ತುಂಗಭದ್ರಾ ಕಾಲುವೆಗೆ ಪೂರ್ಣ ಪ್ರಮಾಣದ ನೀರು ಹರಿಸಲು ಶಾಸಕ ಗಣೇಶ್ ಆಗ್ರಹ
ಲೋಕದರ್ಶನ ವರದಿ
ಕಂಪ್ಲಿ 20: ತುಂಗಭದ್ರಾ ಜಲಾಶಯದ ಬಲದಂಡೆ ಕೆಳಮಟ್ಟದ ಕಾಲುವೆಗೆ ಬಚಾವತ್ ಆಯೋಗದ ಶಿಫಾರಸಿನಂತೆ ಪೂರ್ಣ ಪ್ರಮಾಣದ ನೀರು ಹರಿಸಿದರೆ ಮಾತ್ರ ರಾಜ್ಯದ ರೈತರಿಗೆ ಅನುಕೂಲವಾಗಲಿದೆ ಎಂದು ಶಾಸಕ ಜೆ.ಎನ್. ಗಣೇಶ್ ಸರ್ಕಾರವನ್ನು ಆಗ್ರಹಿಸಿದರು.
ಬುಧವಾರ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಅಧಿವೇಶನದಲ್ಲಿ ಮಾತನಾಡಿದ ಅವರು, ಆ.11ರಂದು ಮುನಿರಾಬಾದ್ನಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕರ್ನಾಟಕಕ್ಕೆ 750 ಕ್ಯುಸೆಕ್ ಹಾಗೂ ಆಂಧ್ರ್ರದೇಶಕ್ಕೆ 750 ಕ್ಯುಸೆಕ್ ನೀರು ಬಿಡುವಂತೆ ಕಾಲುವೆ ನಿರ್ಮಿಸಲಾಗಿದೆ.
ಆದರೆ, ಆಂಧ್ರ ಪ್ರದೇಶದವರು ತಮ್ಮ ಪಾಲಿನ ನೀರನ್ನು ಪಡೆದುಕೊಳ್ಳದ ಕಾರಣ ಕರ್ನಾಟಕದ ಪಾಲಿನ ನೀರು ಮಾತ್ರ ಹರಿಯುತ್ತಿದೆ. ಇದರಿಂದ ಜಿಲ್ಲೆಯ ರೈತರಿಗೆ ಅನಾನುಕೂಲವಾಗುತ್ತಿದೆ ಎಂದು ಹೇಳಿದರು.
ಈಗಾಗಲೇ ಜಿಲ್ಲೆಯ ಹಲವು ಭಾಗಗಳಲ್ಲಿ ಭತ್ತದ ಸಸಿ ಮಡಿಗಳನ್ನು ಮಾಡಲಾಗಿದ್ದು, ಕೆಲವೆಡೆ ಭತ್ತದ ನಾಟಿ ಕಾರ್ಯವೂ ಆರಂಭವಾಗಿದೆ. ಕೂಡಲೇ ನೀರು ಹರಿಸಿದರೆ ನಾಲ್ಕು ತಾಲೂಕುಗಳ ರೈತರಿಗೆ ಅನುಕೂಲವಾಗಲಿದೆ. ಇಲ್ಲವಾದರೆ ರೈತರು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಆಂಧ್ರ್ರದೇಶದ ನೀರಾವರಿ ಸಚಿವರೊಂದಿಗೆ ಚರ್ಚಿಸಿ ಕೂಡಲೇ ಕಾಲುವೆಗೆ ಪೂರ್ಣ ಪ್ರಮಾಣದ ನೀರು ಹಾಗೂ ತುಂಗಭದ್ರಾ ನದಿಗೆ 500 ಕ್ಯುಸೆಕ್ ನೀರು ಹರಿಸುವಂತೆ ಶಾಸಕ ಗಣೇಶ್ ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಜಲಸಂಪನ್ಮೂಲ ಸಚಿವ ಚೆಲುವನಾರಾಯಣಸ್ವಾಮಿ, ಕಳೆದ ಮೂರು ದಿನಗಳಿಂದ ಶಾಸಕ ಗಣೇಶ್ ಹಾಗೂ ಜಿಲ್ಲಾ ಸಚಿವರು ನೀರಿನ ಸಮಸ್ಯೆಯನ್ನು ತಮ್ಮ ಗಮನಕ್ಕೆ ತಂದಿದ್ದಾರೆ.
ತಾವು ಆಂಧ್ರ್ರದೇಶದ ನೀರಾವರಿ ಸಚಿವರೊಂದಿಗೆ ಈಗಾಗಲೇ ಚರ್ಚಿಸಿದ್ದು, ಎರಡೂ ರಾಜ್ಯಗಳ ಪಾಲಿನ ನೀರನ್ನು ಒಟ್ಟಿಗೆ ಹರಿಸಲು ಅಲ್ಲಿನ ಸಚಿವರು ಸಹಮತ ವ್ಯಕ್ತಪಡಿಸಿದ್ದಾರೆ. ಇನ್ನೆರಡು-ಮೂರು ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.