ಕಾರವಾರದಲ್ಲಿ ತ್ಯಾಗ ಮತ್ತು ಬಲಿದಾನದ ಪವಿತ್ರ ಬಕ್ರೀದ್ ಆಚರಣೆ
ಕಾರವಾರ 29: ಮುಸ್ಲಿಂ ಬಾಂಧವರ ಪವಿತ್ರ ಹಬ್ಬವಾದ ಬಕ್ರೀದ್ (ಈದ್-ಉಲ್-ಅಧಾ)ನ್ನು ಭಕ್ತಿ ಶ್ರದ್ಧೆಯಿಂದ ಕಾರವಾರ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಆಚರಿಸಲಾಯಿತು. ಪ್ರಮುಖವಾಗಿ ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ನ್ನು ಪ್ರವಾದಿ ಇಬ್ರಾಹಿಂ ಅವರು ಅಲ್ಲಾಹುಗೆ ತಮ್ಮ ಮಗನನ್ನೇ ಬಲಿ ನೀಡಲು ಮುಂದಾದಾಗ, ಅವರ ದೇವಭಕ್ತಿಗೆ ಮೆಚ್ಚಿ ಆ ದೇವರೇ ಮಗನ ಬದಲಾಗಿ ಪ್ರಾಣಿಯೊಂದನ್ನು ಬಲಿಕೊಡಲು ಅನುಗ್ರಹಿಸಿದ ಪವಾಡದ ನೆನಪಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಜಾಮೀಯಾ ಮಸೀದಿಯ ಮೌಲಾನಾ ಮೊಹಮ್ಮದ್ ಶಂಶುದ್ದೀನ್ ಹೇಳಿದರು. ಹಬ್ಬದ ದಿನದಂದು ಮುಂಜಾನೆ ಮುಸ್ಲಿಮರು ವಿಶೇಷ ಮಸೀದಿಗಳು ಈದ್ಗಾ ಮೈದಾನಗಳಲ್ಲಿ ಒಗ್ಗೂಡಿ ಸಾಮೂಹಿಕ ಪ್ರಾರ್ಥನೆ (ನಮಾಜ್) ಸಲ್ಲಿಸಿದರು.
ಪ್ರಾರ್ಥನೆಯ ನಂತರ ಒಬ್ಬರನ್ನೊಬ್ಬರು ಆಲಂಗಿಸಿಕೊಂಡು ’ಈದ್ ಮುಬಾರಕ್’ ಎಂದು ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಸಿಹಿತಿಂಡಿಗಳನ್ನು ಹಂಚಿದರು. ಕಾರವಾರ ನಗರದ ಮದೀನಾ ಜಾಮಿಯಾ ಮಸೀದಿಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಬೆಳಿಗ್ಗೆ ಪ್ರಾರ್ಥನೆಯನ್ನು ಜಾಮಿಯಾ ಮಸೀದಿ ಮೌಲನರಾದ ಮೊಹಮ್ಮದ್ ಶಂಶೋದ್ದೀನ್ ಅವರು ಪ್ರಾರ್ಥನೆಯನ್ನು ನೆರವೇರಿಸಿಕೊಟ್ಟರು ಈ ಸಂದರ್ಭದಲ್ಲಿ ಮಸೀದಿ ಅಧ್ಯಕ್ಷರಾದ ಅಸ್ಲಾಂ ಬುಖಾರಿ, ಉಪಾಧ್ಯಕ್ಷ ಬಾಬು ಶೇಕ್ ಕಾರ್ಯದರ್ಶಿಗಳಾದ ರಶೀದ್ ಶೇಕ್,ಸೈಯದ್ ಅಶ್ರಫ್ ಖಾದ್ರಿ,ಹೈದರ್ ಶೇಖ್,ಸಲೀಂ ಶೇಖ್,ಮೂಬಸರ ಶೇಖ್, ಶಂಶೋದ್ದೀನ್ ಮಕಾಂದಾರ್, ಅಬ್ದುಲ್ ಕರೀಮ್ ನಾಸ್ವಾಲೆ, ಇಜಾಜ್ ಮೂಮೀನ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.