ಸೂರು ಭಾಗ್ಯ ಕಾಣದ ಹಾರೂಗೇರಿ ಪೊಲೀಸ್ ಠಾಣೆ

ಸೂರು ಭಾಗ್ಯ ಕಾಣದ ಹಾರೂಗೇರಿ ಪೊಲೀಸ್ ಠಾಣೆ Harugeri Police Station, which has not seen any success

ಲೋಕದರ್ಶನ ವರದಿ 

                                ಮಳೆಗಾಲದಲ್ಲಿ ಸೋರುವ ಚಾವಣಿ/ಹೊಸ ಕಟ್ಟಡ ನಿರ್ಮಾಣ ಗೌಣ : ಮಹಾದೇವ ಅರಕೇರಿ 

ಹಾರೂಗೇರಿ 21: ಹಾರೂಗೇರಿಗೆ ಪೊಲೀಸ್ ಠಾಣೆ ಮಂಜೂರಾಗಿ ದಶಕ ಕಳೆದರೂ ಇನ್ನೂ ಠಾಣೆಗೆ ಕಟ್ಟಡ ಭಾಗ್ಯವಿಲ್ಲ. ಠಾಣೆಗೆ ಜಾಗ ಮಂಜೂರಾಗಿ 4 ವರ್ಷ ಕಳೆದರೂ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವಲ್ಲಿ ಸರ್ಕಾರ ಮೀನಮೇಷ ಎನಿಸುತ್ತಿದ್ದು, ಜನಸಾಮಾನ್ಯರು ಹಾಗೂ ಪೊಲೀಸ್ ಸಿಬ್ಬಂದಿ ತೊಂದರೆ ಅನುಭವಿಸುವಂತಾಗಿದೆ. 

   ಮಳೆ ಬಂದಾಗ ಸೋರುವ ಕಾರಣಕ್ಕೆ ಪೊಲೀಸ್ ಠಾಣೆ ಕಟ್ಟಡದ ಮೇಲ್ಚಾವಣಿಗೆ ಹಲವು ವರ್ಷಗಳಿಂದ ತಾಡಪತ್ರಿ ಹೊದಿಕೆಯೇ ಗತಿಯಾಗಿದೆ. ಗೃಹ ಇಲಾಖೆಯಲ್ಲಿ ಅಗತ್ಯವಾದ ಅನುದಾನವಿದ್ದರೂ ಹೊಸ ಕಟ್ಟಡ ನಿರ್ಮಿಸಲು ಮುಂದಾಗದಿರುವುದು ವಿಪರ್ಯಾಸವೇ ಸರಿ. 

   ಹೌದು, ಹಾರೂಗೇರಿ ಪೊಲೀಸ್ ಠಾಣೆ ಕಟ್ಟಡಕ್ಕೆ ತಾಡಪತ್ರಿ ಹೊದಿಕೇ ಆಸರೆಯಾಗಿದೆ. 2022 ರಲ್ಲಿ ನೀರಾವರಿ ಇಲಾಖೆಯ ಜಿಎಲ್‌ಬಿಸಿಯಲ್ಲಿ 30 ಗುಂಟೆ ಜಾಗವನ್ನು ಸರ್ಕಾರ ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದೆ. ಠಾಣೆ ಹೆಸರಿನಲ್ಲಿ ಉತಾರ ಕೂಡ ಇದೆ. ಪೊಲೀಸ್ ಠಾಣೆ ಕಟ್ಟಡ ನಿರ್ಮಾಣಕ್ಕೆ 2ಕೋಟಿ ರೂ. ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿ ವರ್ಷಗಳೇ ಕಳೆದರೂ ನೂತನ ಕಟ್ಟಡ ಮಂಜೂರಾತಿ ಮಾಡಿಲ್ಲ. 

   ಶತಮಾನಗಳ ಹಿಂದೆ ನಿರ್ಮಾಣವಾದ ಗ್ರಾಮ ಪಂಚಾಯತಿಯ ಹಳೆಯ ಗೋಡೌನ್‌ನಲ್ಲಿ ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಠಾಣೆ, ಮಳೆಗಾಲದಲ್ಲಿ ಸೋರುವುದರಿಂದ ದಾಖಲೆಗಳನ್ನು ರಕ್ಷಿಸುವುದೇ ಸಿಬ್ಬಂದಿಗೆ ದೊಡ್ಡ ಸವಾಲಾಗಿದೆ. ಒಡೆದ ಹಂಚುಗಳ ಮೇಲೆ ತಾಡಪತ್ರಿ ಹೊದಿಕೆ ಇದ್ದರೂ, ಶಿಥಿಲಾವಸ್ಥೆಯಲ್ಲಿರುವ ಕಟ್ಟಡ ಮಳೆಯಲ್ಲಿ ನೆನೆದು ಗೋಡೆಗಳೆಲ್ಲ ಹಸಿಯಾಗುತ್ತಿವೆ. ಕಾಗದ ಪತ್ರಗಳು, ದಾಖಲೆಗಳನ್ನು ಬಟ್ಟೆಯಲ್ಲಿ ಕಟ್ಟಿರುವುದರಿಂದ ಅವು ಬೂಸ್ಟ್‌ಬರುವ ಹಂತದಲ್ಲಿವೆ. 

   ಇಕ್ಕಟ್ಟಾದ ಕಟ್ಟಡದಲ್ಲಿ ಇಲಾಖೆಯ ಆಯುಧಗಳಿಗೆ ಭದ್ರತೆಯಿಲ್ಲ. ಆರೋಪಿಗಳ ವಿಚಾರಣೆಗೆ ಮುಕ್ತ ಕೊಠಡಿಯಿಲ್ಲ, ಸಮಸ್ಯೆ ಹೇಳಿಕೊಳ್ಳಲು ಬಂದ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಸ್ಥಳಾವಕಾಶವಿಲ್ಲದೇ ಹೊರಗೆ ನಿಲ್ಲುವಂತಾಗಿದೆ. ಆಯಕಟ್ಟಿನ ಸ್ಥಳದಲ್ಲೇ ಇಲಾಖೆಯ ಎಲ್ಲ ಕಾರ್ಯಗಳನ್ನು ನಿಭಾಯಿಸಬೇಕು. 

  ಪಟ್ಟಣದ ಹೃದಯ ಭಾಗದಲ್ಲಿರುವುದರಿಂದ ಸಾವಿರಾರು ಜನ ತಮ್ಮ ಕೆಲಸ ಕಾರ್ಯಗಳಿಗಾಗಿ ಪುರಸಭೆ ಬರುತ್ತಿದ್ದು, ಪಕ್ಕದಲ್ಲೇ ಪೊಲೀಸ್ ಠಾಣೆ ಇರುವುದರಿಂದ ತಾವು ಬಂದಿದ್ದು, ಪುರಸಭೆಗೋ ಅಥವಾ ಪೊಲೀಸ್ ಠಾಣೆಗೋ ಎಂದು ಗೊಂದಲಕ್ಕೀಡಾಗುತ್ತಿದ್ದಾರೆ. ಹೀಗಾಗಿ ಮಹಿಳೆಯರು ಇಲ್ಲಿಗೆ ಬರಲು ಹಿಂಜರಿಯುತ್ತಿದ್ದಾರೆ. 

(ಹಾರೂಗೇರಿ ಪೊಲೀಸ್ ಠಾಣೆಗೆ ನೂತನ ಕಟ್ಟಡ ನಿರ್ಮಾಣದ ಬಗ್ಗೆ ಗೃಹ ಇಲಾಖೆ ಗಮನಕ್ಕೆ ತಂದು, ಬರುವ ಬಜೆಟ್‌ನಲ್ಲಿ ಅನುದಾನ ಮಂಜೂರು ಮಾಡಿಸಲಾಗುತ್ತದೆ. ಶೀಘ್ರದಲ್ಲೇ ನೂತನ ಕಟ್ಟಡ ನಿರ್ಮಾಣವಾಗಲಿದೆ. - ಸತೀಶ ಜಾರಕೊಹೊಳಿ, ಸಚಿವರು, ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು. 

( ಹಾರೂಗೇರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಬಂದರೂ ಇಲ್ಲಿ ಕುಳಿತು ಕೊಳ್ಳಲು ಜಾಗವಿಲ್ಲದ ಸ್ಥಿತಿಯಿದೆ. ಪುರಸಭೆ ಆವರಣವನ್ನೆಲ್ಲಾ ಪೊಲೀಸ್ ಠಾಣೆ ಅತಿಕ್ರಮಣ ಮಾಡಿಕೊಂಡಿದ್ದು, ಪುರಸಭೆಗೆ ಬರುವ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ. ಸರ್ಕಾರ ಪೊಲೀಸ್ ಠಾಣೆಯನ್ನು ತುರ್ತು ಸ್ಥಳಾಂತರಿಸಬೇಕು.- ಯಲ್ಲಪ್ಪ ಶಿಂಗೆ, ಕಾಂಗ್ರೆಸ್ ಮುಖಂಡ)