತದಾನ ಸೇವೆಯಡಿ 85 ವರ್ಷಕ್ಕೂ ಮೇಲ್ಪಟ್ಟ 13,387 ಮತದಾರರ ಪೈಕಿ 663 ಮತದಾರರು, 24,512 ವಿಶೇಷಚೇತನ ಮತದಾರರಲ್ಲಿ 452 ಮತದಾರರು  ಮನೆಯಲ್ಲಿಯೇ ಮತದಾನ ಮಾಡಲು ಬಯಸಿ ನೋಂದಾಯಿಸಿಕೊಂಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮಾಹಿತಿ ನೀಡಿದರು. 

ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳ ತಪಾಸಣಾ ಸಮಯದಲ್ಲಿ ದಾಖಲೆರಹಿತ ಮತ್ತು ಚುನಾವಣಾ ಅಕ್ರಮಗಳಿಗೆ ಬಳಸಬಹುದಾದ ಸಂಶಯದ ಆಧಾರದಲ್ಲಿ ಪತ್ತೆಯಾದ ರೂ.6,09,94,580 ನಗದು, ರೂ.10,16,901 ಮೌಲ್ಯದ  2456.39 ಲೀಟರ್ ಮದ್ಯ, 1.569 ಕೆ.ಜಿ (ರೂ.54,500 ಮೊತ್ತದ) ಡ್ರಗ್ಸ್‌, 200.33 ಕೆ.ಜಿ (ರೂ.1,53,37,240 ಮೊತ್ತದ) ಬಂಗಾರ, ಬೆಳ್ಳಿ ಆಭರಣ ಮತ್ತು ರೂ. ರೂ.38,92,844 ಮೌಲ್ಯಗಳ ಕುಕ್ಕರ್, ಸೀರೆ, ಇತರೆ ಸೇರಿದಂತೆ ವಿವಿಧ ರೀತಿಯ ಉಚಿತ ಕೊಡುಗೆಗಳ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಲ್ಲಿಯವರೆಗೆ ದಾಖಲೆರಹಿತ ಮತ್ತು ಸಂಶಯಾಸ್ಪದವಾಗಿ ಹೊಂದಿದ್ದ ನಗದು ಹಣ, ವಸ್ತುಗಳು ಸೇರಿದಂತೆ ಒಟ್ಟು ರೂ.8,12,96,065 ಗಳ ಹಣವನ್ನು ಜಪ್ತಿ ಮಾಡಿ, ಚುನಾವಣಾ ಆಯೋಗದ ನಿರ್ದೇಶನದಂತೆ ನಿಯಮಾನುಸಾರ 429 ಪ್ರಕರಣ ದಾಖಲಿಸಿ ಅಗತ್ಯ ಕ್ರಮ ಜರುಗಿಸಲಾಗಿದೆ ಎಂದು ವಿವರಿಸಿದರು. 

ಈ ಬಾರಿ ಮಹಿಳಾ ಅಧಿಕಾರಿ, ಸಿಬ್ಬಂದಿಗಳನ್ನು ಹೊಂದಿರುವ 40 ಮತಗಟ್ಟೆಗಳು, ಯುವ ಅಧಿಕಾರಿ, ಸಿಬ್ಬಂದಿ ಇರುವ 08 ಮತಗಟ್ಟೆಗಳು, ವಿಕಲಚೇತನ ಅಧಿಕಾರಿ, ಸಿಬ್ಬಂದಿ ಹೊಂದಿರುವ 08 ಮತಗಟ್ಟೆಗಳು ಹಾಗೂ ವಿಶಿಷ್ಟ ಥೀಮ್ ಆಧಾರಿತ ಮಾದರಿಯ 08 ಮತಗಟ್ಟೆಗಳನ್ನು ಸ್ಥಾಪಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ್ ಬಂಡಾರು ಅವರು ಮಾತನಾಡಿ, ಎಂಸಿಸಿ ಉಲ್ಲಂಘನೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಒಟ್ಟು 25 ಪ್ರಕರಣ ದಾಖಲಾಗಿವೆ. ಪೊಲೀಸ್, ಎಫ್‌ಎಸ್‌ಟಿ ಮತ್ತು ಎಸ್‌ಎಸ್‌ಟಿ ಅಧಿಕಾರಿಗಳಿಂದ 58, ಅಬಕಾರಿ ಇಲಾಖೆಯಿಂದ 267 ಪ್ರಕರಣ ದಾಖಲಿಸಲಾಗಿದೆ.  ಈ ಹಿಂದಿನ ಘಟನೆಗಳು ಹಾಗೂ ಸಂಗತಿಗಳನ್ನು ಆಧರಿಸಿ, ಅಧಿಕಾರಿಗಳಿಂದ ವರದಿ ಪಡೆದು ಸೂಕ್ಷ್ಮ, ಸಾಮಾನ್ಯ ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.  

ಜಿಲ್ಲಾ ಸ್ವೀಪ್ ನೋಡೆಲ್ ಅಧಿಕಾರಿ ಹಾಗೂ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಅವರು ಮಾತನಾಡಿ, ಕಳೆದ ಲೋಕಸಭೆ ಚುನಾವಣೆಯಲ್ಲಿ ಶೇ.63.05 ರಷ್ಟು ಮತದಾನವಾಗಿತ್ತು.  ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸಲು ಮತದಾರರಲ್ಲಿ ಮತದಾನದ ಮಹತ್ವ ಅರಿಯುವಂತೆ ಮಾಡುವ ನಿಟ್ಟಿನಲ್ಲು ಸ್ವೀಪ್ ಕಾರ್ಯಕ್ರಮ ದಡಿ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಮಟ್ಟಗಳಲ್ಲಿಯೂ ಸಾಕಷ್ಟು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.  ಏ.21 ರಂದು ಬಳ್ಳಾರಿ ನಗರದಲ್ಲಿ ಬೃಹತ್ ಪ್ರಮಾಣದಲ್ಲಿ ಮ್ಯಾರಥಾನ್ ಕಾರ್ಯಕ್ರಮ ಆಯೋಜಿಸಿದೆ,  ಈ ಸಂದರ್ಭದಲ್ಲಿ ಎಲ್ಲ ಚುನಾವಣಾ ವೀಕ್ಷಕರು ಪಾಲ್ಗೊಳ್ಳುವಂತೆ ಆಹ್ವಾನ ನೀಡಿದರು. 

ಬಳ್ಳಾರಿ ಲೋಕಸಭೆ ಚುನಾವಣಾ ವೆಚ್ಚ ವೀಕ್ಷಕರಾದ ಕೆ.ಕೃಷ್ಣಮೂರ್ತಿ, ಕೆ.ಸುರೇಂದ್ರ ಪೌಲ್ ಸೇರಿದಂತೆ ವಿವಿಧ ಕ್ಷೇತ್ರ ಸಹಾಯಕ ಚುನಾವಣಾಧಿಕಾರಿಗಳು, ವಿವಿಧ ಸಮಿತಿಗಳ ನೋಡೆಲ್ ಅಧಿಕಾರಿಗಳು ಮತ್ತು ಜಿಲ್ಲಾ ಚುನಾವಣಾ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.