ಬಡಾಲ ಅಂಕಲಗಿಯಲ್ಲಿ ಕುಂಭೋತ್ಸವ: ಹೆಬ್ಬಾಳಕರ್ ಭಾಗಿ

ಬಡಾಲ ಅಂಕಲಗಿಯಲ್ಲಿ ಕುಂಭೋತ್ಸವ: ಹೆಬ್ಬಾಳಕರ್ ಭಾಗಿ  Kumbhotsava at Badala Ankalagi: Hebbalkar Participates


ಬೆಳಗಾವಿ 11: ಬಡಾಲ ಅಂಕಲಗಿ ಗ್ರಾಮದ ಆರಾಧ್ಯ ದೈವ ಶ್ರೀ ಸದ್ಗುರು ಸದಾನಂದ ಮಹಾರಾಜರ ರಥೋತ್ಸವದ ಅಂಗವಾಗಿ ಕುಂಭೋತ್ಸವ ಹಾಗೂ ಆರತಿ ಪೂಜೆ ಕಾರ್ಯಕ್ರಮ ನಡೆಯಿತು. ಶಾಸಕಿ ಹಾಗೂ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ಮುತ್ತೈದೆಯರು ಸಾಂಪ್ರದಾಯಿಕವಾಗಿ ಕುಂಭಗಳನ್ನು ಹೊತ್ತು, ಭಕ್ತಿಗೀತೆ ಹಾಗೂ ಮಂಗಳವಾದ್ಯಗಳೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಬಳಿಕ ರಥದ ಅಚ್ಚು ಹಾಗೂ ತೇರಿನ ಚಕ್ರಗಳಿಗೆ ವಿಶೇಷ ಪೂಜೆ ಮತ್ತು ಆರತಿ ನೆರವೇರಿಸಲಾಯಿತು.       ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ್, ಗ್ರಾಮೀಣ ಭಾಗದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳು ಜನರನ್ನು ಒಗ್ಗೂಡಿಸುವುದರ ಜೊತೆಗೆ ನಮ್ಮ ಪರಂಪರೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.

ನಾಡಿನ ಜನರಿಗೆ ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿ ದೊರೆಯಲಿ ಎಂದು ಪ್ರಾರ್ಥಿಸಿದರು. ಗೃಹಲಕ್ಷ್ಮಿ ಹಣದಿಂದ ರಥ ನಿರ್ಮಾಣಕ್ಕೆ ಕೊಡುಗೆ ಬಡಾಲ ಅಂಕಲಗಿ ಗ್ರಾಮದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರು ತಮ್ಮ ಒಂದು ತಿಂಗಳ ಕಂತಿನ ಹಣವನ್ನು ಶ್ರೀ ಸದ್ಗುರು ಸದಾನಂದ ಮಹಾರಾಜರ ರಥ ನಿರ್ಮಾಣಕ್ಕೆ ನೀಡಲು ಮುಂದಾಗಿರುವುದಕ್ಕೆ ಹೆಬ್ಬಾಳಕರ್ ಸಂತಸ ವ್ಯಕ್ತಪಡಿಸಿದರು. ಮಹಿಳೆಯರ ಭಕ್ತಿ, ಒಗ್ಗಟ್ಟು ಹಾಗೂ ಸಾಮಾಜಿಕ ಕಾಳಜಿ ಶ್ಲಾಘನೀಯ ಎಂದರು.  ಕಾರ್ಯಕ್ರಮದಲ್ಲಿ   ರಾಚಯ್ಯ ಅಜ್ಜನವರು, ಪ್ರವಚನಕಾರ  ಪ್ರಶಾಂತ ದೇವರು, ಗ್ರಾಮದ ಹಿರಿಯರು, ಮುಖಂಡರು, ಕಾರ್ಯಕರ್ತರು ಸೇರಿದಂತೆ ಅಪಾರ ಸಂಖ್ಯೆಯ ಮಹಿಳೆಯರು ಹಾಗೂ ಭಕ್ತರು ಪಾಲ್ಗೊಂಡಿದ್ದರು.