ಅಂಬೇಡ್ಕರ್‌ರನ್ನು ಅವಮಾನಿಸುವುದು ಹೀನ ಕೃತ್ಯ: ಪ್ರೊ. ಎಚ್.ಟಿ. ಪೋತೆ
Insulting Ambedkar is a despicable act: Prof. H.T. Pothe
ಲೋಕದರ್ಶನ ವರದಿ
ಕಲಬುರಗಿ 21: ಡಾ. ಬಿ.ಆರ್. ಅಂಬೇಡ್ಕರ್ ಅವರು ಕೇವಲ ಶೋಷಿತ ವರ್ಗಕ್ಕೆ ಮಾತ್ರ ಸಂವಿಧಾನವನ್ನು ಬರೆದವರಲ್ಲ. ಪ್ರತಿಯೊಬ್ಬ ನಾಗರಿಕನೂ ಸಂವಿಧಾನದ ಸೌಲಭ್ಯವನ್ನು ಅನುಭವಿಸುತ್ತಿದ್ದಾನೆ. ಸಂವಿಧಾನ ರಕ್ಷಕರಾಗಿ ಶ್ರಮಿಸುತ್ತಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಮಾನಿಸಿರುವುದು ಬುದ್ಧ, ಬಸವ, ಗಾಂಧಿ ಹಾಗೂ ಡಾ. ಅಂಬೇಡ್ಕರ್ ಅವರ ನೆಲದಲ್ಲಿ ನಡೆದ ಹೀನ ಕೃತ್ಯ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕಲಾನಿಕಾಯದ ಡೀನ್ ಹಾಗೂ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಆಯೋಜಿಸಿದ್ದ ‘ಕನ್ನಡ ಸಾಹಿತ್ಯ ಮತ್ತು ಅಸ್ಪೃಶ್ಯತೆ: ಸಮಕಾಲೀನ ತಲ್ಲಣಗಳು’ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಾ. ಅಂಬೇಡ್ಕರ್ ಅವರು ಹುಟ್ಟಿನಿಂದಲೇ ಸಂಕಷ್ಟ, ಅವಮಾನ ಮತ್ತು ಅಪಮಾನಗಳನ್ನು ಅನುಭವಿಸಿದ್ದರು. ಅವರ ಚಳವಳಿಗೆ ನೂರು ವರ್ಷಗಳಾದರೂ ಇಂದಿಗೂ ಅವರನ್ನು ಅವಮಾನಿಸುವ ಘಟನೆಗಳು ನಡೆಯುತ್ತಿರುವುದು ವಿಷಾದಕರ. ಜಾತಿ ಮತ್ತು ಗುಲಾಮಗಿರಿಯ ವ್ಯವಸ್ಥೆಯಿಂದ ಹೊರಬಂದು ಅನ್ಯಾಯ ಹಾಗೂ ಅವಮಾನಗಳನ್ನು ಖಂಡಿಸದೆ ಶೋಷಣೆಯಿಂದ ಮುಕ್ತಿ ಸಾಧ್ಯವಿಲ್ಲ ಎಂದರು.
ವೈಚಾರಿಕ ಚಿಂತಕ ಹಾಗೂ ಶರಣ ಸಾಹಿತ್ಯಿ ಡಾ. ಜೆ.ಎಸ್. ಪಾಟೀಲ ಮುಖ್ಯ ಅತಿಥಿಯಾಗಿ ಮಾತನಾಡಿ, ಮನುಸ್ಮೃತಿಯ ನೆಲೆಯಲ್ಲಿ ದೇವರು ಮತ್ತು ಧರ್ಮದ ಹೆಸರಿನಲ್ಲಿ ಅಸ್ಪೃಶ್ಯರ ಮೇಲೆ ನಿರಂತರ ಶೋಷಣೆ ನಡೆಯುತ್ತಿದೆ. ಅಸಮಾನತೆಯ ವಿರುದ್ಧ ಧ್ವನಿ ಎತ್ತದೆ ತಾರತಮ್ಯವನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಬುದ್ಧ ಮತ್ತು ಬಸವಣ್ಣನ ಕಾಲದಿಂದಲೂ ಸಮಾನತೆಯ ಸಮಾಜಕ್ಕಾಗಿ ಹೋರಾಟಗಳು ನಡೆದಿವೆ. ಶರಣರು ನೀಡಿದ ಮಾನವೀಯ ಮೌಲ್ಯಗಳನ್ನು ಅನುಸರಿಸುವುದು ಎಲ್ಲರ ಕರ್ತವ್ಯ ಎಂದರು.
371ಜೆ ತಿದ್ದುಪಡಿಯಿಂದ ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣ, ಉದ್ಯೋಗ ಹಾಗೂ ಅಭಿವೃದ್ಧಿಗೆ ಹಲವು ಅವಕಾಶಗಳು ದೊರೆತಿವೆ. ಈ ಭಾಗದ ಮಕ್ಕಳಿಗೆ ಪ್ರತಿವರ್ಷ ಸಾವಿರಾರು ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಸೀಟುಗಳು ಲಭ್ಯವಾಗುತ್ತಿದ್ದು, ಇದಕ್ಕೆ 371ಜೆ ಪ್ರಮುಖ ಕಾರಣವಾಗಿದೆ ಎಂದು ಪ್ರೊ. ಎಚ್.ಟಿ. ಪೋತೆ ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಎಂ.ಬಿ. ಕಟ್ಟಿಯವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸೂರ್ಯಕಾಂತ್ ಸುಜಾತ್, ವಿವಿಧ ವಿಭಾಗಗಳ ಅಧ್ಯಾಪಕರು, ಕನ್ನಡ ಸಂಶೋಧನಾ ಸಂಘ ಹಾಗೂ ಕನ್ನಡ ಸಾಹಿತ್ಯ ಸಂಘದ ಪದಾಧಿಕಾರಿಗಳು, ಅಧ್ಯಾಪಕರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಗೀತ ವಿಭಾಗದ ಅಧ್ಯಾಪಕಿ ಡಾ. ಜಯದಾನಮ್ಮ ವಚನ ಗಾಯನ ಪ್ರಸ್ತುತಪಡಿಸಿದರು. ಡಾ. ಶಿವಗಂಗಾ ಬಿಲಗುಂದಿ ವಂದಿಸಿದರು. ಡಾ. ನಂದಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 