ರೈತರಿಗೆ ತಕ್ಷಣ ಬೀಜ ವಿತರಿಸಲು ಕೋನರಡ್ಡಿ ಆಗ್ರಹ

ನವಲಗುಂದ : ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ರೈತರು ಹಿಂಗಾರು ಬಿತ್ತನೆ ಮಾಡಲು ಕಡಲೆ ಬೀಜವೇ ಸಿಗುತ್ತಿಲ್ಲ. ಸರ್ಕಾರ ರೈತರಿಗೆ ತಕ್ಷಣ ಕಡಲೆ ಬೀಜ ವಿತರಿಸಬೇಕೆಂದು ಕಾಂಗ್ರೆಸ್ ಮುಖಂಡ, ನವಲಗುಂದ ಮಾಜಿ ಶಾಸಕ ಎನ್‌.ಹೆಚ್‌. ಕೋನರಡ್ಡಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.  

ಅವರು ಇಂದು ನವಲಗುಂದ ನಗರದ ಎಪಿಎಂಸಿಯಲ್ಲಿ ಕೃಷಿ ರೈತ ಸಂಪರ್ಕ ಕಚೇರಿಯಿಂದ ಬೀಜ ವಿತರಣೆ ಮಾಡುವ ಕೇಂದ್ರಕ್ಕೆ ಭೇಟಿ ನೀಡಿ ಅಧಿಕಾರಿಗಳು ಹಾಗೂ ರೈತರೊಂದಿಗೆ ಚರ್ಚಿಸಿದ ಅವರು ರೈತರು ಬಿತ್ತನೆ ಮಾಡಲು ಬೇಕಾಗುವಷ್ಟು ಕಡಲೆ ಬೀಜ ವಿತರಣೆ ಮಾಡಬೇಕು. ಸತತವಾಗಿ ಸುರಿದ ಮಳೆಯಿಂದ ಕಂಗಾಲಾಗಿದ್ದ ರೈತರು ಈಗ ಸ್ವಲ್ಪ ಮಳೆ ಕಡಿಮೆಯಾಗಿದ್ದರಿಂದ ಹಿಂಗಾರು ಬೆಳೆ ಕಡಲೆ ಬಿತ್ತನೆ ಪ್ರಾರಂಭಿಸಿದ್ದು ರೈತರು ಮೊದಲು ಎಫ್‌.ಐ.ಡಿ. ತೆಗೆದುಕೊಳ್ಳಲು ಒಂದು ಸ್ಥಳ, ಬೀಜ ವಿತರಣೆ ಮಾಡಲು ಎಪಿಎಂಸಿಗೆ ಅಲೆದಾಡಿದರೂ ರೈತರಿಗೆ ಬೀಜವೇ ಸಿಗುತ್ತಿಲ್ಲ. ಎರಡು ಎಕರೆ ಜಮೀನು ಇದ್ದವರಿಗೆ ಕೇವಲ 1 ಪಾಕೇಟ್ ಬೀಜ ವಿತರಣೆ ಮಾಡುತ್ತಿದ್ದಾರೆ. ಸರ್ಕಾರ ರೈತರಿಗೆ ಬೇಕಾಗುವಷ್ಟು ಬೀಜ ದಾಸ್ತಾನು ಇದೇ ಎಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಹೇಳಿದ್ದಾರೆ. ಆದರೆ ವಾಸ್ತವವಾಗಿ ಬೀಜವೇ ಸಿಗುತ್ತಿಲ್ಲ. ಇದರಿಂದ ರೈತರಿಗೆ ಸಮಸ್ಯೆಯಾಗಿದ್ದು ಸರಿಯಾಗಿ ಬೀಜ ವಿತರಣೆ ಮಾಡಬೇಕು. ಕೃಷಿ ಇಲಾಖೆ ಕರ್ನಾಟಕ ಬೀಜ ನಿಗಮದ ಧೃಡೀಕೃತಗೊಳಿಸಿದ ಗುಣಮಟ್ಟದ ಬೀಜಗಳನ್ನು ರೈತರಿಗೆ ಪೂರೈಸಬೇಕೆಂದು ಸರ್ಕಾರಕ್ಕೆ  ಕೋನರಡ್ಡಿ ಒತ್ತಾಯಿಸಿದರು. 

ಈ ಸಂದರ್ಭದಲ್ಲಿ ನವಲಗುಂದ ಪುರಸಭೆ ಸ್ಥಾಯೀ ಸಮೀತಿ ಅಧ್ಯಕ್ಷ ಸುರೇಶ ಮೇಟಿ, ಮಾಜಿ ಅಧ್ಯಕ್ಷ ಉಸ್ಮಾನ ಬಬರ್ಚಿ, ಸದಸ್ಯ ಮೋದಿನಸಾಬ ಶಿರೂರ, ರೈತ ಮುಖಮಡರುಗಳಾದ ಆನಂದ ಹವಳಕೋಡ, ಐ.ಡಿ. ಭಾಗವಾನ, ಶಶಿಧರ ಬ್ಯಾಹಟ್ಟಿ, ಶಿವು ಭರದ್ವಾಡ, ಕೆ.ಆರ್‌.ಎಸ್‌. ಈರೇಶನವರ, ಶಿವನಗೌಡ ಕುಲಕರ್ಣಿ ಮುಂತಾದ ರೈತರು ಭಾಗವಹಿಸಿದ್ದರು.