ಬಡವರಿಗಾಗಿ ಆಸ್ಪತ್ರೆ ಕಟ್ಟಿಸಿದ ಕೆ ಎಚ್ ಪಾಟೀಲ ಅವರ ಸಂಕಲ್ಪವು ಮಾದರಿಯಾಗಿದೆ: ಕೊಪ್ಪಳದ ಗವಿಸಿದ್ದೇಶ್ವರ

ಬಡವರಿಗಾಗಿ ಆಸ್ಪತ್ರೆ ಕಟ್ಟಿಸಿದ ಕೆ ಎಚ್ ಪಾಟೀಲ ಅವರ ಸಂಕಲ್ಪವು ಮಾದರಿಯಾಗಿದೆ: ಕೊಪ್ಪಳದ ಗವಿಸಿದ್ದೇಶ್ವರ  KH Patil's resolve to build a hospital for the poor is exemplary: Koppal's Gavisiddeshwara

ಲೋಕದರ್ಶನ ವರದಿ 

ಗದಗ   08:  ಕಿಡ್ನಿ ಕಸಿಗಾಗಿ ತಾವು ಎದುರಿಸಿದ ತೊಂದರೆಯು ಬೇರೆ ಯಾರಿಗೂ ಬರಬಾರದು ಎಂದು ಯೋಚಿಸಿ ಬಡವರ ಅನುಕೂಲಕ್ಕಾಗಿ ಆಸ್ಪತ್ರೆ ಕಟ್ಟಿಸಿದ ಹುಲಕೋಟಿಯ ಕೆ ಎಚ್ ಪಾಟೀಲ ಅವರ ಸತ್ ಸಂಕಲ್ಪ ಇತರರಿಗೆ ಮಾದರಿಯಾಗಿದೆ ಎಂದು ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.ದಿ ರೂರಲ್ ಮೆಡಿಕಲ್ ಸರ್ವೀಸ್ ಸೊಸೈಟಿಯ ಕೆ ಎಚ್ ಪಾಟೀಲ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆ ಹುಲಕೋಟಿಗೆ ಜೂನ್ 07ರಂದು ಭೇಟಿ ನೀಡಿ ಅವರು ಹಿತವಚನ ನೀಡಿದರು.ಬಡವರು ಅಂದರೆ ದುಡ್ಡು ಇಲ್ಲದೇ ಇರೋರಲ್ಲ. ಒಳ್ಳೆಯ ಸಂಕಲ್ಪ ಇಲ್ಲದೇ ಇರುವವರು ಮಾತ್ರ ಬಡವರು.

ಅಂದು ಕೆ ಎಚ್ ಪಾಟೀಲ ಅವರು ಉತ್ತಮ ಸಂಕಲ್ಪ ಹೊಂದಿದ್ದರಿಂದಾಗಿ ನಿರ್ಮಾಣಗೊಂಡ ಈ ಆಸ್ಪತ್ರೆಯಿಂದ ಕಡು ಬಡವರಿಗೆ ಕಿಡ್ನಿ ಕಸಿಗೆ ಅನುಕೂಲವಾಗಿದೆ. ಮನುಷ್ಯನಿಗೆ ಇಂತಹ ವಿಚಾರ, ಸತ್ ಸಂಕಲ್ಪ ಇರಬೇಕು ಎಂದು ಶ್ರೀಗಳು ಹೇಳಿದರು.ಅಪಘಾತ ಸಂಭವಿಸಿ, ನಗರಕ್ಕೆ ತುರ್ತಾಗಿ ಕರೆದೊಯ್ಯಲು ಆಗದ್ದಕ್ಕೆ ತನ್ನ ಪತಿಯನ್ನು ಕಳೆದುಕೊಂಡ ಕಾಯಿಪಲ್ಲೆ ಮಾರುವ ಹೆಣ್ಣು ಮಗಳೊಬ್ಬಳು ತಾನು ಕಾಯಿಪಲ್ಲೇ ಮಾರಿದ ಅಲ್ಪ ಹಣ ಕೂಡಿಟ್ಟು ಹಳ್ಳಿಯಲ್ಲಿ ಆಸ್ಪತ್ರೆ ಕಟ್ಟಿಸುತ್ತಾಳೆ. ನನ್ನ ನೋವು ಬೇರೆಯವರು ಪಡಬಾರದು ಎಂದು ಆಸ್ಪತ್ರೆ ಕಟ್ಟಿಸಿದ ಅಂತಹ ಮಹಿಳೆಯ ಉತ್ತಮ ಗುಣವನ್ನು ನಾವುಗಳು ಹೊಂದಬೇಕು.

ಊಟ ಮಾಡುವಾಗ ಕಲ್ಲು ಬಂದರೆ ಅದನ್ನು ತೆಗೆದು ಊಟ ಮಾಡುತ್ತೇವೆ. ಅದರಂತೆ ಕನಸು ಕಟ್ಟುವಾಗ ನೂರಾರು ತೊಂದರೆಗಳು ಎದುರಾಗುತ್ತವೆ. ಅದನ್ನು ಎದುರಿಸಿ ಕನಸುಗಳ ಸಾಕಾರಕ್ಕೆ ಶ್ರಮಿಸಬೇಕು ಎಂದು ಗವಿಶ್ರೀ ಸಲಹೆ ಮಾಡಿದರು.ಕ್ಯಾನ್ಸರದಿಂದ ಬಳಲುತ್ತಿದ್ದ ರಮಣ ಮಹರ್ಷಿಗಳು ಉದುರುತ್ತಿದ್ದ ಹುಳುಗಳನ್ನು ಮತ್ತೆ ಕೈಗೆ ಹಾಕಿಕೊಂಡು ಅರಿಬಿ ಸುತ್ತುತ್ತಿದ್ದರು. ಸತ್ತರೆ ಈ ದೇಹ ಮಣ್ಣಾಗುತ್ತದೆ. ಬದುಕಿರುವ ತನಕ ಹುಳುಗಳಾದರು ನನ್ನ ದೇಹ ತಿಂದು ಬದುಕಲಿ ಎಂದು ಮಹರ್ಷಿಗಳು ಹೇಳುತ್ತಿದ್ದ ಮಾತುಗಳ ಹಿಂದಿನ ಭಾವನೆಯನ್ನು ನಾವು ಅರ್ಥೈಸಿಕೊಳ್ಳಬೇಕು ಎಂದು ಶ್ರೀಗಳು ತಿಳಿಸಿದರು.