ಸ್ವಾತಂತ್ರ್ಯ ಹೋರಾಟಕ್ಕೆ ಗದಗ ಜಿಲ್ಲೆಯ ಕೊಡುಗೆ ಮಹತ್ವದ್ದು

ಸ್ವಾತಂತ್ರ್ಯ ಹೋರಾಟಕ್ಕೆ ಗದಗ ಜಿಲ್ಲೆಯ ಕೊಡುಗೆ ಮಹತ್ವದ್ದು Gadag district's contribution to the freedom struggle is significant

ಲೋಕದರ್ಶನ ವರದಿ  

ಗದಗ, ಆಗಸ್ಟ್‌ 14: ಉತ್ತರ ಕರ್ನಾಟಕದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಳಲ್ಲಿ ಗದಗ ಜಿಲ್ಲೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸಿಪಾಯಿ ದಂಗೆಯ ಕಾಲದಲ್ಲಿಯೇ ಜಿಲ್ಲೆಯ ಮುಂಡರಗಿ ಭೀಮರಾಯ, ನರಗುಂದದ ಬಾಬಾಸಾಹೇಬ ಹಾಗೂ ಶಿರಹಟ್ಟಿಯ ಕೆಂಚನಗೌಡ ಸೇರಿದಂತೆ ಹಲವು ಹೋರಾಟಗಾರರು ಬ್ರಿಟಿಷರ ವಿರುದ್ಧ ಹೋರಾಡಿ ಪ್ರತಿರೋಧದ ಕಿಚ್ಚು ಹಚ್ಚಿದ್ದರು ಎಂದು ಮಹಾತ್ಮ ಗಾಂಧಿ ಕರ್ನಾಟಕ ರಾಜ್ಯ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅಮರೇಶ್ ಯತಗಲ್ ಹೇಳಿದರು.  

ನಗರದ ಕೆ.ಎಲ್‌.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪತ್ರಿಕಾಗಾರ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ ‘ಮುಂಬೈ ಕರ್ನಾಟಕದ ಮೇಲೆ ವಸಾಹತುಶಾಹಿಯ ಪ್ರಭಾವ ಮತ್ತು ಪರಿಣಾಮ’ ವಿಷಯದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.  

ಬ್ರಿಟಿಷರ ಆಳ್ವಿಕೆ ಭಾರತದಲ್ಲಿ ಮಿಶ್ರ ಪರಿಣಾಮಗಳನ್ನು ಉಂಟುಮಾಡಿತು. ಒಂದು ಕಡೆ ಶೋಷಣೆ ಮತ್ತು ದಬ್ಬಾಳಿಕೆ ನಡೆದರೆ, ಮತ್ತೊಂದೆಡೆ ಕೆಲವು ಆಡಳಿತಾತ್ಮಕ ಹಾಗೂ ಸಾಮಾಜಿಕ ಬದಲಾವಣೆಗಳಿಗೂ ಕಾರಣವಾಯಿತು. ಕರ್ನಾಟಕ ಏಕೀಕರಣದ ಮಹತ್ವದ ಕಾರ್ಯದಲ್ಲಿ ನಾಡಿನ ವಿವಿಧ ಭಾಗಗಳ ಹೋರಾಟಗಾರರು ಭಾಗವಹಿಸಿದ್ದರು. ಮುಂಚೂಣಿ ನಾಯಕತ್ವ ಹಾಗೂ ಆರಂಭಿಕ ಹೋರಾಟದಲ್ಲಿ ಮುಂಬೈ ಕರ್ನಾಟಕದ ನಾಯಕರು ಮತ್ತು ಸಂಘ-ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಿದ್ದವು ಎಂದರು.  

ವಸಾಹತುಶಾಹಿ ಕಾಲಘಟ್ಟದಲ್ಲಿ ಗದುಗಿನ ನೆಲ ಹೊಸ ಹೋರಾಟಗಳು ಹಾಗೂ ಚಳವಳಿಗಳ ಕೇಂದ್ರವಾಗಿತ್ತು. ಇಲ್ಲಿನ ವೀರನಾರಾಯಣ ದೇವಸ್ಥಾನದಲ್ಲಿ ಕೀರ್ತನೆ, ಹಾಡು-ಭಜನೆಗಳ ಮೂಲಕ ರಾಷ್ಟ್ರೀಯತೆಯ ಜಾಗೃತಿ ಮೂಡಿಸುವ ಕಾರ್ಯ ನಡೆದಿತ್ತು. ಬ್ರಿಟಿಷರ ಪರವಾಗಿದ್ದ ಭಾರತೀಯರು ಹಾಗೂ ಅವರ ಮನಸ್ಥಿತಿಯ ಕುರಿತು ವಿಶೇಷ ಅಧ್ಯಯನ ನಡೆಯಬೇಕಿದೆ ಎಂದು ಹೇಳಿದರು.  

ವಿಚಾರ ಸಂಕಿರಣದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕಿ ಡಾ. ಶೀಲಾಧರ ಮುಗಳಿ ಮಾತನಾಡಿ, ಬ್ರಿಟಿಷರ ವಸಾಹತುಶಾಹಿ ಆಳ್ವಿಕೆಯ ಅವಧಿಯಲ್ಲಿ ಬಾಂಬೆ ಕರ್ನಾಟಕದಲ್ಲಿ ಹಲವು ಸಾಮಾಜಿಕ ಬದಲಾವಣೆಗಳು ಆರಂಭವಾದವು. ಜಾತೀಯತೆ, ಅಸ್ಪೃಶ್ಯತೆ, ಅಂಧಶ್ರದ್ಧೆ, ಮೂಢನಂಬಿಕೆ, ಅಜ್ಞಾನ, ಮಹಿಳೆಯರ ಮೇಲಿನ ಅನ್ಯಾಯ ಹಾಗೂ ಹಿಂದುಳಿದ ವರ್ಗಗಳ ಶೋಷಣೆ ನಿವಾರಣೆಗೆ ಅನೇಕ ಸುಧಾರಣಾ ಚಳವಳಿಗಳು ಹುಟ್ಟಿಕೊಂಡವು ಎಂದರು.  

ಪ್ರಾರ್ಥನಾ ಸಮಾಜ, ಆರ್ಯ ಸಮಾಜ ಹಾಗೂ ಲಿಂಗಾಯತ ಮಠಗಳು ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣೆಯಲ್ಲಿ ಮುಂಚೂಣಿಯಲ್ಲಿದ್ದವು. ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಶಾಹು ಮಹಾರಾಜ, ಡಾ. ಬಿ.ಆರ್‌. ಅಂಬೇಡ್ಕರ್, ದಯಾನಂದ ಸರಸ್ವತಿ ಸೇರಿದಂತೆ ಹಲವು ಸಮಾಜ ಸುಧಾರಕರ ಪ್ರೇರಣೆಯಿಂದ ಅಸ್ಪೃಶ್ಯತೆ ನಿವಾರಣೆ, ಮಹಿಳಾ ಶಿಕ್ಷಣ, ವಿಧವಾ ಮರುವಿವಾಹ ಹಾಗೂ ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಹೋರಾಟಗಳು ನಡೆದವು. ಈ ಸಾಮಾಜಿಕ ಜಾಗೃತಿಯು ರಾಷ್ಟ್ರೀಯ ಚಳವಳಿಗೆ ಬಲ ನೀಡಿತು ಎಂದು ಹೇಳಿದರು.  

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಡಾ. ವೆಂಕಟರಾವ್ ಫಳಟೆ ಮಾತನಾಡಿ, ವಸಾಹತುಶಾಹಿತ್ವವೆಂದರೆ ಒಂದು ದೇಶವು ಮತ್ತೊಂದು ದೇಶದ ಜನರು ಹಾಗೂ ಭೂಪ್ರದೇಶವನ್ನು ತನ್ನ ಅಧೀನ ಆಡಳಿತಕ್ಕೆ ಒಳಪಡಿಸುವ ವ್ಯವಸ್ಥೆ. ದಬ್ಬಾಳಿಕೆ, ಶೋಷಣೆ ಹಾಗೂ ಸಂಪನ್ಮೂಲಗಳ ನಿಯಂತ್ರಣ ವಸಾಹತುಶಾಹಿ ವ್ಯವಸ್ಥೆಯ ಪ್ರಮುಖ ಲಕ್ಷಣಗಳಾಗಿವೆ ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಸ್ಥಳೀಯ ಆಡಳಿತ ಮಂಡಳಿ ಅಧ್ಯಕ್ಷೆ ಶ್ರೀಮತಿ ರಜನಿ ಪಾಟೀಲ ಮಾತನಾಡಿ, ಮುಂಬೈ ಕರ್ನಾಟಕದ ಇತಿಹಾಸದ ಪುಟಗಳನ್ನು ತಿರುವಿದಾಗ ಕನ್ನಡಿಗರ ಸಾಧನೆಗಳಿಗೆ ಮಹತ್ವದ ಸ್ಥಾನವಿದೆ. ಈ ಪ್ರದೇಶದ ರೋಚಕ ಇತಿಹಾಸವನ್ನು ತಿಳಿಯಲು ಇಂತಹ ವಿಚಾರ ಸಂಕಿರಣಗಳು ಸಹಕಾರಿಯಾಗುತ್ತವೆ ಎಂದರು.  

ವಿಚಾರ ಸಂಕಿರಣದ ತಾಂತ್ರಿಕ ಗೋಷ್ಠಿಗಳಲ್ಲಿ ಡಾ. ರಮೇಶ್ ನಾಯಕ್, ಪ್ರಾಧ್ಯಾಪಕರು, ಕನ್ನಡ ವಿಶ್ವವಿದ್ಯಾಲಯ ಹಂಪಿ, ಡಾ. ಎಲ್‌.ಪಿ. ಮಾರುತಿ, ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ ಸೇರಿದಂತೆ ಹಲವು ತಜ್ಞರು ಭಾಗವಹಿಸಿದ್ದರು. ಡಾ. ಸದಾನಂದ ನೆಲ್ಕುದ್ರಿ ಪತ್ರಿಕೋದ್ಯಮ ಹಾಗೂ ಗೆಜೆಟಿಯರ್ ಇಲಾಖೆಯ ಕುರಿತು ಮಾಹಿತಿ ನೀಡಿದರು. ಪ್ರೊ. ವೀಣಾ ತಿರ್ಲಾಪುರ ಹಾಗೂ ಡಾ. ರಾಮಚಂದ್ರ ಪಡೇಸೂರ ವಿಷಯ ಮಂಡಿಸಿದರು.  

ಕು. ಸ್ನೇಹಾ ತಳವಾರ ಪ್ರಾರ್ಥಿಸಿದರು. ಪ್ರಾಚಾರ್ಯ ಡಾ. ಎ.ಕೆ. ಮಠ ಸ್ವಾಗತಿಸಿದರು. ಡಾ. ವಿಠ್ಠಲ ಕೋಳಿ ಅತಿಥಿಗಳನ್ನು ಪರಿಚಯಿಸಿದರು. ಡಾ. ವೀಣಾ ವಂದಿಸಿದರು. ರಾಜ್ಯ ಹಾಗೂ ರಾಷ್ಟ್ರದ ವಿವಿಧ ಭಾಗಗಳಿಂದ ಸಂಶೋಧಕರು ಮತ್ತು ಪ್ರಬಂಧ ಮಂಡನಕಾರರು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.