ಶಿಕ್ಷಣದಷ್ಟೇ ದೈಹಿಕ ಶಿಕ್ಷಣ, ಕ್ರೀಡೆಗೂ ಮಹತ್ವ ನೀಡಿ: ಎಸ್ಪಿ ನಿಂಬರಗಿ

ಶಿಕ್ಷಣದಷ್ಟೇ ದೈಹಿಕ ಶಿಕ್ಷಣ, ಕ್ರೀಡೆಗೂ ಮಹತ್ವ ನೀಡಿ: ಎಸ್ಪಿ ನಿಂಬರಗಿ  Give as much importance to physical education and sports as to academics: SP Nimbaragi


ವಿಜಯಪುರ 16: ಶಿಕ್ಷಣಕ್ಕೆ ನೀಡುವಷ್ಟೇ ಮಹತ್ವವನ್ನು ದೈಹಿಕ ಶಿಕ್ಷಣ ಮತ್ತು ಕ್ರೀಡೆಗೂ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.  ಬುಧವಾರ ನಗರದ ಬಿ.ಎಲ್‌.ಡಿ.ಇ ಸಂಸ್ಥೆಯ ಶ್ರೀ ಬಿ.ಎಂ. ಪಾಟೀಲ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕಲಬುರಗಿ ವಿಭಾಗೀಯ ಪುರುಷರ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಕ್ರೀಡೆಯಲ್ಲಿ ಗೆಲುವು-ಸೋಲು ಸಹಜ. ಪ್ರತಿಯೊಂದು ಪಂದ್ಯವೂ ವಿದ್ಯಾರ್ಥಿಗಳಿಗೆ ಹೊಸ ಅನುಭವ ಹಾಗೂ ಕಲಿಕೆಯನ್ನು ನೀಡುತ್ತದೆ. ಗೆಲುವನ್ನು ವಿನಯದಿಂದ ಸ್ವೀಕರಿಸುವುದು, ಸೋಲಿನಿಂದ ಪಾಠ ಕಲಿತು ಮತ್ತೆ ಪ್ರಯತ್ನಿಸುವುದು ಹಾಗೂ ತಂಡದ ಸಹ ಆಟಗಾರರೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುವ ಗುಣಗಳನ್ನು ಕ್ರೀಡೆ ಬೆಳೆಸುತ್ತದೆ. ಈ ಗುಣಗಳು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೃತ್ತಿಜೀವನದಲ್ಲಿಯೂ ಸಹಕಾರಿಯಾಗುತ್ತವೆ ಎಂದರು.  

ದೇಶಿ ಕ್ರೀಡೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಅಗತ್ಯವಿದೆ. ಕಬಡ್ಡಿಯಂತಹ ದೇಶಿ ಕ್ರೀಡೆಗಳು ದೈಹಿಕ ಸಾಮರ್ಥ್ಯದ ಜೊತೆಗೆ ಏಕಾಗ್ರತೆ, ವೇಗ, ತಂತ್ರಗಾರಿಕೆ ಹಾಗೂ ತಂಡದ ಸಹಕಾರದ ಗುಣಗಳನ್ನು ಬೆಳೆಸುತ್ತವೆ. ವಿದ್ಯಾರ್ಥಿಗಳು ಇಂತಹ ಕ್ರೀಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಕ್ರೀಡಾ ಸಂಸ್ಕೃತಿಯನ್ನು ಬಲಪಡಿಸಬೇಕು ಎಂದು ಹೇಳಿದರು.  

140 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿರುವುದು ವಿಷಾದನೀಯ. ವಿದ್ಯಾರ್ಥಿಗಳು ಮೊಬೈಲ್ ಹಾಗೂ ಇತರ ಚಟುವಟಿಕೆಗಳಿಗೆ ಸೀಮಿತವಾಗದೆ ದೈಹಿಕ ಚಟುವಟಿಕೆ ಮತ್ತು ಕ್ರೀಡೆಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಳ್ಳಬೇಕು. ನಿಯಮಿತ ಕ್ರೀಡಾಭ್ಯಾಸವು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಉಲ್ಲಾಸಕ್ಕೂ ಸಹಕಾರಿಯಾಗಿದೆ ಎಂದರು.