ತಿರುವನಂತಪುರಂ, ಜ 28, ಕೇರಳದ ವಿಧಾನಸಭೆಯಲ್ಲಿ ಜ 29ರಂದು ಆರಂಭಗೊಳ್ಳಲಿರುವ ಬಜೆಟ್ ಅಧಿವೇಶನದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗಾಗಿ ತಯಾರಿಸಿರುವ ಭಾಷಣದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಹೇಳಿಕೆಗಳನ್ನು ತೆಗೆಯಲು ಆಡಳಿತಾರೂಢ ಸಿಪಿಐ (ಎಂ) ನೇತೃತ್ವದ ಎಡಪಕ್ಷ ನಿರಾಕರಿಸಿದೆ.
ಆದರೆ, ತಾವು ಸಿಎಎಗೆ ಬೆಂಬಲ ಸೂಚಿಸುತ್ತಿರುವುದರಿಂದ ತಮ್ಮನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ರಾಷ್ಟ್ರಪತಿಗಳಿಗೆ ಮನವಿ ಮಾಡಿದ ರಾಜ್ಯಪಾಲರ ವಿರುದ್ಧ ನಿರ್ಣಯ ಮಂಡಿಸಬೇಕು ಎಂಬ ವಿಪಕ್ಷ ನಾಯಕ ರಮೇಶ್ ಚೆನ್ನಿತಾಲಾ ಅವರ ಬೇಡಿಕೆಯನ್ನು ಕೂಡ ಬೆಂಬಲಿಸದಿರಲು ಪಕ್ಷ ನಿರ್ಧರಿಸಿದೆ. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್ (ಯುಡಿಎಫ್) ಗಳು ರಾಜ್ಯದಲ್ಲಿ ಆಡಳಿತ ವಿಫಲವಾಗಿದೆ ಎಂಬ ಭಾವ ಮೂಡಿಸಲು ಪ್ರಯತ್ನಸುತ್ತಿದೆ ಎಂದು ಸಿಪಿಐ(ಎಂ) ನಾಯಕರು ಆರೋಪಿಸಿದ್ದಾರೆ.
ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿರುವ ತಮ್ಮ ವಿಧಾನಸಭಾ ಭಾಷಣದ ಪ್ರತಿಯಲ್ಲಿ ಸಿಎಎ ವಿರುದ್ಧದ ಹೇಳಿಕೆಗಳನ್ನು ಅಳವಡಿಸಿರುವುದಕ್ಕೆ ರಾಜ್ಯಪಾಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಸುಪ್ರೀಂಕೋರ್ಟ್ ನಲ್ಲಿ ವಿಚಾರಣಾ ಹಂತದಲ್ಲಿರುವ ಪ್ರಕರಣದ ಹೇಳಿಕೆಯನ್ನು ಅಳವಡಿಸಿರುವುದು ಸರಿಯಲ್ಲ. ಅದನ್ನು ತೆಗೆಯಬೇಕು ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದರು. ಆದರೆ, ಈ ವಿಷಯದ ಕುರಿತು ರಾಜ್ಯಪಾಲರು ಕೂಡ ಕಾನೂನು ಸಲಹೆ ನಡೆದಿರುವುದರಿಂದ ಅದನ್ನು ಪ್ರಸ್ತಾಪಿಸಬಹುದು. ಸಂಪುಟ ಸಭೆಯ ನಿರ್ಧಾರವನ್ನು ರಾಜ್ಯಪಾಲರು ಪ್ರಶ್ನಿಸುವಂತಿಲ್ಲ ಎಂದಿದೆ.