ಉತ್ತಮ ಅಧ್ಯಯನದಿಂದ ಆದರ್ಶ ವ್ಯಕ್ತಿಗಳಾಗಲು ಸಾಧ್ಯ - ಡಾ. ಗುರುಪಾದಯ್ಯ ಸಾಲಿಮಠ

ಉತ್ತಮ ಅಧ್ಯಯನದಿಂದ ಆದರ್ಶ ವ್ಯಕ್ತಿಗಳಾಗಲು ಸಾಧ್ಯ - ಡಾ. ಗುರುಪಾದಯ್ಯ ಸಾಲಿಮಠ Good studies can make you an ideal person - Dr. Gurupadaiah Salimath

ಲೋಕದರ್ಶನ ವರದಿ

ಹಾವೇರಿ, 25: ವಿದ್ಯಾರ್ಥಿಗಳಾದವರು ಕಠಿಣ ಪರಿಶ್ರಮ ಮತ್ತು ಉತ್ತಮ ಅಧ್ಯಯನದಿಂದ ಸಾಗಿದರೆ ಭವಿಷ್ಯದಲ್ಲಿ ಆದರ್ಶ ವ್ಯಕ್ತಿಗಳಾಗಲು ಸಾಧ್ಯವೆಂದು ವಾಣಿಜ್ಯ ವಿಭಾಗದ ಅಧ್ಯಾಪಕ-ಸಾಹಿತಿ ಡಾ. ಗುರುಪಾದಯ್ಯ ಸಾಲಿಮಠ ಅಭಿಪ್ರಾಯಪಟ್ಟರು.  ಅವರು ನಗರದ ಪ್ರತಿಷ್ಠಿತ ಕೆ ಎಲ್ ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 2026-27 ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಪಿಯು ವಿದ್ಯಾರ್ಥಿಗಳ "ಕಾಲೇಜು ಪ್ರಾರಂಭೋತ್ಸವ" ಹಾಗೂ ಗಣೇಶ ಮತ್ತು ಸರಸ್ವತಿ ವಿದ್ಯಾ ಮಾತೆಯ ಪೂಜಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.  

ವಿದ್ಯಾರ್ಥಿಗಳ ಮನಸ್ಸು ಸದಾ ಚಂಚಲ ಮತ್ತು ಚಲನಶೀಲವಾದದ್ದು ಕ್ಷಣ ಕ್ಷಣಕ್ಕೂ ಕಾಲನ ಊಹೆಗೂ ನಿಲುಕದ ಚಿಟ್ಟೆಯಂತೆ ಕೈಗೆ ಎಟುಕದೆ ಹಾರಾಡುತ್ತಿರುತ್ತದೆ. ಆದರೆ ಚಲನಶೀಲ ಮನಸ್ಸನ್ನು ಸಂಸ್ಕಾಯುಕ್ತವಾಗಿ ಅಧ್ಯಯನದತ್ತ ಕೇಂದ್ರೀಕರಿಸಿದರೆ ಉತ್ತಮ-ಉದಾತ್ತ ಚಿಂತನಶೀಲತೆಗಳಿಗೆ ಹಾದಿಮಾಡಿಕೊಟ್ಟಂತಾಗುತ್ತದೆ. ಗೆಲುವು ಒಮ್ಮಿಂದಲೇ ಒಲಿಯುವುದಿಲ್ಲ. ಅದಕ್ಕಾಗಿ ನಿರಂತರ ಅಧ್ಯಯನದ ಜೊತೆಗೆ ಸ್ವಅಧ್ಯಾಯನ ರೂಢಿಸಿಕೊಂಡು ಹೊಸ ಆಲೋಚನೆ ಹೊಸದೊಂದು ಸೃಷ್ಟಿಯ ಆವಿಷ್ಕಾರದಡೆಗೆ ಹೆಜ್ಜೆ ಹಾಕಬೇಕಿದೆ. ನೈತಿಕ ಶಿಕ್ಷಣ ಇಂದಿನ ಅಗತ್ಯವಾಗಿದೆ. ಇದದೊಂದಿಗೆ ಬೆರೆತು ಮೌಲ್ಯಯುತ ಬದುಕನ್ನು ಕಟ್ಟಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.  

ಅಧ್ಯಕ್ಷತೆ ವಹಿಸಿದ್ದ ಪದವಿಪೂರ್ವ ಪ್ರಾಚಾರ್ಯ ಡಾ. ಜೆ. ಆರ್‌. ಶಿಂಧೆ ಮಾತನಾಡಿ ವಿದ್ಯಾರ್ಥಿಗಳಾದವರು ಸದ್ಭಾವನೆ ಸದ್ವರ್ತನೆಗಳಿಂದ ಉತ್ತಮ ಆಚಾರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ನೆರೆಯವರೊಂದಿಗೆ ಉತ್ತಮ ಬಾಂಧವ್ಯದ ಜೊತೆಗೆ ವ್ಯಕ್ತಿಯಲ್ಲಿರುವ ನೈಜ ಸಾಮರ್ಥ್ಯ ವಿಕಸಿತಗೊಳಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಂಡು ಕಲಿಸಿದ ಸಂಸ್ಥೆಗೆ ಕೀರ್ತಿ ತರಬೇಕೆಂದರು.  

ಡಾ. ಎಂ. ವಿ. ಸಾತೇನಹಳ್ಳಿ, ಪ್ರೊ. ಆರ್‌. ಎಸ್‌. ರಾಯ್ಕರ್, ಪ್ರೊ. ಬಸವರಾಜೇಶ್ವರಿ ಜಿ. ಕೆ. ಮಾತನಾಡಿದರು. ಕುಮಾರಿ ಪದ್ಮ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರೊ. ಎಮ್‌. ಎಸ್‌. ಬೆಂಡಿಗೇರಿ ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ಸಿದ್ದೇಶ್ವರ ಹುಣಸಿಕಟ್ಟಿಮಠ ಸ್ವಾಗತಿಸಿ-ಪರಿಚಯಿಸಿದರು. ಪ್ರೊ. ಅಕ್ಷತಾ ಹಿರೇಮಠ ನಿರೂಪಿಸಿದರು. ಪ್ರೊ. ಅನಿತಾ ಉಗರಗೋಳ ವಂದಿಸಿದರು. ಪ್ರೊ. ನಾಗರಾಜ ಮುಚ್ಚಟ್ಟಿ, ಡಾ. ಶಿವರಾಜ ಮಂಟೂರ, ಪ್ರೊ. ಆವಿಷ್ಕ ರಶ್ಮಿ ಸವಣೂರ, ಪ್ರೊ. ಜಿಲಾನಿ ದೊಡ್ಮನಿ, ಪ್ರೊ. ಬಸವರಾಜ್ ಹೊಂಗಲ್, ಪ್ರೊ. ಪ್ರಶಾಂತ ಕೋರಿಶೆಟ್ಟರ, ಪ್ರೊ. ಪ್ರವೀಣ್ ಚೂರಿ, ಪೊ.್ರ ಶಿವಮೂರ್ತಿ ಹಿರೇಮಠ, ಪ್ರೊ. ಸ್ನೇಹಾ ಹಿರೇಮಠ, ಪ್ರೊ. ಅಕ್ಕಮ್ಮ ಅಮಾತಿ, ಪ್ರೊ. ಸುಮಾ ನಂದಿಕೊಪ್ಪ ಸೇರಿದಂತೆ ವಿದ್ಯಾರ್ಥಿಗಳು-ಪಾಲಕರು, ಬೋಧಕ ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.