ಕ್ಷಯ ಮುಕ್ತ ವಿಜಯನಗರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ

ಕ್ಷಯ ಮುಕ್ತ ವಿಜಯನಗರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ  Let everyone join hands to build a TB-free Vijayanagara


ಹೊಸಪೇಟೆ.20: ಕ್ಷಯರೋಗ ನಿರ್ಮೂಲನೆಗೆ ಆರೋಗ್ಯ ಇಲಾಖೆಯೊಂದಿಗೆ ಪ್ರತಿಯೊಬ್ಬರೂ ಕೈಜೋಡಿಸುವ ಮೂಲಕ ಕ್ಷಯ ಮುಕ್ತ ವಿಜಯನಗರ ಜಿಲ್ಲೆ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಭಾಸ್ಕರ್ ಕರೆ ನೀಡಿದರು.  

ನಗರದ ವಿಜಯನಗರ ಕಾಲೇಜಿನಲ್ಲಿ ಗುರುವಾರ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಹಾಗೂ ‘ಕ್ಷಯ ಮುಕ್ತ ಭಾರತ’ ಅಭಿಯಾನದ ಅಂಗವಾಗಿ ಎನ್ಸಿಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

ಕ್ಷಯರೋಗವು ಮೈಕೋಬ್ಯಾಕ್ಟೀರಿಯಂ ಟ್ಯೂಬರ್ಕ್ಯುಲೋಸಿಸ್ ಬ್ಯಾಕ್ಟೀರಿಯಾದಿಂದ ಉಂಟಾಗುವ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಮುಖ್ಯವಾಗಿ ಶ್ವಾಸಕೋಶಕ್ಕೆ ತಗಲುತ್ತದೆ. ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ಸೂಕ್ಷ್ಮ ಹನಿಗಳ ಮೂಲಕ ಇತರರಿಗೆ ಹರಡಬಹುದು. ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸಂಪೂರ್ಣ ಚಿಕಿತ್ಸೆ ಪಡೆಯುವುದರಿಂದ ಕ್ಷಯರೋಗ ಗುಣಪಡಿಸಬಹುದು ಎಂದು ತಿಳಿಸಿದರು.  

ಚಿಕಿತ್ಸೆ ಪಡೆಯದ ಕ್ಷಯರೋಗಿಯೊಬ್ಬರಿಂದ ವರ್ಷಕ್ಕೆ ಸುಮಾರು 10ರಿಂದ 15 ಮಂದಿಗೆ ಸೋಂಕು ಹರಡುವ ಸಾಧ್ಯತೆಯಿದೆ. ಆದ್ದರಿಂದ ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ, ವೈದ್ಯರ ಸಲಹೆಯಂತೆ ಸಂಪೂರ್ಣ ಚಿಕಿತ್ಸೆ ಪಡೆಯುವುದು ಅಗತ್ಯ ಎಂದರು.  

ಕ್ಷಯರೋಗದ ಕುರಿತು ವಿದ್ಯಾರ್ಥಿಗಳಲ್ಲಿ ಆರೋಗ್ಯ ಶಿಕ್ಷಣ ನೀಡುವುದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ರೋಗಿಗಳ ನಿಯಮಿತ ತಪಾಸಣೆ ಹಾಗೂ ಓಷಧೋಪಚಾರ ಮುಂದುವರಿಸಲು ಉತ್ತೇಜಿಸುವುದು ಮತ್ತು ಪೌಷ್ಟಿಕ ಆಹಾರದ ಮಹತ್ವ ತಿಳಿಸುವ ಕಾರ್ಯಗಳಲ್ಲಿ ಎನ್ಸಿಸಿ ವಿದ್ಯಾರ್ಥಿಗಳ ಸೇವೆ ಬಳಸಿಕೊಳ್ಳಲಾಗುತ್ತಿದೆ ಎಂದು ಡಾ. ಭಾಸ್ಕರ್ ಹೇಳಿದರು.  

ಎರಡು ವಾರ ಅಥವಾ ಅದಕ್ಕಿಂತ ಹೆಚ್ಚು ಕಾಲ ನಿರಂತರ ಕೆಮ್ಮು, ಸಂಜೆ ವೇಳೆ ಹೆಚ್ಚಾಗುವ ಜ್ವರ, ಎದೆನೋವು, ತೂಕ ಇಳಿಕೆ, ಹಸಿವು ಕಡಿಮೆಯಾಗುವುದು ಹಾಗೂ ಕಫದಲ್ಲಿ ರಕ್ತ ಕಾಣಿಸಿಕೊಳ್ಳುವಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಸಮೀಪದ ಆರೋಗ್ಯ ಕೇಂದ್ರ ಅಥವಾ ಕ್ಷಯರೋಗ ಪರೀಕ್ಷಾ ಕೇಂದ್ರದಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡಮನಿ ತಿಳಿಸಿದರು.  

ಕಾರ್ಯಕ್ರಮದಲ್ಲಿ ವಿಜಯನಗರ ಕಾಲೇಜಿನ ಪ್ರಾಚಾರ್ಯ ಪ್ರಭುಸ್ವಾಮಿ, ಪ್ರಾಧ್ಯಾಪಕರಾದ ಶಿವಕುಮಾರ್, ರವಿಕಿರಣ್, ಎನ್ಸಿಸಿ ವಿದ್ಯಾರ್ಥಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.