ಗ್ರಾಮ ಪಂಚಾಯತಿ ಅಭಿವೃದ್ಧಿ : ಸತ್ಯಾಗ್ರಹಕ್ಕೆ ಅನುಮತಿ ನೀಡಲು ಜಿಲ್ಲಾಧಿಕಾರಿಗೆ ಮನವಿ

ಗ್ರಾಮ ಪಂಚಾಯತಿ ಅಭಿವೃದ್ಧಿ : ಸತ್ಯಾಗ್ರಹಕ್ಕೆ ಅನುಮತಿ ನೀಡಲು ಜಿಲ್ಲಾಧಿಕಾರಿಗೆ ಮನವಿ  Gram Panchayat Development: Request to the District Collector to grant permission for Satyagraha

ತಾಳಿಕೋಟೆ 25 : ತಾಲ್ಲೂಕಿನ ಕಲಕೇರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಕುರಿತಂತೆ ಮಾಡಲಾಗಿದ್ದ ಹಲವಾರು ಮನವಿಗಳಿಗೆ ಕಾಲಮಿತಿಯಲ್ಲಿ ಕ್ರಮ ಜರುಗಿಸಿಲ್ಲವೆಂದು ಆರೋಪಿಸಿ ಕ್ರಮ ಜರುಗಿಸದ ಅಧಿಕಾರಿಗಳನ್ನು ಅಮಾನತ್ತುಗೊಳಿಸುವವರೆಗೆ ಜೂ.29 ರಿಂದ ನಡೆಸಲಿರುವ ಧರಣಿ ಸತ್ಯಾಗ್ರಹಕ್ಕೆ ಅನುಮತಿ ನೀಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ ಬಣ) ವಲಯ ಶಾಖೆ ಕಲಕೇರಿಯವರು ಅಪರ ಜಿಲ್ಲಾಧಿಕಾರಿಯವರಿಗೆ, ಡಿವೈಎಸ್ಪಿ ಬಸವನ ಬಾಗೇವಾಡಿ, ತಾಳಿಕೋಟೆಯ ತಹಶೀಲ್ದಾರ ತಾ.ಪಂ.ಇಓ ಹಾಗೂ ಪಿಎಸೈ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.  

ಕಲಕೇರಿ ಗ್ರಾಮ ಪಂಚಾಯತಿಗೆ ವಿವಿಧ ಯೋಜನೆಯಡಿ ಬಂದ 752 ಮನೆಗಳನ್ನು ವಿಲೇವಾರಿ ಮಾಡಲು ತುರ್ತಾಗಿ ಮರು ಗ್ರಾಮ ಸಭೆ ಮಾಡಿ ಪಾರದರ್ಶಕವಾಗಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ಆದೇಶಿಸಿದ್ದರೂ ಕ್ರಮ ಜರುಗಿಸುತ್ತಿಲ್ಲ. ಕಲಕೇರಿ ಗ್ರಾಮದ ಸರ್ವೇ ನಂಬರ್ 01ನ್ನು ಅಳತೆ ಮಾಡುವಂತೆ ಮನವಿ ಸಲ್ಲಿಸಿ ಆರು ತಿಂಗಳೂ ಕಳೆದರೂ ಅಳತೆ ಮಾಡಿಸಿಲ್ಲ. ಗ್ರಾಮದ ಬಸ್ ನಿಲ್ದಾಣದ ಎದುರು ನಿರ್ಮಿಸಿದ ಮಳಿಗೆಗಳನ್ನು ಠರಾವು ಒಂದನ್ನೇ ಆಧಾರವಾಗಿಟ್ಟುಕೊಂಡು ವ್ಯಾಪಾರ ಮಾಡಲು ಅನುಮತಿ ಪಡೆಯದೇ ಪಂಚಾಯತಿಯೊಂದಿಗೆ ಪರಸ್ಪರ ಒಡಂಬಡಿಕೆ ಮಾಡಿಕೊಳ್ಳದೇ ಮಳಿಗೆಗಗಳನ್ನು ಆಕ್ರಮಿಸಿರುವ ವ್ಯಾಪಾರಸ್ಥರ ಮೇಲೆ ಕಾನುನು ಕ್ರಮ ಜರುಗಿಸಬೇಕು.

ಹಾಗೂ ಎಲ್ಲ ಮಳಿಗೆಗಳನ್ನು ಬೀಗ ಹಾಕಿಸಿ ಬೀಗ ತೆಗೆಯದಂತೆ ಕ್ರಮ ಜರುಗಿಸಬೇಕು ಇವೇ ಮೊದಲಾದ ಬೇಡಿಕೆಗಳನ್ನು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಮನವಿಯಲ್ಲಿನ ಅಂಶಗಳಿಗೆ ಸೂಕ್ತ ಪರಿಹಾರ ದೊರೆಯುವವರೆಗೂ ಜೂ.29 ರಿಂದ ಧರಣಿ ಸತ್ಯಾಗ್ರಹ ನಡೆಯುವುದು ಎಂದು ದಲಿತ ಸಂಘರ್ಷ ಸಮಿತಿ ಕಲಕೇರಿ ವಲಯ ಶಾಖೆ ಅಧ್ಯಕ್ಷ ಹಣಮಂತ ಈ ವಡ್ಡರ,, ಸೋಮಶೇಖರ ಬಡಿಗೇರ, ಯಮನೂರಿ ಸಿಂದಗಿರಿ, ಮಲ್ಲಪ್ಪ ನಡುವಿನಕೇರಿ, ಮೈಬೂಬಪಾಶಾ ಮನಗೂಳಿ, ಸಂಜೀವ ಉತಾಳೆ, ದೇವೀಂದ್ರ ವಡ್ಡರ, ಸಲೀಂ ಬಡೆಮಗೋಳ, ಪ್ರಕಾಶ ದೊಡ್ಡಮನಿ, ಅರುಣ ಪೂಜಾರಿ ಸದ್ದಾಂ ತುಂಬಗಿ, ಸಮೀರ ಬಿಸನಾಳ, ಬಾಕರಸಾಬ ಇನಾಮದಾರ ಸೇರಿದಂತೆ ಹಲವರು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.