ಸಂತಿ ಬಸ್ತವಾಡ ಚರ್ಚ್‌ಗೆ ಲಕ್ಷ್ಮೀ ಹೆಬ್ಬಾಳಕರ್ ಭೇಟಿ

ಸಂತಿ ಬಸ್ತವಾಡ ಚರ್ಚ್‌ಗೆ ಲಕ್ಷ್ಮೀ ಹೆಬ್ಬಾಳಕರ್ ಭೇಟಿ  Lakshmi Hebbalkar visits Santi Bastwad Church.

ಸಂತಿ ಬಸ್ತವಾಡ ಚರ್ಚ್‌ಗೆ ಲಕ್ಷ್ಮೀ ಹೆಬ್ಬಾಳಕರ್ ಭೇಟಿ  

 ಬೆಳಗಾವಿ  13:  ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಸಂತಿ ಬಸ್ತವಾಡದ ಸೆಂಟ್ ಸೆಬಾಸ್ಟಿಯನ್ ಚರ್ಚ್‌ಗೆ ಸೌಹಾರ್ದಯುತ ಭೇಟಿ ನೀಡಿ, ಧರ್ಮಗುರುಗಳು ಹಾಗೂ ಚರ್ಚ್‌ ಆಡಳಿತ ಮಂಡಳಿ ಸದಸ್ಯರೊಂದಿಗೆ ವಿವಿಧ ವಿಷಯಗಳ ಕುರಿತು ಸಮಾಲೋಚನೆ ನಡೆಸಿದರು.  

ಈ ಸಂದರ್ಭದಲ್ಲಿ ಚರ್ಚ್‌ ಆಡಳಿತ ಮಂಡಳಿಯ ವತಿಯಿಂದ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಸನ್ಮಾನಿಸಲಾಯಿತು. ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳು, ಸ್ಥಳೀಯ ಸಮಸ್ಯೆಗಳು ಮತ್ತು ಸಮಾಜಮುಖಿ ಕಾರ್ಯಗಳ ಕುರಿತು ಚರ್ಚೆ ನಡೆಯಿತು. ಸಮಾಜದಲ್ಲಿ ಸೌಹಾರ್ದತೆ, ಸಹಬಾಳ್ವೆ ಹಾಗೂ ಪರಸ್ಪರ ಸಹಕಾರವನ್ನು ಬಲಪಡಿಸುವ ಅಗತ್ಯವನ್ನು ಶಾಸಕಿ ಒತ್ತಿ ಹೇಳಿದರು.  

ನಂತರ ಚರ್ಚ್‌ ಆವರಣದಲ್ಲಿರುವ ಸೆಲೆಷಿಯನ್ ಸಿಸ್ಟರ್ಸ್‌ ಆಫ್ ಡಾನ್ ಬಾಸ್ಕೋ ಮರಿಯಾ ಕೃಪಾ ಸೊಸೈಟಿ ನಡೆಸುತ್ತಿರುವ **‘ಅನಮೊಲ್ ತಂಗುಧಾಮ’**ಕ್ಕೆ ಅವರು ಭೇಟಿ ನೀಡಿದರು. ಆಶ್ರಯಹೀನ ಹಾಗೂ ಸಂಕಷ್ಟದಲ್ಲಿರುವ ಮಕ್ಕಳಿಗೆ ಆಶ್ರಯ, ಆರೈಕೆ ಮತ್ತು ಶಿಕ್ಷಣ ಒದಗಿಸುತ್ತಿರುವ ಸಂಸ್ಥೆಯ ಸೇವೆಯನ್ನು ಶ್ಲಾಘಿಸಿದರು.  

ತಂಗುಧಾಮದ ಮಕ್ಕಳೊಂದಿಗೆ ಆತ್ಮೀಯವಾಗಿ ಬೆರೆತ ಲಕ್ಷ್ಮೀ ಹೆಬ್ಬಾಳಕರ್, ಅವರ ಶಿಕ್ಷಣ, ಆರೋಗ್ಯ, ಅಗತ್ಯತೆಗಳು ಹಾಗೂ ಭವಿಷ್ಯದ ಕುರಿತು ವಿಚಾರಿಸಿದರು. ಮಕ್ಕಳಿಗೆ ಪ್ರೀತಿ, ಭದ್ರತೆ, ಶಿಕ್ಷಣ ಮತ್ತು ಆತ್ಮವಿಶ್ವಾಸದೊಂದಿಗೆ ಬದುಕು ಕಟ್ಟಿಕೊಳ್ಳುವ ಅವಕಾಶ ಕಲ್ಪಿಸುವುದು ಸಮಾಜದ ಸಾಮೂಹಿಕ ಜವಾಬ್ದಾರಿ ಎಂದು ಹೇಳಿದರು.  

ಈ ಸಂದರ್ಭದಲ್ಲಿ ಫಾದರ್ ಯುಸೆಬಿಯೋ ಫರ್ನಾಂಡೀಸ್, ಫಾದರ್ ಫ್ರಾಂಕಿ ಲೋಬೊ, ಸಿಸ್ಟರ್ ಅನಿತಾ ಶಾಂತಿ ಬಿ.ಎಸ್‌., ಸೆಬಾಸ್ಟಿಯನ್ ಗೊನ್ಸಾಲ್ವಿಸ್, ಜಸಿಂಟಾ ಫಾುರ್ಟ್ಯಡೋ ಸೇರಿದಂತೆ ಚರ್ಚ್‌ ಹಾಗೂ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.