ಲೋಕದರ್ಶನ ವರದಿ ಆದರ್ಶ ಶಿಕ್ಷಕ ನಾಗೇಂದ್ರ ನಾಯಕ ಅವರಿಗೆ ಜ್ಞಾನಾಂಕುರ ಗುರು ಪ್ರಶಸ್ತಿ
ಕಾಗವಾಡ, 25 : ಕಳೆದ 25 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸುದೀರ್ಘ ಬೋಧನೆ ಮಾಡಿದ ಕುಸನಾಳ ಗ್ರಾಮದ ಕುಂಜವನದ ಪಾರ್ಶ್ವನಾಥ ಮೈನಾರಿಟಿ ಎಜುಕೇಶನ್ ಟ್ರಸ್ಟ್‌ನ ಮುಖ್ಯೋಧ್ಯಾಪಕ, ಆದರ್ಶ ಶಿಕ್ಷಕ ನಾಗೇಂದ್ರ ನಾಯಿಕ ಅವರ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಆದರ್ಶ ಶಿಕ್ಷಕರಿಗೆ ಬೆಳಗಾವಿ ಜಿಲ್ಲಾ ಜೈನ ಸಮಾಜ ಅಲ್ಪಸಂಖ್ಯಾತರ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ವತಿಯಿಂದ ಜ್ಞಾನಾಂಕುರ ಗುರು ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಶುಕ್ರವಾರ ದಿ. 23 ರಂದು ತಾಲೂಕಿನ ಶಿರಗುಪ್ಪಿ ಗ್ರಾಮದ ಅರಿಹಂತ ಶಿಕ್ಷಣ ಸಂಸ್ಥೆಯ ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕುಸನಾಳದ ಶ್ರೀ ಪಾರ್ಶ್ವನಾಥ ಎಜುಕೇಶನ್ ಮೈನಾರಿಟಿ ಟ್ರಸ್ಟ್ ಕುಂಜುವನ ಈ ಸಂಸ್ಥೆಯಲ್ಲಿ ಕಳೆದ 25 ವರ್ಷಗಳಿಂದ ಮುಖ್ಯೋದ್ಯಾಪಕರಾಗಿ ನಾಗೇಂದ್ರ ನಾಯಕ ಇವರು ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಇತ್ತೀಚಿಗೆ ಪಾರ್ಶ್ವನಾಥ ಸಂಸ್ಥೆಯ ಬೆಳ್ಳಿಹಬ್ಬದ ಕಾರ್ಯಕ್ರಮದಲ್ಲಿ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ, ಗೌರವಿಸಲಾಗಿತ್ತು. ಇವರ ಒಟ್ಟಾರೆ ಸೇವೆ ಪರಿಗಣಿಸಿ ಜಿಲ್ಲಾ ಜೈನ್ ಶಿಕ್ಷಣ ಸಂಸ್ಥೆಗಳ ಅಸೋಸಿಯೇಷನ್ ವತಿಯಿಂದ ಸನ್ 2025-26 ನೇ ಸಾಲಿನ ಜ್ಞಾನಾಂಕುರ ಗುರು ಪ್ರಶಸ್ತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡುರಂಗ ಮದಭಾವಿ ಇವರ ಹಸ್ತದಿಂದ ನೀಡಿ ಗೌರವಿಸಲಾಯಿತು.
ಈ ವೇಳೆ ಝಿ ಕನ್ನಡ ವಾಹಿನಿಯ ಮಹಾನಟಿ ಕುಮಾರಿ ವರ್ಷಾ ಡಿಗ್ರಜೆ, ಅರಿಹಂತ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅನೀಲ ಚೌಗುಲೆ ಸೇರಿದಂತೆ ಸಂಸ್ಥೆಯ ಎಲ್ಲ ಸಂಚಾಲಕರು, ಶಿಕ್ಷಕರು, ಗಣ್ಯರು, ಪಾಲಕರು, ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.