ಲೋಕಸಭಾ ಚುನಾವಣೆಗೆ ನಾನು ಪ್ರಬಲ ಆಕಾಂಕ್ಷಿ: ಶಿವಕುಮಾರ ಮಲಘಾಣ

ಮುಧೋಳ 28: 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ನಾನು ಪ್ರಬಲ ಆಕಾಂಕ್ಷಿಯಾಗಿದ್ದು ಈ ಸಲವಾದರೂ ಮುಧೋಳ ತಾಲ್ಲೂಕಿಗೆ ಅವಕಾಶ ನೀಡಬೇಕು ಎಂದು ಮಾಜಿ ಜಿ.ಪಂ ಅಧ್ಯಕ್ಷ ಶಿವಕುಮಾರ ಮಲಘಾಣ ಹೇಳಿದರು. 

ಮಂಗಳವಾರ ನಗರದ ಕಾ.ನಿ.ಪ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮುಧೋಳ ವಿಧಾನಸಭಾ ಕ್ಷೇತ್ರ ಎಸ್‌.ಸಿ ಮೀಸಲು ಕ್ಷೇತ್ರವಾಗಿದ್ದರಿಂದ ಇತರೆ ರಾಜಕಿಯ ಮುಖಂಡರಿಗೆ ರಾಜಕೀಯವಾಗಿ ಮುಂದೆ ಬರಲು ಅವಕಾಶ ಇಲ್ಲವಾಗಿದೆ, 1989ರಲ್ಲಿ ಕೇವಲ ಒಂದು ಸಲ ಮುಧೋಳ ತಾಲ್ಲೂಕಿನ ಬಾಗಲಕೋಟೆ ಲೋಕಸಭಾ ಚುನಾವಣೆಗೆ ಅವಕಾಶ ನೀಡಿದ್ದು ಅಂದಿನಿಂದ ಇಲ್ಲಿಯವರೆಗೆ ಯಾರಿಗೂ ಸಹ ಈ ಅವಕಾಶ ಸಿಕ್ಕಿಲ್ಲ. ಉಳಿದೆಲ್ಲ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಲು ಅವಕಾಶ ಇದ್ದು ನಮ್ಮ ತಾಲ್ಲೂಕಿಗೆ ಈ ಅವಕಾಶ ಇಲ್ಲವಾಗಿದೆ. ಆದರೆ ನಮ್ಮ ತಾಲ್ಲೂಕಿನ ಜನ ಎರಡೂ ಪಕ್ಷದಿಂದ ಆಯ್ಕೆಯಾಗಿ ಹೋದ ಶಾಸಕರು ಕ್ಯಾಬಿನೆಟ್ ದರ್ಜೆಯ ಮಂತ್ರಿ ಹಾಗೂ ಉಪಮುಖ್ಯ ಮಂತ್ರಿಯವರೆಗೆ ಹೋದರು ನಮ್ಮವರೆಂಬ ಭಾವನೆಯಿಂದ ಸಹಕಾರ ನೀಡುತ್ತಾ ಬಂದಿದ್ದು ಈ ಸಲವಾದರೂ ಅವಕಾಶ ನೀಡಿದ್ದೇಯಾದರೆ ಕಾಂಗ್ರೆಸ್ ಪಕ್ಷದಿಂದ ಸಂಸತ್ ಭವನದತ್ತ ಹೋಗಲು ಎಲ್ಲ ರೀತಿಯ ತಯಾರಿ ನಾವು ಮಾಡಿಕೊಂಡಿದ್ದೇವೆ ಎಂದು ಅವರು ಹೇಳಿದರು. 

ನಾನು ಮುಧೋಳ ತಾಲ್ಲೂಕಾ ಕಾಂಗ್ರೆಸ್ ಹಾಗೂ ತಾ.ಪಂ ಅಧ್ಯಕ್ಷರಾಗಿ, ಪಿಎಲ್‌ಡಿ ಬ್ಯಾಂಕ್, ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿ ಎರಡು ಭಾರಿ ಅಧಿಕಾರ ವಹಿಸಿಕೊಂಡು ಪೂರ್ಣ ಪ್ರಮಾಣದಲ್ಲಿ ಜಿಲ್ಲೆಯ ಮೂಲೆ ಮೂಲೆಯಲ್ಲಿ ಪ್ರವಾಸ ಮಾಡಿ ಶೈಕ್ಷಣಿಕ, ಕೃಷಿ, ನೈರ್ಮಲ್ಯ, ಕುಡಿಯುವ ನೀರು, ರಸ್ತೆ, ವಿದ್ಯುತ್  ಸೇವೆಯನ್ನು ಒದಗಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿ ಅಭಿವೃದ್ಧಿ ಪರ ಕಾರ್ಯದಲ್ಲಿ ತೊಡಗಿದ್ದರಿಂದ ಇಲ್ಲಿಯವರೆಗೂ ನನ್ನ ಪರ ಜನರು ಕಾರ್ಯ ಮಾಡುತ್ತಾರೆ ಎಂಬ ನಂಬಿಕೆ ನನಗೆ ಇದೆ ಈಗಾಗಲೆ ನಾನು ಭೂತಮಟ್ಟದಿಂದ ತಯಾರಿ ನಡೆಸಿದ್ದು ಜಿಲ್ಲಾ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕಾಂಗ್ರೆಸ್ ಮುಖಂಡರ ಜೊತೆಗೆ ಮಾತುಕತೆ ನಡೆಸಿ ಅವಕಾಶಕ್ಕಾಗಿ ವಿನಂತಿ ಮಾಡಿದ್ದೇನೆ ಎಂದು ಹೇಳಿದರು. 

ಕಾಂಗ್ರೆಸ್ ಮುಖಂಡ ಗೀರೀಶ ಲಕ್ಷಾಣಿ ಮಾತನಾಡಿ ಶಿವಕುಮಾರ ಮಲಘಾಣ ಅವರು  ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿ ಎರಡು ಅವಧಿಯಲ್ಲಿ ಮಾಡಿದ ಕಾರ್ಯ ಅವರನ್ನು ಕೈ ಹಿಡಿಯುತ್ತದೆ ಜಿ.ಪಂ ಅಧ್ಯಕ್ಷರಾಗಿ ಕಾರ್ಯ ಮಾಡಿದ್ದರಿಂದ ಲೋಕಸಭಾ ಕ್ಷೇತ್ರಕ್ಕೆ ಅವರು ಚಿರಪರಿಚಿತರು ಈ ಕಾರಣಕ್ಕಾಗಿ ಅವಕಾಶವಂಚತ ಮುಧೋಳ ಕ್ಷೇತ್ರ ಮಲಘಾಣ ಅವರಿಗೆ ಈ ಸಲ ಕಾಂಗ್ರೆಸ್ ಟಿಕೇಟ ನೀಡಬೇಕು ಎಂದು ಹೇಳಿದರು. 

ರೈತ ಮುಖಂಡ ಪಾಂಡಪ್ಪ ಮಂಟೂರ ಮಾತನಾಡಿ ಸರ್ವ ಜನಾಂಗದವರ ಜೊತೆಗೆ ಸ್ನೇಹಿತರಂತ ವ್ಯಕ್ತಿತ್ವವನ್ನು ಹೊಂದಿರುವ ಶಿವಕುಮಾರ ಮಲಘಾಣ ಅವರಿಗೆ ಈ ಸಲ ಲೋಕಸಭಾ ಕಾಂಗ್ರೆಸ್ ಟಿಕೇಟ ನೀಡಬೇಕು  ಬಾಗಲಕೋಟೆಯ ಸರ್ವಾಂಗೀನ ಅಭಿವೃದ್ಧಿಗಾಗಿ ಅವರ ಸೇವೆ ಜಿಲ್ಲೆಗೆ ಅತ್ಯವಶ್ಯಕವಾಗಿದೆ ಸಿ.ಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ರಾಜ್ಯ ಮತ್ತು ಜಿಲ್ಲೆಯ ಎಲ್ಲ ಮುಖಂಡರಿಗೆ ಮನವಿ ಮಾಡುತ್ತೇನೆ  ಎಂದು ಹೇಳಿದರು. 

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಚಿದಾನಂದ ಪಾಟೀಲ್, ಸುರೇಶ ಅಂಕಲಗಿ ಇದ್ದರು.