ಸ್ವತಂತ್ರ ಸಂಸದೆಯಾಗಿ ನನ್ನ‌ ಜವಾಬ್ದಾರಿ ನಿರ್ವಹಿಸಿದ್ದೀನಿ: ಸುಮಲತಾ ಅಂಬರೀಷ್

ಮಂಡ್ಯ 26: ಸ್ವತಂತ್ರ ಸಂಸದೆಯಾಗಿ ನನ್ನ‌ ಜವಾಬ್ದಾರಿ ನಿರ್ವಹಿಸಿದ್ದೀನಿ. ಮೋದಿ ಅವರು ಪ್ರಧಾನಿಯಾಗಬೇಕು ಎಂಬ ಉದ್ದೇಶದಿಂದ ನಾನು ಗೆದ್ದಂತಹ ಕ್ಷೇತ್ರ ತ್ಯಾಗ ಮಾಡಿದ್ದೀನಿ. ಈ ಹಂತದಲ್ಲಿ ಅಂಬರೀಶ್ ಅವರ ಪಡೆಯ ಶಕ್ತಿಯನ್ನು ಎನ್​​ಡಿಎಗೆ ಕೊಟ್ಟಿದ್ದೇವೆ. ನಾವು ನಿಷ್ಠೆಯಿಂದ ಕೆಲಸ ಮಾಡಿದ್ದೇವೆ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ.

ನನ್ನನ್ನು ಯಾವುದೇ ಪ್ರಚಾರಕ್ಕೆ ಕರೆದಿಲ್ಲ. ಕುಮಾರಸ್ವಾಮಿ ನಮ್ಮ ಮನೆಗೆ ಬಂದು ಹೋದ ನಂತರ ನನಗೆ ಒಂದು ಕರೆ ಮಾಡಿ ಪ್ರಚಾರಕ್ಕೆ ಬನ್ನಿ ಎಂದು ಕೇಳಿಲ್ಲ. ಇಷ್ಟು ತ್ಯಾಗ ಮಾಡಿಯೂ ನನ್ನ ಕರೆಯಲಿಲ್ಲ ಅನ್ನೋದು ನನಗೆ ಬೇಸರವಾಯ್ತು ಎಂದು ಅಸಮಾಧಾನ ಹೊರ ಹಾಕಿದರು.

ಈ‌ ದಿನದವರೆಗೂ ಜೆಡಿಎಸ್​ನ ಯಾವ ನಾಯಕರು ಯಾವುದೇ ಸಭೆಗೆ ಆಹ್ವಾನಿಸಿಲ್ಲ. ಅವರು ಕರೆದು ನಾನು ಬರದೇ ಇದ್ದರೆ ತಪ್ಪಾಗುತ್ತದೆ. ಆದರೆ ಅವರು ನನ್ನ‌ ಕರೆದಿಲ್ಲ, ನಾನಿಲ್ಲದೇ ಅವರು ಚುನಾವಣೆ ಮಾಡಿಕೊಳ್ಳುತ್ತೀವಿ ಎಂಬ ಭಾವನೆ ಇರಬಹುದು ಎಂದು ದಳಪತಿಗಳಿಗೆ ಸುಮಲತಾ ಅಂಬರೀಶ್ ಟಾಂಗ್ ಕೊಟ್ಟರು.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ಮತದಾನ ಮಾಡಿದ ನಂತರ ಮಾತನಾಡಿದ ಅವರು, ಸುಮಲತಾ ಅಂಬರೀಶ್, ಚುನಾವಣೆಯಲ್ಲಿ ಸಹಕರಿಸಿಲ್ಲ ಎಂಬ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ದೇವೆಗೌಡರು ದೊಡ್ಡವರು, ಅವರಿಗೆ ಸರಿಯಾದ ಮಾಹಿತಿ ಕೊಡದೆ ಆ ರೀತಿ ಹೇಳಿದ್ದಾರೆ. ಅವರಿಂದ ಅಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ ಎಂದು ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದರು.

ಹಾಗಿದ್ದರೇ ನಾನು ಕ್ಷೇತ್ರ ತ್ಯಾಗ ಮಾಡಿದ್ದು ತಪ್ಪಾ ಎಂದು ಸುಮಲತಾ ಆಂಬರೀಶ್ ಪ್ರಶ್ನೆ ಮಾಡಿದರು. ನನ್ನ ಅಭಿಮಾನಿಗಳು ಒಂದಷ್ಟು ಜನ ವಿರೋಧ ವ್ಯಕ್ತಪಡಿಸಿದರು. ಸೋತ ಸೀಟನ್ನೇ ಬಿಡಲ್ಲ ಅಂತಹುದರಲ್ಲಿ ನಾನು ಗೆದ್ದ ಸೀಟು ಬಿಟ್ಟು ಕೊಟ್ಟಿದ್ದೀನಿ ಎಂದರು.