ಕವಿ ಚಕ್ರವರ್ತಿ ರನ್ನ ಅಜರಾಮರ: ಮಲ್ಲಿಕಾರ್ಜುನ ಅರಬಿ

ಕವಿ ಚಕ್ರವರ್ತಿ ರನ್ನ ಅಜರಾಮರ: ಮಲ್ಲಿಕಾರ್ಜುನ ಅರಬಿ  Kavi Chakravarthi Ranna is Immortal: Mallikarjun Arabi


ರನ್ನಬೆಳಗಲಿ 16: ರನ್ನ ಸಾಮಾನ್ಯ ಕವಿಯಲ್ಲ. ಅವರು ಗತಿಸಿ ಸಾವಿರ ವರ್ಷಗಳಾದರೂ ಕನ್ನಡ ಸಾಹಿತ್ಯದಲ್ಲಿ ಅಜರಾಮರರಾಗಿದ್ದಾರೆ ಎಂದು ಮಲ್ಲಿಕಾರ್ಜುನ ಅರಬಿ ಹೇಳಿದರು. ಸಿದ್ದಾರೂಢ ಸರ್ಕಾರಿ ಪ್ರೌಢಶಾಲೆ ರನ್ನಬೆಳಗಲಿಯಲ್ಲಿ ಆಯೋಜಿಸಿದ್ದ ‘ತಿಂಗಳಿಗೊಂದು ರನ್ನ’ ಉಪನ್ಯಾಸ ಮಾಲಿಕೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ರನ್ನನ ಜೀವನ ಚರಿತ್ರೆ ಹಾಗೂ ‘ಗದಾಯುದ್ಧ’ ಕೃತಿಯ ಕುರಿತು ಅವರು ಮಾತನಾಡಿದರು. ರನ್ನನ ‘ಸಾಹಸಭೀಮ ವಿಜಯಂ’ 10 ಆಶ್ವಾಸಗಳಲ್ಲಿ ಹರಡಿಕೊಂಡಿರುವ ವೀರರಸ ಪ್ರಧಾನ ಕೃತಿಯಾಗಿದೆ. ‘ಗದಾಯುದ್ಧ’  ದಲ್ಲಿ ಭೀಮ ಹಾಗೂ ದುರ್ಯೋಧನರ ಘನಘೋರ ಯುದ್ಧದ ಪ್ರಸಂಗವನ್ನು ರನ್ನ ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ ಎಂದು ತಿಳಿಸಿದರು.

ಸಮಬಲ ಹಾಗೂ ಸಮಕಾಯ ಹೊಂದಿದ್ದ ಭೀಮ-ದುರ್ಯೋಧನರ ಕಾಳಗವನ್ನು ರನ್ನ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಯುದ್ಧದ ಅಂತ್ಯದಲ್ಲಿ ದುರ್ಯೋಧನನ ವಿಲಾಪ ಮನಮಿಡಿಯುವಂತಿದ್ದು, ಓದುಗರ ಕಣ್ಣಲ್ಲಿ ನೀರು ತರಿಸುತ್ತದೆ ಎಂದು ಅರಬಿ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರ ಮುಖ್ಯಶಿಕ್ಷಕಿ ಎಸ್‌.ಎಸ್‌. ಉದಪುಡಿ ವಹಿಸಿದ್ದರು. ಎಂ.ಎ. ಮುಗಳಖೋಡ, ಎಂ.ಬಿ. ಮುರಗೋಡ, ಪಿ.ಕೆ. ಪವಾರ, ಅಕ್ಷತಾ ಕುಲಗೋಡ, ಬಿ.ಎಂ. ಹವಾಲ್ದಾರ, ಆನಂದ ಹೊಸಟ್ಟಿ, ಅನೀಲ ನಡವಿನಮನಿ, ಮಂಜುನಾಥ ಪೂಜಾರಿ ಹಾಗೂ ರವಿ ಹಿರೇಕಲಮಠ ಉಪಸ್ಥಿತರಿದ್ದರು.