ನಾಗರಿಕ ಸ್ನೇಹಿ ಆಡಳಿತಕ್ಕೆ ಆದ್ಯತೆ ನೀಡಿ: -ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ ವಿ

ನಾಗರಿಕ ಸ್ನೇಹಿ ಆಡಳಿತಕ್ಕೆ ಆದ್ಯತೆ ನೀಡಿ: -ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ ವಿ Give priority to citizen-friendly administration: -District In-charge Secretary Dr. Ram Prasat Manoh

ಲೋಕದರ್ಶನ ವರದಿ 

ಧಾರವಾಡ 11: ಸಾರ್ವಜನಿಕರಿಗೆ ವಿವಿಧ ಇಲಾಖೆಗಳಲ್ಲಿರುವ ಯೋಜನೆಯ ಬಗ್ಗೆ ಮಾಹಿತಿ ಒದಗಿಸಬೇಕು. ಆ ಮೂಲಕ ನಾಗರಿಕಸ್ನೇಹಿ ಆಡಳಿತಕ್ಕೆ ಅಧಿಕಾರಿಗಳು ಆದ್ಯತೆ ನೀಡಬೇಕೆಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ ವಿ. ಅವರು ಹೇಳಿದರು.  ಅವರು ಇಂದು ಬೆಳಿಗ್ಗೆ (ಜೂ.11) ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ 2026 ನೇ ಸಾಲಿನ ಮುಂಗಾರು ಪರಿಸ್ಥಿತಿಯನ್ನು ಎದುರಿಸಲು ಧಾರವಾಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಕೈಗೊಳ್ಳಬೇಕಾದ ಪೂರ್ವ ಸಿದ್ಧತೆಯ ಕ್ರಮಗಳ ಕುರಿತು ಸಭೆ ಜರುಗಿಸಿ, ಮಾತನಾಡಿದರು.  

ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆಯಲ್ಲಿ ಯಾವುದೇ ರೀತಿ ಕೊರತೆ ಆಗದಂತೆ ಅಧಿಕಾರಿಗಳು ಕ್ರಮಕೈಗೊಳ್ಳಲು ತಿಳಿಸಿದರು. ಎಲ್ಲ ರೈತರಿಗೆ ಕಡ್ಡಾಯವಾಗಿ ಫ್ರೂಟ್ಸ್‌ ಐಡಿ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಹಾಗೂ ಯಾವುದೇ ರೈತರು ಫ್ರೋಟ್ಸ್‌ ಐಡಿ ನೋಂದಣಿ ಪ್ರಕ್ರಿಯೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು.

ಅಲ್ಲದೇ ರೈತರ ಪರಿಹಾರ ವಿತರಣೆಯಲ್ಲಿ ವಿಳಂಬವಾಗದಂತೆ ಕ್ರಮವಹಿಸಬೇಕು. ಫ್ರೂಟ್ಸ್‌ ಐಡಿ ನೋಂದಣಿ ಕುರಿತು ರೈತರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಗಳು ಕಂಡುಬಂದಲ್ಲಿ ಪರಿಹರಿಸಲು ಸೂಕ್ತ ಕ್ರಮಕೈಗೊಳ್ಳಬೇಕು. ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ಹೊಲಗಳಿಗೆ ರಸ್ತೆ ನಿರ್ಮಾಣ ಮಾಡಬೇಕು. ಗ್ರಾಮೀಣ ಭಾಗದ ರಸ್ತೆ, ಸೇತುವೆ ಗುಣಮಟ್ಟವಾಗಿರುವ ಬಗ್ಗೆ ಗಮನಹರಿಸಿ. ಹಳೆಯ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಿ ಎಂದು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.   

ಜಿಲ್ಲೆಯಲ್ಲಿ 56,593 ಇ-ಪೌತಿ ಖಾತೆಗಳಿವೆ. ಅದರಲ್ಲಿ 12,519 ಬಾಕಿ ಇ-ಪೌತಿ ಖಾತೆಗಳಿವೆ. ಅವುಗಳನ್ನು ಪೂರ್ಣಗೊಳಿಸಲು ಕ್ರಮವಹಿಸಲಾಗಿದೆ. ಈ ಕುರಿತು ಹೆಚ್ಚಿನ ಗಮನಹರಿಸಬೇಕು. ಮರಣ ಹೊಂದಿದವರ ಕುರಿತು ಮಾಹಿತಿ ಪಡೆದುಕೊಂಡು, ಖಾತೆಗಳ ಬದಲಾವಣೆಗೆ ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.  ಜಿಲ್ಲೆಯಲ್ಲಿರುವ ಕೆರೆಗಳ ಸ್ವಚ್ಛತೆಗೆ ಮುಂದಾಗಬೇಕು.

ಉದ್ಯಾನವನದ ಅಭಿವೃದ್ಧಿಗೆ ಒತ್ತು ನೀಡಬೇಕಿದೆ. ಆರೋಗ್ಯ, ಕೃಷಿ, ತೋಟಗಾರಿಕೆ, ನಗರಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ನಿರುದ್ಯೋಗ ಸಮಸ್ಯೆಗೆ ಉದ್ಯೋಗ ಅವಕಾಶಗಳನ್ನು ಸೃಷ್ಠಿ ಮಾಡಿಕೊಳ್ಳುವ ಮೂಲಕ ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಬೇಕು. ಕಸ ವಿಲೇವಾರಿ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.  

ಧಾರವಾಡ ಜಿಲ್ಲೆಯ 08 ತಾಲೂಕುಗಳ ಪೈಕಿ ಕಲಘಟಗಿ ಹಾಗೂ ಅಳ್ಳಾವರ ತಾಲ್ಲೂಕು ಮಲೆನಾಡು ಪ್ರದೇಶಗಳಾಗಿದ್ದು, ಧಾರವಾಡ ತಾಲೂಕಿನ ಭಾಗಶ: ಗ್ರಾಮಗಳು ಮಲೆನಾಡು ಹಾಗೂ ಬಯಲು ಸೀಮೆ ಪ್ರದೇಶಗಳಾಗಿವೆ. ಹುಬ್ಬಳ್ಳಿ, ನವಲಗುಂದ, ಕುಂದಗೋಳ ತಾಲೂಕುಗಳು ಬಯಲುಸೀಮೆ ಪ್ರದೇಶಗಳಾಗಿವೆ. 

ಕುಂದಗೋಳ, ಹುಬ್ಬಳ್ಳಿ. ನವಲಗುಂದ ಧಾರವಾಡ ತಾಲೂಕಿನ ಬೆಣ್ಣಿಹಳ್ಳ ಹಾಗೂ ತುಪ್ಪರಿಹಳ್ಳಗಳು ದೊಡ್ಡ ಪ್ರಮಾಣದ ಹಳ್ಳಗಳಾಗಿದ್ದು. ಸದರಿ ಹಳ್ಳಗಳು ಮಳೆಗಾಲದಲ್ಲಿ ಅಚ್ಚು-ಕಟ್ಟು ಪ್ರದೇಶಗಳಲ್ಲಿ (ಬೆಣ್ಣೆ ಹಳ್ಳ-ಹಾವೇರಿ ಜಿಲ್ಲೆ ಶಿಗ್ಗಾಂವ ತಾಲ್ಲೂಕಿನ ದೊಂಡಸಿ) ತುಪ್ಪರಿ ಹಳ್ಳ- ಬೆಳಗಾವಿ ಜಿಲ್ಲೆ ಕಿತ್ತೂರು) ಭಾರಿ ಮಳೆಯಿಂದಾಗಿ ಹಳ್ಳಗಳು ಉಕ್ಕಿ ಹರಿದು ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. 

ಧಾರವಾಡ ಜಿಲ್ಲೆಯ ಬೆಣ್ಣಿ ಹಳ್ಳ ಮತ್ತು ತುಪ್ಪರಿ ಹಳ್ಳಗಳಿಂದ ಪ್ರವಾಹಕ್ಕೆ ಒಳಗಾಗಬಹುದಾದ ಗ್ರಾಮಗಳ ವಿವರ: ಕುಂದಗೋಳ ತಾಲೂಕಿನ 10 ಗ್ರಾಮಪಂಚಾಯತಿಗಳಲ್ಲಿ 17 ಗ್ರಾಮಗಳು ಪ್ರವಾಹಕ್ಕೆ ಒಳಪಡುತ್ತವೆ. 37093 ಜನಸಂಖ್ಯೆ, 16238 ಜಾನುವಾರು, 30442 ಎಕರೆ ಕೃಷಿ ಜಮೀನು ಹೊಂದಿದ್ದು, 397 ಜನ, 25 ಜಾನುವಾರು, 3544 ಎಕರೆ ಕೃಷಿ ಜಮೀನು ಪ್ರವಾಹಕ್ಕೆ ಒಳಗಾಗಬಹುದು. ಮುನ್ನಚ್ಚರಿಕಾ ಕ್ರಮವಾಗಿ 18 ಕಾಳಜಿ ಕೇಂದ್ರ ಹಾಗೂ 1 ಗೋಶಾಲೆಯನ್ನು ಗುರುತಿಸಲಾಗಿದೆ.  

ಹುಬ್ಬಳ್ಳಿ ತಾಲೂಕಿನ 6 ಗ್ರಾಮಪಂಚಾಯತಿಗಳಲ್ಲಿ 7 ಗ್ರಾಮಗಳು ಪ್ರವಾಹಕ್ಕೆ ಒಳಪಡುತ್ತವೆ. 29038 ಜನಸಂಖ್ಯೆ, 7897 ಜಾನುವಾರು, 34188 ಎಕರೆ ಕೃಷಿ ಜಮೀನು ಹೊಂದಿದ್ದು, 2586 ಜನ, 275 ಜಾನುವಾರು, 17041 ಎಕರೆ ಕೃಷಿ ಜಮೀನು ಪ್ರವಾಹಕ್ಕೆ ಒಳಗಾಗಬಹುದು. ಮುನ್ನಚ್ಚರಿಕಾ ಕ್ರಮವಾಗಿ 14 ಕಾಳಜಿ ಕೇಂದ್ರ ಹಾಗೂ 1 ಗೋಶಾಲೆಯನ್ನು ಗುರುತಿಸಲಾಗಿದೆ.  ಅಣ್ಣಿಗೇರಿ ತಾಲೂಕಿನ 1 ಗ್ರಾಮಪಂಚಾಯತಿಯಲ್ಲಿ 1 ಗ್ರಾಮ ಪ್ರವಾಹಕ್ಕೆ ಒಳಪಡುತ್ತವೆ. 2372 ಜನಸಂಖ್ಯೆ, 384 ಜಾನುವಾರು, 1845 ಎಕರೆ ಕೃಷಿ ಜಮೀನು ಹೊಂದಿದ್ದು, 70 ಜನ, 45 ಜಾನುವಾರು, 243 ಎಕರೆ ಕೃಷಿ ಜಮೀನು ಪ್ರವಾಹಕ್ಕೆ ಒಳಗಾಗಬಹುದು. ಮುನ್ನಚ್ಚರಿಕಾ ಕ್ರಮವಾಗಿ 1 ಕಾಳಜಿ ಕೇಂದ್ರ ಹಾಗೂ 1 ಗೋಶಾಲೆಯನ್ನು ಗುರುತಿಸಲಾಗಿದೆ.  

ನವಲಗುಂದ ತಾಲೂಕಿನ 15 ಗ್ರಾಮಪಂಚಾಯತಿಗಳಲ್ಲಿ 26 ಗ್ರಾಮಗಳು ಪ್ರವಾಹಕ್ಕೆ ಒಳಪಡುತ್ತವೆ. 130770 ಜನಸಂಖ್ಯೆ, 51864 ಜಾನುವಾರು, 1272221 ಎಕರೆ ಕೃಷಿ ಜಮೀನು ಹೊಂದಿದ್ದು, 5136 ಜನ, 2738 ಜಾನುವಾರು, 59324 ಎಕರೆ ಕೃಷಿ ಜಮೀನು ಪ್ರವಾಹಕ್ಕೆ ಒಳಗಾಗಬಹುದು. ಮುನ್ನಚ್ಚರಿಕಾ ಕ್ರಮವಾಗಿ 30 ಕಾಳಜಿ ಕೇಂದ್ರ ಹಾಗೂ 2 ಗೋಶಾಲೆಯನ್ನು ಗುರುತಿಸಲಾಗಿದೆ.  

ಧಾರವಾಡ ತಾಲೂಕಿನ 3 ಗ್ರಾಮಪಂಚಾಯತಿಗಳಲ್ಲಿ 5 ಗ್ರಾಮಗಳು ಪ್ರವಾಹಕ್ಕೆ ಒಳಪಡುತ್ತವೆ. 26340 ಜನಸಂಖ್ಯೆ, 4056 ಜಾನುವಾರು, 14988 ಎಕರೆ ಕೃಷಿ ಜಮೀನು ಹೊಂದಿದ್ದು, 488 ಜನ, 105 ಜಾನುವಾರು, 5362 ಎಕರೆ ಕೃಷಿ ಜಮೀನು ಪ್ರವಾಹಕ್ಕೆ ಒಳಗಾಗಬಹುದು. ಮುನ್ನಚ್ಚರಿಕಾ ಕ್ರಮವಾಗಿ 8 ಕಾಳಜಿ ಕೇಂದ್ರ ಹಾಗೂ 1 ಗೋಶಾಲೆಯನ್ನು ಗುರುತಿಸಲಾಗಿದೆ.  

ಧಾರವಾಡ ಜಿಲ್ಲೆಯ ಬೆಣ್ಣಿ ಹಳ್ಳ ಮತ್ತು ತುಪ್ಪರಿ ಹಳ್ಳಗಳಿಂದ ಒಟ್ಟಾರೆಯಾಗಿ 35 ಗ್ರಾಮ ಪಂಚಾಯತ್‌ಗಳ 56 ಗ್ರಾಮಗಳು ಪ್ರವಾಹಕ್ಕೆ ಒಳಡುತ್ತಿದ್ದು, 225613 ಜನಸಂಖ್ಯೆ, 80439 ಜಾನುವಾರುಗಳು, 208684 ಎಕರೆ ಕೃಷಿ ಜಮೀನು ಹೊಂದಿದ್ದು, 8677 ಜನಸಂಖ್ಯೆ, 3188 ಜಾನುವಾರುಗಳು, 85514 ಎಕರೆ ಕೃಷಿ ಜಮೀನು ಪ್ರವಾಹಕ್ಕೆ ಒಳಗಾಗಬಹುದು. ಮುನ್ನಚ್ಚರಿಕಾ ಕ್ರಮವಾಗಿ ಒಟ್ಟು 71 ಕಾಳಜಿ ಕೇಂದ್ರ ಹಾಗೂ 6 ಗೋಶಾಲೆಯನ್ನು ಗುರುತಿಸಲಾಗಿದೆ.  

ತುರ್ತು ವಿಭಾಗದಲ್ಲಿ ಲಭ್ಯವಿರುವ ಸಲಕರಣೆಗಳು: ಲಿಫೆಬುವ್ಯ್‌-60, ಲೈಫ್ ಜಾಕೆಟ್‌-50, ಪೆಟ್ರೋಲ್ ಡ್ರೈವರ್ ಚೈನ್ ಸಾ-8, ನೈಲಾನ್ ರೋಪ್‌-8,ಎಲ್‌ಇಡಿ ಬೇಸ್ ಹ್ಯಾಂಡ್ ಸರ್ಚ್‌ ಲೈಟ್‌-8, ಬೋಲ್ಟ್‌ ಕಟರ್‌-6, ರೈನ್ ಕೋಟ್‌-153, ಬ್ಯಾಟರಿ ಆಪರೇಟರ್ ಲೈಟ್‌-1, ಇಂಪ್ಲಾಟೇಬಲ್ ಬೋಟ್ಸ್‌-4. ಓಬಿಎಮ್ ಮೋಟರ್ಸ್‌-4, ಪೋರ್ಟಬಲ್ ಪಂಪ್‌-8, ಆಸ್ಕ್‌್ಸ ಲೈಟ್‌-8 ಗಳು ಅಗ್ನಿಶಾಮಕ ಹಾಗೂ ತುರ್ತು ವಿಭಾಗದಲ್ಲಿ ಲಭ್ಯವಿರುತ್ತವೆ.  ಮೇವು ದಾಸ್ತಾನು: ಧಾರವಾಡ ಜಿಲ್ಲೆಯಲ್ಲಿ 2,33,464 ದನ ಮತ್ತು ಎಮ್ಮೆಗಳಿದ್ದು, 1,53,938 ಕುರಿ ಮತ್ತು ಮೇಕೆಗಳಿವೆ. ಧಾರವಾಡ ಜಿಲ್ಲೆಯಲ್ಲಿ ಪ್ರಸ್ತುತ ವಾರ 4,75,454.81 ಟನ್ ಮೇವು ಲಭ್ಯವಿದ್ದು, ಅದು ಮುಂದಿನ 45 ವಾರಗಳಿಗೆ ಆಗುವಷ್ಟು ಮೇವು ದಾಸ್ತಾನು ಲಭ್ಯವಿದೆ ಎಂದು ಅವರು ತಿಳಿಸಿದರು.  

22 ಗ್ರಾಮ 27 ಖಾಸಗಿ ಕೊಳವೆಬಾವಿ: ಜಿಲ್ಲೆಯಲ್ಲಿ ಇಲ್ಲಿಯವರಗೆ ಧಾರವಾಡ, ಹುಬ್ಬಳ್ಳಿ ಮತ್ತು ಕಲಘಟಗಿ ತಾಲೂಕಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಧಾರವಾಡ ತಾಲೂಕಿನ ಹೊಸಟ್ಟಿ, ಮಂಡಿಹಾಳ, ಬೇಲೂರ, ಮುಗದ, ಮನಗುಂಡಿ, ಲೋಕೂರು, ನಿಗದಿ, ಬೊಗೂರು, ವೆಂಕಟಾಪೂರ, ಹೊಸ್ವಾಳ ಮತ್ತು ಹುಬ್ಬಳ್ಳಿ ತಾಲೂಕಿನ ನೂಲ್ವಿ, ಅದರಗುಂಚಿ, ಕುರ್ಡಿಕೆರೆ, ಛಬ್ಬಿ ಹಾಗೂ ಕಲಘಟಗಿ ತಾಲೂಕಿನ ನೆಲ್ಲಹರವಿ ತಾಂಡ, ಬಿ.ಹುಲಿಕಟ್ಟಿ, ದ್ಯಾಮನಕೊಂಡ, ಮುಕ್ಕಲ, ಹಿರೇ ಹುನಸಿಕಟ್ಟಿ, ಜುಂಜನಬೈಲ್, ಶಿಂಗನಹಳ್ಳಿ, ಬಮ್ಮಿಗಟ್ಟಿ, ಕಂದಲಿ ಗ್ರಾಮಗಳು ಸೇರಿದಂತೆ ಒಟ್ಟು 22 ಗ್ರಾಮಗಳಿಗೆ ಪ್ರಸ್ತುತ ಖಾಸಗಿ ಕೊಳವೆ ಬಾವಿ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.  

ನಗರ ಸ್ಥಳೀಯ ಸಂಸ್ಥೆಗಳು: ಧಾರವಾಡ ಜಿಲ್ಲೆಯ 05 ಸ್ಥಳೀಯ ನಗರ ಸಂಸ್ಥೆಗಳಲ್ಲಿ 100 ವಾರ್ಡ್‌ಗಳಿದ್ದು, ಯಾವುದೇ ವಾರ್ಡ್‌ಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿಲ್ಲ. 80 ವಾರ್ಡ್‌ಗಳಲ್ಲಿ ಪ್ರತಿ ದಿನ ನೀರು ಪೊರೈಕೆ ಮಾಡಲಾಗುತ್ತಿದ್ದು, ಉಳಿದ 20 ವಾರ್ಡ್‌ಗಳಲ್ಲಿ 2 ರಿಂದ 3 ದಿನಗಳವರೆಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಮತ್ತು 05 ಸ್ಥಳೀಯ ನಗರ ಸಂಸ್ಥೆಗಳಲ್ಲಿನ ಕೆರೆಗಳಲ್ಲಿ ಕುಡಿಯುವ ನೀರಿನ ಶೇಖರಣೆ ಸಾಕಷ್ಟು ಇರುವುದರಿಂದ ಪ್ರಸ್ತುತ ಬೇಸಿಗೆ ಅವಧಿಯಲ್ಲಿ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಅಂದಾಜಿಸಲಾಗಿದೆ ಎಂದರು.  

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ: ಹುಬ್ಬಳ್ಳಿ-ಧಾರವಾಡ ಮಹಾನಗರದ ವ್ಯಾಪ್ತಿಯಲ್ಲಿ 82 ವಾರ್ಡ್‌ಗಳಿದ್ದು, ಅದರಲ್ಲಿ 13 ವಾರ್ಡ್‌ಗಳಲ್ಲಿ 24ಘಿ7 ನೀರು ಪೊರೈಕೆ ಮಾಡಲಾಗುತ್ತಿದೆ. ಉಳಿದ ವಾರ್ಡ್‌ಗಳಲ್ಲಿ 2 ರಿಂದ 7 ದಿನಗಳವರೆಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.  

ಸಭೆಯಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್‌., ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಪ್ರೊಬೇಶನರಿ ಐಎಎಸ್ ಅಧಿಕಾರಿ ಅನುಪ್ರಿಯಾ ಸಾಕ್ಯಾ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ. ರುದ್ರೇಶ ಘಾಳಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕೆ.ಸಿ.ಭದ್ರಣ್ಣವರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.