ಅಂತರಾಜ್ಯ ಕಳ್ಳನ ಬಂಧನ: ರೂ.37 ಲಕ್ಷ ರೂ.,ಕೃತ್ತಯಕ್ಕೆ ಬಳಸಿದ ವಾಹನ ವಶಕ್ಕೆ

ಸಿಂದಗಿ 14: ಪಟ್ಟಣದ ಡಿ. 24 ರಂದು ರಾತ್ರಿ 9 ಗಂಟೆಯ ಸುಮಾರಿಗೆ ಯಾರೋ ಕಳ್ಳರು ಸಿಂದಗಿ ಪಟ್ಟಣದ ಹಳೇ ಬಹಾರದ ಬಸವಣ್ಣ ದೇವರ ಗುಡಿಯ ಹತ್ತಿರ ಇರುವ ಶಾಂತವೀರ​‍್ಪ ಗುರುಬಸಪ್ಪ ವಾರದ ಎಂಬುವವರ ಅಂಗಡಿಯ ಸೇಟರ್ ಕೀಲಿ ಮುರಿದು, ಅಂಗಡಿಯಲ್ಲಿದ್ದ ಒಟ್ಟು 40,87,880ರೂ. ಕಿಮ್ಮತ್ತಿನ ಸಿಗರೇಟ ಕಳ್ಳತನ ಮಾಡಿಕೊಂಡು ಹೋಗಿದ್ದು ಡಿ.25 ರಂದು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. 

ದೂರಿನನ್ವಯ ಪ್ರಕರಣದ ಬೆನ್ನಟ್ಟಿದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಒಬ್ಬ ಆರೋಪಿಯನ್ನು ಬಂಧಿಸಿ ಆರೋಪಿತನಿಂದ ರೂ.37 ಲಕ್ಷ ರೂ.ಗಳನ್ನು ಹಾಗೂ ಪ್ರಕರಣದಲ್ಲಿ ಉಪಯೋಗಿಸಿದ ವಾಹನ ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿಜಯಪುರ ಪೊಲೀಸ್ ಅಧೀಕ್ಷಕ ಋಷಿಕೇಶ ಸೋನಾವಣಿ ತಿಳಿಸಿದರು. 

ಪಟ್ಟಣದ ಪೊಲೀಸ ಠಾಣಾ ಆವರಣದಲ್ಲಿ ಆರೋಪಿಯನ್ನು ಬಂಧಿಸಿ ಆತನಿಂದ ವಶಪಡಿಸಿಕೊಂಡ ವಸ್ತುಗಳನ್ನು ಪ್ರದರ್ಶಿಸಿ ಮಾತನಾಡಿ, ವಿಜಯಪುರ  ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ, ಇಂಡಿ ಪೊಲೀಸ್ ಉಪಾಧೀಕ್ಷಕ ಎಚ್‌.ಎಸ್‌.ಜಗದೀಶ ಅವರ ಮಾರ್ಗದರ್ಶನದಲ್ಲಿ ಸಿಂದಗಿ ವೃತ್ತದ ಸಿ.ಪಿ.ಐ ಡಿ ಹುಲುಗಪ್ಪ, ಇವರ ನೇತೃತ್ವದಲ್ಲಿ ಸಿಂದಗಿ ಠಾಣೆಯ ಪಿ.ಎಸ್‌.ಐ ಭೀಮಪ್ಪ ರಬಕವಿ, ಅವರು ಪ್ರಕರಣ ದಾಖಲಿಸಿಕೊಂಡು ಪ್ರಕರಣವನ್ನು ಕಲೆ ಹಾಕುವ ಮೂಲಕ ಖಚಿತ ಮಾಹಿತಿಯ ಮೆರೆಗೆ ಅರವಿಂದ ಅಂಗಡಿ, ಪಿ.ಎಸ್‌.ಐ (ಅ.ವಿ) ಮತ್ತು ಸಿಬ್ಬಂದಿ ಜನರಾದ ಜೆ.ಎಸ್‌.ಗಲಗಲಿ, ಎಚ್‌.ಎಸ್‌.ಐಗಲ, ಎಸ್‌.ಆರ್‌.ಚವ್ಹಾಣ, ಆರ್‌.ಎಲ್‌.ಕಟ್ಟಮನಿ, ಪಿ.ಕೆ.ನಾಗರಾಳ, ಎಸ್‌.ಎಸ್‌.ರೂಂಡಿ, ಬಿ.ಜೆ.ಮುಳಸಾವಳಗಿ, ಜಿ.ಐ.ಈಟೇರಿ, ಬಿ.ಎಲ್‌.ಪಟ್ಟಿದ. ಎಸ್‌.ಪಿ.ಹುಣಶಿಕಟ್ಟಿ, ಎಸ್‌.ಎಸ್‌. ನಾಟಕಾರ, ವಿ.ಬಿ.ಡಂಬಳ, ಎಲ್ಲರೂ ಸಿಂದಗಿ ಪೊಲೀಸ್ ಠಾಣೆಯ, ಎಸ್‌.ಜೆ. ಪಾಟೀಲ, ಎಸ್‌.ಎನ್‌. ಸೌದಿ ಆಲಮೇಲ ಪಿ.ಎಸ್ ರವರನ್ನೊಳಗೊಂಡ ತಂಡ ರಚನೆ ಮಾಡಲಾಗಿತ್ತು. 

 ತನಿಖೆಯಲ್ಲಿ ಆರೋಪಿತರು ಅಂತರರಾಜ್ಯ ಕಳ್ಳರ ಗ್ಯಾಂಗಿನವರಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ಅವರನ್ನು ಪತ್ತೆ ಮಾಡುವ ಕುರಿತು ಸಿಂದಗಿ ಠಾಣೆಯ ಪಿ.ಎಸ್‌.ಐ ಭೀಮಪ್ಪ ಎಮ್ ರಬಕವಿ ಮತ್ತು ಸಿಬ್ಬಂದಿಗಳಾದ  ಆರ್‌.ಎಲ್‌.ಕಟ್ಟಿಮನಿ, ಪಿ.ಕೆ.ನಾಗರಾಳ, ಎಸ್‌.ಎಸ್‌.ಕೊಂಡಿ ಇವರು ಜ 7ರಂದು ರಾಜಸ್ಥಾನದಲ್ಲಿ ಆರೋಪಿ ಚಿತೇಂದ್ರಕುಮಾರ ಮಾಂಗಿಲಾಲ ಗೆಲ್ಲೋತ್,(26) ಈತನನ್ನು ವಶಕ್ಕೆ ಪಡೆದು ವಿಚಾರಣೆಯಲ್ಲಿ ಆರೋಪಿತನು ತಾನು ಮತ್ತು ರಾಜಸ್ಥಾನ ರಾಜೇಂದ್ರನಗರದ ಪ್ರಕಾಶ ದೀಪರಾಮ, ಪಂಜಾಬದ ಗುರುಪ್ರೀತಸಿಂಗ ಪಲ್ವಿಂದ್ರಸಿಂಗ ಮೂವರು ಕೂಡಿಕೊಂಡು ಅಂಗಡಿಯಲ್ಲಿ ಸಿಗರೇಟ ಕಳ್ಳತನ ಮಾಡಿ, ಬೆಂಗಳೂರಿನಲ್ಲಿ ಮಾರಾಟ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ. 

ಆತನಿಗೆ ಬಂಧಿಸಿ ರೂ. 37 ಲಕ್ಷ ರೂ.ಗಳನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ್ದ ಮಾರುತಿ ಸುಜುಕಿ ಇಕೋ ವ್ಯಾನ (ಕಾರ್) ನಂ:ಕೆಎ-05/ಎಮ್‌ಟೆ-8326 ನೇದ್ದನ್ನು ವಶಪಡಿಸಿಕೊಳ್ಳಲಾಗಿದೆ. ಈ ಆರೋಪಿತರು ರಾಜ್ಯದ ಬೇರೆ ಬೇರೆ ಪೊಲೀಸ್ ಠಾಣೆ ಹದ್ದಿಗಳಲ್ಲಿಯೂ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವದು ವಿಚಾರಣೆಯಲ್ಲಿ ತಿಳಿದು ಬಂದಿದೆ ಎಂದು ಅವರು ತಿಳಿಸಿದರು. ಕಾರ್ಯಾಚರಣೆ ನಡೆಸಿ  ಪ್ರಕರಣವನ್ನು ಬೇಧಿಸಿ ಆರೋಪಿಯನ್ನು ಬಂಧಿಸಿ ಕಳುವಿನ ಸ್ವತ್ತನ್ನು ವಶಪಡಿಸಿಕೊಂಡಿರುವ ಪೋಲಿಸ್ ಅಧಿಕಾರಿಗಳ ಮತ್ತು ಸಿಬ್ಬಂದಿ ಅವರ ಕಾರ್ಯ ಮೆಚ್ಚುವಂತದ್ದು ಎಂದು ಪ್ರಶಂಸೆ ವ್ಯಕ್ತ ಪಡಿಸಿದರು. 

ರಸ್ತೆ ಸುರಕ್ಷತಾ ಸಪ್ತಾಹ; ಸಿಂದಗಿ ಪಟ್ಟಣದಲ್ಲಿ ಕಳೆದ ವರ್ಷ 420 ಬೈಕ್ ಅಪಘಾತವಾದ ಬಗ್ಗೆ ದೂರು ದಾಖಲಾಗಿದ್ದು ಇದರಲ್ಲಿ ಸುಮಾರು 5ನೂರು ಜನ ಮೃತ ಪಟ್ಟಿದ್ದಾರೆ. ಅದಕ್ಕೆ ಎಲ್ಲ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಟ್ರಾಫೀಕ ನಿಯಮಗಳನ್ನು ಪಾಲಿಸಬೇಕು. ಕೆಲವರು ಕುಡಿದ ಅಮಲಿನಲ್ಲಿ ಬೈಕ್ ಚಲಾವಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಸಣ್ಣ ಮಕ್ಕಳ ಕೈಯಲ್ಲಿ ಬೈಕ್ ಚಲಾವಣೆಗೆ ನೀಡಬೇಡಿ ನೀಡಿದರೆ ಅಂತಹ ಪಾಲಕರಿಗೆ ರೂ. 25 ಸಾವಿರ ದಂಡ ವಿಧಿಸಲಾಗುವುದು ಕಾರಣ ಸಾರ್ವಜನಿಕರು ರಸ್ತೆ ನಿಯಮಗಳನ್ನು ಪಾಲಿಸಿ ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದರು. 

ಈ ಸಂದರ್ಭದಲ್ಲಿ ಪ್ರೋಬೆಸನರಿ ವಿಜಯಪುರ  ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಸಾಲೋ ಇದ್ದರು.