ಬಾಲ್ಯದಲ್ಲಿಯೇ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು ಪಾಲಕರ ಆದ್ಯ ಕರ್ತವ್ಯ: ಮಹಾವೀರ ಪಾಟೀಲ

ಶೇಡಬಾಳ 28: ತಂದೆ ತಾಯಿಗಳು ಬಾಲ್ಯದಲ್ಲಿಯೇ ಮಕ್ಕಳಿಗೆ ಧರ್ಮ, ಸಂಸ್ಕಾರ ನೀಡಿದಾಗ ಮಾತ್ರ ಮುಂದೆ ಅವರು ಆದರ್ಶ ವ್ಯಕ್ತಿಗಳಾಗಿ ಹೊರಹೊಮ್ಮಲು ಸಾಧ್ಯವೆಂದು ಐನಾಪೂರದ ಮಹಾವೀರ ಪಾಟೀಲ ಹೇಳಿದರು. 

ಅವರು ರವಿವಾರ ದಿ. 27 ರಂದು ಶೇಡಬಾಳದ ಪ.ಪೂ. ಆಚಾರ್ಯ ಶ್ರೀ ವಿದ್ಯಾನಂದ ಮುನಿರಾಜ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಪ.ಪೂ. ಶ್ರೀ ವಿದ್ಯಾನಂದ ಮುನಿರಾಜ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಧರ್ಮ ಸಂಸ್ಕಾರ ಪಾಠಶಾಲೆ ಉದ್ಘಾಟಿಸಿ ಮಾತನಾಡುತ್ತಿದ್ದರು. ಅವರು ಮುಂದೆ ಮಾತನಾಡುತ್ತಾ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿರುವ ಇಂದಿನ ಯುವಕರು ಭವ್ಯ ಭಾರತೀಯ ಸಂಸ್ಕೃತಿಯನ್ನು ಮರೆತು ಹೋಗಿದ್ದಾರೆ. ಅವರಿಗೆ ಬಾಲ್ಯದಲ್ಲಿಯೇ ನ್ಯಾಯ, ನೀತಿ, ಧರ್ಮ, ಸಂಸ್ಕೃತಿಯ ಪಾಠ ಹೇಳಿ ಕೊಡುವುದು ಪಾಲಕರ ಆದ್ಯ ಕರ್ತವ್ಯವಾಗಿದೆ. ಆ ಕಾರಣದಿಂದಲೇ ಧರ್ಮಸಂಸ್ಕಾರ ಪಾಠ ಶಾಲೆಗಳನ್ನು ಪ್ರತಿ ಗ್ರಾಮಗಳಲ್ಲಿ ತೆರೆಯುವುದು ಅತ್ಯವಶ್ಯವಾಗಿದೆ ಎಂದು ಹೇಳಿದರು.  

ಇದೇ ಸಮಯದಲ್ಲಿ ರವೀಂದ್ರ ನರಸಾಯಿ, ಡಾ. ರಾಜೇಂದ್ರ ಸಾಂಗಾವೆ ಧರ್ಮಸಂಸ್ಕಾರ ಪಾಠಶಾಲೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಮಹಿಳಾಮಣಿಗಳನ್ನು ಉದ್ದೇಶಿಸಿ ಮಾತನಾಡಿದರು. 

ಆಚಾರ್ಯ ಶ್ರೀ ವಿದ್ಯಾನಂದ ಮುನಿಮಹಾರಾಜರ ಭಾವಚಿತ್ರಕ್ಕೆ ದೀಪ ಬೆಳಗಿ ಪೂಜೆ ಸಲ್ಲಿಸುವದರೊಂದಿಗೆ ಧರ್ಮಸಂಸ್ಕಾರ ಪಾಠಶಾಲೆಯನ್ನು ಉದ್ಘಾಟಿಸಲಾಯಿತು. 

ಈ ಸಮಯದಲ್ಲಿ ಸಂಸ್ಥೆಯ ಸಂಚಾಲಕರಾದ ಪ್ರಕಾಶ ನಾಂದ್ರೆ, ಡಾ. ಎಸ್‌.ಬಿ.ಪಾಟೀಲ, ವೃಷಭ ಚೌಗಲಾ, ಎಂ.ಎ.ಗಣೆ, ಸನ್ಮತಿ ನಾಂದ್ರೆ, ಭರತೇಶ ಚಿಂಚವಾಡೆ, ಪ್ರಕಾಶ ಯಂದಗೌಡರ, ಸುನೀಲ ಇರಾಜ, ಬಾಹುಬಲಿ ನಾಂದ್ರೆ, ಆರ್‌.ಡಿ.ಬುಲಾಕೆ, ಪ್ರವೀಣ ಸಾಬಣ್ಣವರ ಹಲವಾರು ಮಹಿಳಾ ಮಂಡಳದ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಇದ್ದರು. 

ಪದ್ಮಶ್ರೀ ಹಂಚಿಬಟ್ಟಿ ಸ್ವಾಗತಿಸಿದರು. ರುಚಿತಾ ದೇಸಾಯಿ ವಂದಿಸಿದರು. ವೈಶಾಲಿ ಕುಡಚೆ ಕಾರ್ಯಕ್ರಮ ನಿರೂಪಿಸಿದರು.