ಹೆಚ್‌.ಡಿ.ಪಿ. ಶಾಲಾ ವಿದ್ಯಾರ್ಥಿಗಳಿಂದ ಆಸರೆ ವೃದ್ಧಾಶ್ರಮದ ಹಿರಿಯರಿಗೆ ಸಿಹಿ ಹಂಚಿ ಆತ್ಮೀಯತೆ

ಹೆಚ್‌.ಡಿ.ಪಿ. ಶಾಲಾ ವಿದ್ಯಾರ್ಥಿಗಳಿಂದ ಆಸರೆ ವೃದ್ಧಾಶ್ರಮದ ಹಿರಿಯರಿಗೆ ಸಿಹಿ ಹಂಚಿ ಆತ್ಮೀಯತೆ  H.D.P. School students share sweets and warmth with the elderly at Asare Old Age Home

ಹುಕ್ಕೇರಿ 20 : ಹಿಡಕಲ್ ಡ್ಯಾಂನ ಸಿ.ಇ.ಎಸ್‌. ವಿದ್ಯಾವರ್ಧಕ ಸಂಘದ ಹೆಚ್‌.ಡಿ.ಪಿ. ಶಾಲೆಯ ವಿದ್ಯಾರ್ಥಿಗಳು ಮಹಿಳಾ ಕಲ್ಯಾಣ ಸಂಸ್ಥೆಯ ಆಸರೆ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಹಿರಿಯ ನಾಗರಿಕರೊಂದಿಗೆ ಆತ್ಮೀಯವಾಗಿ ಸಮಯ ಕಳೆದು, ಸಿಹಿ ಹಂಚುವ ಮೂಲಕ ಸಾಮಾಜಿಕ ಕಳಕಳಿ ಮೆರೆದರು. ವಿದ್ಯಾರ್ಥಿಗಳು ಹಿರಿಯರ ಆರೋಗ್ಯ ಹಾಗೂ ಯೋಗಕ್ಷೇಮ ವಿಚಾರಿಸಿ, ಅವರ ಜೀವನಾನುಭವ, ನೆನಪುಗಳು ಮತ್ತು ಬದುಕಿನ ಕಥೆಗಳನ್ನು ಆಲಿಸಿದರು.

ಬಳಿಕ ಹಿರಿಯ ನಾಗರಿಕರಿಗೆ ಸಿಹಿ ಹಂಚಿ ಸಂತಸದ ಕ್ಷಣಗಳನ್ನು ಕಳೆಯುವ ಮೂಲಕ ವೃದ್ಧಾಶ್ರಮದಲ್ಲಿ ಸಂಭ್ರಮದ ವಾತಾವರಣ ನಿರ್ಮಿಸಿದರು. ಈ ಸಂದರ್ಭದಲ್ಲಿ ಶಿಕ್ಷಕ ಜಗನ್ನಾಥ್ ಎಸ್‌. ಕರೆನ್ನವರ್ ಮಾತನಾಡಿ, “ಪಠ್ಯ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ, ಮಾನವೀಯ ಮೌಲ್ಯಗಳು ಹಾಗೂ ಹಿರಿಯರನ್ನು ಗೌರವಿಸುವ ಸಂಸ್ಕಾರ ಬೆಳೆಸುವುದು ಅಗತ್ಯ. ವೃದ್ಧಾಶ್ರಮಗಳಿಗೆ ಭೇಟಿ ನೀಡುವುದರಿಂದ ಹಿರಿಯರ ಜೀವನಾನುಭವ ತಿಳಿದುಕೊಳ್ಳುವುದರ ಜೊತೆಗೆ ಸಮಾಜದ ಬಗ್ಗೆ ಸಂವೇದನಾಶೀಲತೆ ಬೆಳೆಸಿಕೊಳ್ಳಲು ಸಾಧ್ಯ” ಎಂದರು.

ಶಿಕ್ಷಕ ಏಕನಾಥ್ ಪಿ. ಮಾಸ್ತಿ ಉಪಸ್ಥಿತರಿದ್ದರು. ಮಹಿಳಾ ಕಲ್ಯಾಣ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗೆ ಆಸರೆ ವೃದ್ಧಾಶ್ರಮದ ಉದ್ದೇಶ ಹಾಗೂ ಹಿರಿಯ ನಾಗರಿಕರ ಆರೈಕೆಯ ಮಹತ್ವದ ಕುರಿತು ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಶಕ್ತಿ ಸದನ ಮಹಿಳಾ ಪುನರ್ವಸತಿ ಕೇಂದ್ರದ ಸಲಹೆಗಾರರಾದ ಕುಮಾರಿ ಪೂಜಾ, ಕುಮಾರಿ ಹೇಮಲತಾ, ಮಂದಾಕಿನಿ ಹಟ್ಟಿ, ಹೆಚ್‌.ಡಿ.ಪಿ. ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ವೃದ್ಧಾಶ್ರಮದ ಹಿರಿಯ ನಾಗರಿಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.