ಧಾರವಾಡ - ಹುಬ್ಬಳ್ಳಿ

ಕೀಟ ಪ್ರಪಂಚದ ವೈವಿಧ್ಯ ದಾಖಲಿಸುವುದು ಅಗತ್ಯ

ಕೀಟ ಪ್ರಪಂಚದ ವೈವಿಧ್ಯ ದಾಖಲಿಸುವುದು ಅಗತ್ಯ

ಲೋಕದರ್ಶನ ವರದಿ 

ಧಾರವಾಡ 22 : ಕೀಟಗಳು ಮತ್ತು ಜೇಡಗಳು ಪರಿಸರ ಸಮತೋಲನ ಹಾಗೂ ಜೀವವೈವಿಧ್ಯಕ್ಕೆ ಮಹತ್ವದ ಕೊಡುಗೆ ನೀಡುತ್ತವೆ. ಸಮುದಾಯದ ಸಹಭಾಗಿತ್ವದೊಂದಿಗೆ ಅವುಗಳ ಸಮೀಕ್ಷೆ, ಅಧ್ಯಯನ ಮತ್ತು ದಾಖಲೀಕರಣ ನಡೆಯಬೇಕು ಎಂದು ಪುಣೆಯ ಆ್ಯಂಟಮನ್ ಇನ್ಸ್ಟಿಟ್ಯೂಟ್ ಆಫ್ ಇನ್ವರ್ಟಿಬ್ರೇಟ್ ಜುವಾಲಜಿ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಕೀಟತಜ್ಞ ಈಶಾನ್ ಪಹಾಡೆ ಹೇಳಿದರು.  

ಧಾರವಾಡದ ನೇಚರ್ ರಿಸರ್ಚ್‌ ಸೆಂಟರ್ ಹಾಗೂ ನೇಚರ್ ಫಸ್ಟ್‌ ಇಕೋ ವಿಲೇಜ್, ಹಳ್ಳಿಗೇರಿ ಸಹಯೋಗದಲ್ಲಿ ಆಯೋಜಿಸಿದ್ದ ‘ಕೀಟ ಪ್ರಪಂಚದ ವಿಸ್ಮಯಗಳು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಕೀಟತಜ್ಞ ಅರ್ಥವ್ ಕುಲಕರ್ಣಿ ಮಾತನಾಡಿ, ಭಾರತದಲ್ಲಿ 4 ಸಾವಿರಕ್ಕೂ ಅಧಿಕ ಜೇಡ ಪ್ರಭೇದಗಳಿದ್ದು, ಸುಮಾರು 2 ಸಾವಿರಕ್ಕೂ ಹೆಚ್ಚು ಪ್ರಭೇದಗಳನ್ನು ಮಾತ್ರ ಗುರುತಿಸಲಾಗಿದೆ. ಇನ್ನೂ ಹಲವು ಪ್ರಭೇದಗಳು ನಶಿಸುವ ಹಂತದಲ್ಲಿದ್ದು, ಲಭ್ಯವಿರುವ ಕೀಟಗಳ ದಾಖಲಾತಿ ಕಾರ್ಯವನ್ನು ಜನವಿಜ್ಞಾನಿಗಳ ಸಹಕಾರದೊಂದಿಗೆ ಸ್ಥಳೀಯ ಮಟ್ಟದಲ್ಲಿ ನಡೆಸಬೇಕು ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪರಿಸರವಾದಿ ಪಂಚಾಕ್ಷರಿ ಹಿರೇಮಠ ಮಾತನಾಡಿ, ಹಳ್ಳಿಗೇರಿಯ ಪರಿಸರ ಶಿಕ್ಷಣ ಪಾಠಶಾಲೆ ಹಾಗೂ ನೇಚರ್ ಫಸ್ಟ್‌ ಇಕೋ ವಿಲೇಜ್ನಲ್ಲಿ ಕಪ್ಪೆಗಳ ಉದ್ಯಾನ, ಚಿಟ್ಟೆಗಳ ಉದ್ಯಾನ, ಅಪರೂಪದ ಸಸ್ಯಗಳು, ಹಾವು, ಜೇನು ಹಾಗೂ ಕೀಟ ಪ್ರಪಂಚದ ಉದ್ಯಾನ ರೂಪುಗೊಳ್ಳುತ್ತಿದೆ ಎಂದರು.  

ಪ್ರೊ. ಗೋಪಾಲ ಕಡೇಕೋಡಿ, ಪ್ರೊ. ಎಸ್‌.ಎಂ. ಶಿವಪ್ರಸಾದ, ಡಾ. ಧೀರಜ್ ವೀರನಗೌಡರ, ಆರಿ​‍್ಜ. ತಿಮ್ಮಾಪುರ, ಪಂಡಿತ ಮುಂಜಿ, ಕೃಷ್ಣಕುಮಾರ ಭಾಗವತ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವೀರಣ್ಣ ಪಟ್ಟಾರ ಪ್ರಾರ್ಥಿಸಿದರು. ಹರ್ಷವರ್ಧನ ಶೀಲವಂತ ಸ್ವಾಗತಿಸಿ ಪರಿಚಯಿಸಿದರು. ಅನೀಲ ಅಳೊಳ್ಳಿ ನಿರೂಪಿಸಿ, ವಂದಿಸಿದರು. 


ಸುದ್ದಿ ಓದಿ