ರೂಂನಲ್ಲಿ ಕೂಡಿ ಹಾಕಿ ಹಿಂಸೆ, ದೌರ್ಜನ್ಯ ಆರೋಪ: ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ರಾಧಿಕಾ ಖೇರಾ

ಛತ್ತೀಸ್​ಗಢ 07: ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದ ರಾಧಿಕಾ ಖೇರಾ ಇಂದು ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ನಾಯಕರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, 'ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿದ ಬಳಿಕ ಪಕ್ಷದಲ್ಲಿ ಹೀನಾಯವಾಗಿ ನಡೆಸಿಕೊಂಡರು. ಕಚೇರಿಯಲ್ಲಿ ಕೂಡಿ ಹಾಕಿ, ಕುಡಿದು ತಡರಾತ್ರಿ ಬಾಗಿಲು ತಟ್ಟುತ್ತಿದ್ದರು ಎಂದು ಹೇಳಿದ್ದಾರೆ.

ಹೌದು.. ಛತ್ತೀಸ್‌ಗಢದ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ರಾಧಿಕಾ ಖೇರಾ ಇಂದು ಸುದ್ದಿಗೋಷ್ಠಿ ನಡೆಸಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದು, ಪ್ರಮುಖವಾಗಿ ತಾವು ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿ ಬಂದ ಬಳಿಕ ತನ್ನನ್ನು ಪಕ್ಷದಲ್ಲಿ ಅತ್ಯಂತ ಹೀನಾಯವಾಗಿ ಕಾಣಲಾಯಿತು ಎಂದು ಆರೋಪಿಸಿದ್ದಾರೆ. ಅಯೋಧ್ಯೆಗೆ ಭೇಟಿ ನೀಡಿದ ಕಾರಣಕ್ಕೆ ನನಗೆ ಅಗೌರವ ತೋರಲಾಯಿತು. ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿದ ಬಳಿಕ ಪಕ್ಷದೊಳಗೆ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ನನ್ನ ಮನೆಯಲ್ಲಿ ಶ್ರೀರಾಮನ ಧ್ವಜಾರೋಹಣ ಮಾಡಿದ ದಿನದಿಂದಲೇ ಕಾಂಗ್ರೆಸ್ ತನ್ನ ಮೇಲೆ ದಾಳಿ ಮಾಡಲಾರಂಭಿಸಿದೆ. ಆಗಾಗ ನನ್ನನ್ನು ಅವಮಾನಿಸುತ್ತಿದ್ದರು. 

ರಾಹುಲ್ ಗಾಂಧಿ ಅವರ ನ್ಯಾಯ ಯಾತ್ರೆ ಛತ್ತೀಸ್‌ಗಢದಲ್ಲಿದ್ದಾಗ, ರಾಜ್ಯ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ನಾಯಕರು ತನ್ನನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿ, ನಿಂದಿಸಿ, ದೌರ್ಜನ್ಯ ನಡೆಸಿದ್ದಾರೆ. ರಾಜ್ಯ ಕಾಂಗ್ರೆಸ್​ನ ಮಾಧ್ಯಮ ಅಧ್ಯಕ್ಷ ಸುಶೀಲ್ ಗುಪ್ತಾ ನನಗೆ ಮದ್ಯವನ್ನು ನೀಡಿದರು. ಅವರು ಪಾನಪತ್ತರಾಗಿ ತಡರಾತ್ರಿ ನನ್ನ ಕೋಣೆಯ ಬಾಗಿಲು ತಟ್ಟಿದರು ಎಂದು ಆರೋಪಿಸಿದ್ದಾರೆ. ಏಪ್ರಿಲ್​ 30 ರಂದು ಸಂಜೆ ನಾನು ರಾಜ್ಯ ಕಾಂಗ್ರೆಸ್ ಕಚೇರಿಯಲ್ಲಿ ಸುಶೀಲ್ ಆನಂದ್ ಶುಕ್ಲಾ ಅವರನ್ನು ಮಾತನಾಡಿಸಲು ಹೋದಾಗ, ಅವರು ನನ್ನನ್ನು ನಿಂದಿಸಿ ನನ್ನ ಮೇಲೆ ಕೂಗಾಡಿದರು. ಅವರು ನನ್ನನ್ನು ರೂಂ ಒಳಗೆ ಲಾಕ್ ಮಾಡಿದರು, ಅವರು ಇತರ ಎರಡು ರಾಜ್ಯಗಳ ವಕ್ತಾರರೊಂದಿಗೆ ನನ್ನನ್ನು ನಿಂದಿಸಿದರು. ನಾನು ಕಿರುಚಿದೆ. ಆದರೆ ಯಾರೂ ಬಾಗಿಲು ತೆರೆಯಲಿಲ್ಲ. ನನ್ನ ಮೇಲೆ ದೌರ್ಜನ್ಯ ನಡೆದಿತ್ತು. ನಾನು ಕಾಂಗ್ರೆಸ್ ಹಿರಿಯ ನಾಯಕರಿಗೆ ದೂರು ನೀಡಿದ್ದೇನೆ. ಆದರೆ ಯಾರೂ ನನ್ನ ದೂರುಗಳಿಗೆ ಪ್ರಾಮುಖ್ಯತೆ ಕೊಟ್ಟಿಲ್ಲ ಎಂದು ರಾಧಿಕಾ ಆರೋಪಿಸಿದ್ದಾರೆ.

ನಿನ್ನೆ ಛತ್ತೀಸ್‌ಗಢದ ಕಾಂಗ್ರೆಸ್ ನಾಯಕಿ ಹಾಗೂ ರಾಷ್ಟ್ರೀಯ ವಕ್ತಾರೆ ರಾಧಿಕಾ ಖೇರಾ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದ ಪತ್ರದಲ್ಲಿ ರಾಜೀನಾಮೆ ಜೊತೆಗೆ ಗಂಭೀರ ಆರೋಪಗಳನ್ನೂ ಮಾಡಿದ್ದಾರೆ. ರಾಜ್ಯ ಘಟಕದಲ್ಲಿ ತನ್ನನ್ನು ಅಗೌರವಿಸಲಾಗಿದೆ ಎಂದು ಪತ್ರದಲ್ಲಿ ರಾಧಿಕಾ ಆರೋಪಿಸಿದ್ದಾರೆ. ತಮ್ಮ ಪತ್ರವನ್ನು X ನಲ್ಲಿ ಪೋಸ್ಟ್ ಮಾಡಿದ್ದಾರೆ.