ಹಾವೇರಿ ವಿವಿ ಅಥ್ಲೆಟಿಕ್‌ನಲ್ಲಿ ಜಿ. ಎಚ್. ಕಾಲೇಜ್ ಚಾಂಪಿಯನ್
ಹಾವೇರಿ 19: ಹಾವೇರಿ ವಿಶ್ವವಿದ್ಯಾಲಯವು ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಅಂತರ್ ಕಾಲೇಜು ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪುರುಷ ಮತ್ತು ಮಹಿಳಾ ತಂಡಗಳ ಗುಂಪು ಜನರಲ್ ಚಾಂಪಿಯನ್‌ಶಿಫ್ ಪಡೆದುಕೊಂಡಿದ್ದು ಬಿಎ ಅಂತಿಮ ವರ್ಷದ ಆನಂದ್ ಎಚ್. ಉತ್ತಮ ಅಥ್ಲೀಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಒಟ್ಟು 77 ಜನ ಕ್ರೀಡಾಳುಗಳು ಕಾಲೇಜಿನಿಂದ ಭಾಗವಹಿಸಿದ್ದು ಆಲ್ ಇಂಡಿಯಾ ಇಂಟರ್‌ನ್ಯಾಷನಲ್ ಯುನಿವರ್ಸಿಟಿಯ ಟೂರ್ನಾಮೆಂಟ್‌ಗೆ ಆನಂದ ಎಚ್. ಮತ್ತು ಸುರೇಶ್ ಎನ್. ಜಿ. ಆಯ್ಕೆಗೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ವಿಜೇತ ಕ್ರೀಡಾಳುಗಳಿಗೆ ಬೆಳಗಾವಿ ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆಯವರು, ಕೆ.ಎಲ್.ಇ. ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಎಂ. ಸಿ. ಕೊಳ್ಳಿಯವರು, ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಡಾ. ಎಸ್. ಎಲ್. ಬಾಲೇಹೊಸೂರವರು ಹಾಗೂ ಸ್ಥಾನಿಕ ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯರು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಪ್ರಕಟಣೆಯ ಮೂಲಕ ಅಭಿನಂದಿಸಿದ್ದಾರೆ. ವಿಜೇತ ತಂಡಕ್ಕೆ ಮಾರ್ಗದರ್ಶಕರಾಗಿ ದೈಹಿಕ ಶಿಕ್ಷಣ ನಿರ್ದೇಶಕರಾದ ಪೂಜಾ ಎಂ. ಮತ್ತು ಶ್ರೀಕಾಂತ್ ಜಿ. ಕಾರ್ಯ ನಿರ್ವಹಿಸಿದ್ದರು.