ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಗೆ ಹೆಚ್ಚಿ ಮಹತ್ವ ನೀಡಿ:
Give greater importance to sports alongside education for students:
ಲೋಕದರ್ಶನ ವರದಿ
ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಗೆ ಹೆಚ್ಚಿ ಮಹತ್ವ ನೀಡಿ:
ಹಾವೇರಿ 12: ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಗೂ ಹೆಚ್ಚಿನ ಮಹತ್ವ ನೀಡಬೇಕು. ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ದೈಹಿಕ ಹಾಗೂ ಮಾನಸಿಕ ಸದೃಢತೆ ಬೆಳೆಯುವುದರ ಜೊತೆಗೆ ಶಿಸ್ತು, ಆತ್ಮವಿಶ್ವಾಸ ಹಾಗೂ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪುನೀತ್ ಬಿ.ಆರ್ ಹೇಳಿದರು.
ಶನಿವಾರ ತಾಲೂಕಿನ ಸರಕಾರಿ ಪ್ರೌಢಶಾಲೆ ಹಳೇರಿತ್ತಿಯಲ್ಲಿ ಜಿಲ್ಲಾ ಮಟ್ಟದ 14 ಮತ್ತು 17 ವರ್ಷ ವಯೋಮಿತಿಯೊಳಗಿನ ಬಾಲಕ-ಬಾಲಕಿಯರ ಟೇಬಲ್ ಟೆನ್ನಿಸ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಳೇರಿತ್ತಿ ಶಾಲೆಯ ವಿದ್ಯಾರ್ಥಿಗಳು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಮಾತ್ರವಲ್ಲದೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿಯೂ ಭಾಗವಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಜಿಲ್ಲೆಯಲ್ಲಿ ಅನೇಕ ಶಾಲೆಗಳಿದ್ದರೂ ಹಳೇರಿತ್ತಿ ಶಾಲೆಯ ವಿದ್ಯಾರ್ಥಿಗಳ ಕ್ರೀಡಾ ಸಾಧನೆ ನಮ್ಮ ಗಮನ ಸೆಳೆದಿದೆ ಎಂದು ಪುನೀತ್ ಬಿ.ಆರ್. ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಬಳಕೆಗೆ ಹೆಚ್ಚಿನ ಸಮಯ ಮೀಸಲಿಡುತ್ತಿದ್ದಾರೆ. ಮೊಬೈಲ್ ಬಳಕೆಯನ್ನು ನಿಯಂತ್ರಿಸಿ ಕ್ರೀಡೆ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರು, ಪೋಷಕರು ಹಾಗೂ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಶ್ರೀನಿವಾಸ್ ಮಾತನಾಡಿ, ಶಾಲೆಯ ಅಭಿವೃದ್ಧಿಗೆ ಗ್ರಾಮಸ್ಥರು ಹಾಗೂ ಯುವಕರು ಸಕ್ರಿಯವಾಗಿ ಕೈಜೋಡಿಸಿದರೆ ಸರ್ಕಾರಿ ಶಾಲೆಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯ. ಹಳೇರಿತ್ತಿ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿರುವುದು ಸಾಮಾನ್ಯ ಸಾಧನೆಯಲ್ಲ. ದೈಹಿಕ ಶಿಕ್ಷಕರ ಪರಿಶ್ರಮ ಹಾಗೂ ಗ್ರಾಮಸ್ಥರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದರು.
ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವ ಮನೋಭಾವ ಮುಖ್ಯ. ಮುಂದಿನ ದಿನಗಳಲ್ಲಿ ರಾಮನಗರದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಉತ್ತಮ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಕಳುಹಿಸುವಂತೆ ಕರೆ ನೀಡಿದರು. “ಆಟದಲ್ಲಿ ವಿದ್ಯಾರ್ಥಿಗಳು ಗೆಲ್ಲುವುದಕ್ಕಿಂತ ಆಟವೇ ಗೆಲ್ಲಬೇಕು” ಎಂಬ ಸಂದೇಶ ನೀಡಿದರು.
ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್.ಟಿ. ಗವಂತಗೌಡ್ರ ಮಾತನಾಡಿ, ನಗರ ಪ್ರದೇಶದ ಶಾಲೆಗಳ ಮಕ್ಕಳಿಗೆ ಸರಿಸಾಟಿಯಾಗಿ ಗ್ರಾಮೀಣ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಹಳೇರಿತ್ತಿ ಶಾಲೆಯಲ್ಲಿ ಟೇಬಲ್ ಟೆನ್ನಿಸ್ ಕ್ರೀಡೆಯನ್ನು ಪರಿಚಯಿಸಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವಲ್ಲಿ ದೈಹಿಕ ಶಿಕ್ಷಕರ ಪರಿಶ್ರಮ ಶ್ಲಾಘನೀಯ ಎಂದರು.
ಕ್ರೀಡೆಯಲ್ಲಿ ಮಕ್ಕಳ ಸಾಧನೆ: ಜಿಲ್ಲಾ ಮಟ್ಟದ ಬಾಲಕರ 14 ಮತ್ತು 17 ವಯೋಮಿತಿಯೊಳಗಿನ ಟೆಬಲ್ ಟನ್ನಿಸ್ ಕ್ರೀಡೆಯಲ್ಲಿ ತಾಲೂಕಿನ ಗಾಂಧಿ ಗ್ರಾಮೀಣ ಗುರುಕುಲ ಹೊಸರಿತ್ತಿ ಶಾಲೆಯ ಮಕ್ಕಳು ಪ್ರಥಮಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಬಾಲಕಿಯರ 14 ಮತ್ತು 17 ವಯೋಮಿತಿಯೊಳಗಿನ ಟೆಬಲ್ ಟನ್ನಿಸ್ ಕ್ರೀಡೆಯಲ್ಲಿ ತಾಲೂಕಿನ ಹಳೇರಿತ್ತಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಡ ಶಾಲೆಯ ಮಕ್ಕಳು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ಕಾರ್ಯಕ್ರಮದಲ್ಲಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ್ ಕರಿಗಾರ, ಎಸ್.ವಿ.ಹಿರೇಮಠ, ತಾಲೂಕು ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿನಾಯಕ ಗಡ್ಡದ, ಎಸ್.ಟಿ. ಬರಮಗೌಡ್ರ, ಶಿವಾನಂದ ಕಮತರ, ರಾಮಚಂದ್ರ, ಮಾರುತಿ ದೇವಿಹೊಸೂರು, ಮಂಜುನಾಥ ಪ್ಯಾಟಿ, ಎಂ.ಎಫ್.ಭಗವಂತಗೌಡ್ರ, ಹೊಸರಿತ್ತಿ ಕ್ಲಸ್ಟರ್‌ನ ಸಿಆರ್‌ಪಿ ಶಂಭು ದೇಶಳ್ಳಿ, ನಳಿನಾ ಕೆ.ಎಸ್., ವಿವಿಧ ಶಾಲೆಯ ದೈಕಕ ಶಿಕ್ಷಕರು, ಶಾಲೆಯ ಎಸ್‌ಡಿಎಂಸಿ ಸದಸ್ಯರು ಸೇರಿದಂತೆ ಶಿಕ್ಷಕರು, ಕ್ರೀಡಾಪಟುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 